ಬಹಳಷ್ಟು ಜನರು ಈ ವಿಟಮಿನ್ ಅಂಶಗಳನ್ನು ಕಡೆಗಣಿಸುತ್ತಾರೆ. ಆದರೆ ನಾವು ಇಂದು ಗಟ್ಟಿ ಆಹಾರ ಪದಾರ್ಥಗಳನ್ನು ತಿನ್ನಲು, ಎಲ್ಲಾ ಕಡೆ ಚೆನ್ನಾಗಿ ಓಡಾಡಲು ನಮ್ಮ ಮೂಳೆಗಳ ಹಾಗೂ ಹಲ್ಲುಗಳ ಆರೋಗ್ಯವನ್ನು ಕಾಪಾಡಲು ಈ ವಿಟಮಿನ್ ಅಂಶಗಳು ಬೇಕೇ ಬೇಕು.
ಆರೋಗ್ಯಕರವಾದ ಹಲ್ಲುಗಳು ಕೊನೆವರೆಗೂ ಇರುವುದು ಕಷ್ಟ. ಏಕೆಂದರೆ ಮಧ್ಯದಲ್ಲಿ ಯಾವಾಗ ಬೇಕಾದರೂ ಹಲ್ಲುಗಳ ಹಾಗೂ ವಸಡುಗಳ ಸಮಸ್ಯೆ ಉಂಟಾಗಬಹುದು. ಇದು ನಾವು ಮಾಡುವ ತಪ್ಪಿನಿಂದಲೇ ಆಗಬಹುದು ಅಥವಾ ಅನುವಂಶೀಯವಾಗಿ ಕೂಡ ಸಮಸ್ಯೆ ಎದುರಾಗಬಹುದು. ಆದರೆ ಯಾವಾಗಲೂ ಹಲ್ಲುಗಳು ಮತ್ತು ನಮ್ಮ ಮೂಳೆಗಳು ಚೆನ್ನಾಗಿರಬೇಕು ಮತ್ತು ಸದೃಢವಾಗಿರಬೇಕು ಎಂದರೆ ನಮ್ಮ ಆಹಾರ ಪದ್ಧತಿ ಇದಕ್ಕೆ ಪೂರಕವಾಗಿರಬೇಕು. ನಾವು ಸೇವಿಸುವ ಆಹಾರದಲ್ಲಿ ಹಲ್ಲುಗಳಿಗೆ ಅಗತ್ಯವಾಗಿರುವ ಕೆಲವೊಂದು ವಿಶೇಷ ಬಗೆಯ ವಿಟಮಿನ್ ಅಂಶಗಳು ಸಿಗುವಂತಿರಬೇಕು. ಇಂತಹ ಸಂದರ್ಭದಲ್ಲಿ ಹಲ್ಲುಗಳ ಆರೋಗ್ಯ ಬಹಳ ಚೆನ್ನಾಗಿರುತ್ತದೆ. ಮೂಳೆಗಳ ಆರೋಗ್ಯವನ್ನು ಮತ್ತು ಹಲ್ಲುಗಳ ಸದೃಢತೆಯನ್ನು ಕಾಪಾಡುವ ವಿಟಮಿನ್ ಅಂಶಗಳ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ…..
ನಮ್ಮ ಹಲ್ಲುಗಳ ಎನಾಮಲ್ ರಚನೆಯಲ್ಲಿ ನೆರವಾಗುವ ಕೆರಾಟಿನ್ ಪ್ರೋಟೀನ್ ಉತ್ಪತ್ತಿಯಾಗುವುದು ವಿಟಮಿನ್ ಎ ಕಾರಣದಿಂದ. ಸೂಕ್ಷ್ಮ ಹಲ್ಲುಗಳು ಅಥವಾ ವಸಡುಗಳು ವಿಟಮಿನ್ ಎ ಕೊರತೆಯನ್ನು ಸೂಚಿಸುತ್ತವೆ. ಹಾಗಾಗಿ ವಿಟಮಿನ್ ಎ ಹೆಚ್ಚಾಗಿರುವ ಆಹಾರಗಳನ್ನು ಸೇವಿಸಬೇಕು. ಇದರಿಂದ ಹಲ್ಲುಗಳು ಮಾತ್ರವಲ್ಲದೆ ವಸಡುಗಳ ಕಿರಿಕಿರಿ, ಉರಿಯುತ ಕೂಡ ಕಡಿಮೆಯಾಗುತ್ತದೆ. ವಸಡುಗಳಿಂದ ರಕ್ತಸ್ರಾವ ಉಂಟಾಗುವುದು ತಪ್ಪುತ್ತದೆ.