ಪ್ರಕೃತಿಗೆ ಕಡಿವಾಣ ಹಾಕಲು ಸಾಧ್ಯವೇ? : ಡಿಸಿಎಂ ಡಿ.ಕೆ. ಶಿವಕುಮಾರ್

ಪ್ರಕೃತಿಗೆ ಕಡಿವಾಣ ಹಾಕಲು ಸಾಧ್ಯವೇ? : ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು : “ಬೆಂಗಳೂರಿನಲ್ಲಿ ಅನಿರೀಕ್ಷಿತವಾಗಿ ಸುರಿಯುತ್ತಿರುವ ಭಾರಿ ಮಳೆಯನ್ನು ನಿಭಾಯಿಸಲು ಸರ್ಕಾರ ಸಮರ್ಥವಾಗಿದೆ. ಪ್ರಕೃತಿಗೆ ಕಡಿವಾಣ ಹಾಕಲು ಸಾಧ್ಯವೇ? ಚಂಡಮಾರುತ ತಡೆಯಲು ಸಾಧ್ಯವೇ? ಇದನ್ನು ಅರ್ಥ ಮಾಡಿಕೊಳ್ಳದ ವಿರೋಧ ಪಕ್ಷಗಳು ರಾಜ್ಯದ ಮಾನ ಹರಾಜು ಹಾಕುವುದನ್ನು ನಿಲ್ಲಿಸಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು.

ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಮಳೆ ಬಗ್ಗೆ ಕೇಳಿದಾಗ, “ಬೆಂಗಳೂರಿನಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಹಿನ್ನೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗೆ ರಜೆ ನೀಡಲಾಗಿದೆ. ಇಂದು (ಬುಧವಾರ) ಕೂಡ ಮಳೆ ಸಾಧ್ಯತೆ ಇದೆ, ಸಂಚಾರ ದಟ್ಟಣೆಯಾಗಲಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು” ಎಂದು ತಿಳಿಸಿದರು.

“ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆ ಕಾರ್ಯಕ್ರಮದಿಂದ ಮರಳಿದ ನಂತರ ಇಂದು ಸಂಜೆ ಪೊಲೀಸ್ ಇಲಾಖೆ, ಬಿಬಿಎಂಪಿ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳ ಜತೆ ಮತ್ತೊಂದು ಸುತ್ತಿನ ಸಭೆ ನಡೆಸಿ ಪರಿಸ್ಥಿತಿ ಅವಲೋಕನ ಮಾಡುತ್ತೇನೆ” ಎಂದು ತಿಳಿಸಿದರು.

“ವಿರೋಧ ಪಕ್ಷಗಳ ನಾಯಕರ ಟ್ವೀಟ್ ಗಳನ್ನು ನೋಡಿದೆ. ಪ್ರಕೃತಿಗೆ ನಾವು ಕಡಿವಾಣ ಹಾಕಿ ಬುದ್ದಿಹೇಳಲು ಸಾಧ್ಯವೇ? ಚಂಡಮಾರುತದ ಪರಿಣಾಮದಿಂದ ಅನಿರೀಕ್ಷಿತವಾಗಿ ಮಳೆ ಸುರಿದಿದ್ದು, ಇನ್ನು ಹೆಚ್ಚಿನ ಮಳೆ ಬಂದರೂ ಅದನ್ನು ನಿಭಾಯಿಸಲು ಸರ್ಕಾರ ಹಾಗೂ ಜನರು ಸಮರ್ಥರಿದ್ದೇವೆ” ಎಂದು ತಿಳಿಸಿದರು.

Leave a Reply

Your email address will not be published. Required fields are marked *