ರಾಮನಗರ: ‘ಚುನಾವಣಾ ಆಯೋಗವು ನಿಯೋಜಿಸುವ ವೀಕ್ಷಕರು ಆಯೋಗದ ಕಣ್ಣು ಹಾಗೂ ಕಿವಿಗಳಂತೆ ಕೆಲಸ ಮಾಡುತ್ತಾರೆ. ಚುನಾವಣಾ ಪ್ರಕ್ರಿಯೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಕಾಲಕಾಲಕ್ಕೆ ಚುನಾವಣಾ ಆಯೋಗ ಹೊರಡಿಸುವ ಮಾರ್ಗಸೂಚಿಗಳಂತೆ ಕರ್ತವ್ಯ ನಿರ್ವಹಿಸಿ ವರದಿ ನೀಡುತ್ತಾರೆ’ ಎಂದು ಚನ್ನಪಟ್ಟಣ ಉಪ ಚುನಾವಣೆಗೆ ಖರ್ಚು-ವೆಚ್ಚಗಳ ವೀಕ್ಷಕರಾಗಿ ನಿಯೋಜನೆಗೊಂಡಿರುವ ಐಆರ್ಎಸ್ ಅಧಿಕಾರಿ ಪ್ರಶಾಂತ್ ಗಡೇಕರ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚನ್ನಪಟ್ಟಣ ಉಪ ಚುನಾವಣೆಗೆ ಸಂಬಂಧಿಸಿದಂತೆ ಭಾನುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ‘ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಮಾಡುವ ಖರ್ಚು-ವೆಚ್ಚಗಳಿಗೆ ಸಂಬಂಧಿಸಿದಂತೆ ಪ್ರತಿದಿನ ಸಹಾಯಕ ವೆಚ್ಚ ವೀಕ್ಷಕರು ಹಾಗೂ ಅವರ ತಂಡ ನಿಗದಿತ ನಮೂನೆಯಲ್ಲಿ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದರು.
‘ಉಪ ಚುನಾವಣೆಗೆ ನಿಯೋಜಿಸಲಾದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳು ಮುಕ್ತ ಹಾಗೂ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಬೇಕು. ಆಯೋಗದ ನಿರ್ದೇಶನಗಳನ್ನು ಚಾಚು ತಪ್ಪದೆ ಮಾಡಬೇಕು. ನ್ಯಾಯ ಹಾಗೂ ನಿಷ್ಪಕ್ಷಪಾತವಾಗಿ ಚುನಾವಣೆ ಕಾರ್ಯಗಳು ನಡೆಯುವ ನಿಟ್ಟಿನಲ್ಲಿ ಎಲ್ಲರೂ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಅವರು, ಉಪ ಚುನಾವಣೆಗೆ ಜಿಲ್ಲಾಡಳಿತದಿಂದ ಕೈಗೊಳ್ಳಲಾಗಿರುವ ಸಿದ್ದತೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ವಿ. ಸುರೇಶ್ ಅವರು, ಪೊಲೀಸ್ ಇಲಾಖೆಯಿಂದ 276 ಮತಗಟ್ಟೆಯಲ್ಲಿ ಕೈಗೊಂಡಿರುವ ಭದ್ರತೆ, ಮತ ಎಣಿಕೆ ಕೊಠಡಿ ಹಾಗೂ ಚೆಕ್ಪೋಸ್ಟ್ಗಳ ಬಳಿ ಕೈಗೊಂಡಿರುವ ಬಂದೋಬಸ್ತ್ ಕ್ರಮಗಳ ಕುರಿತು ಮಾಹಿತಿ ಹಂಚಿಕೊಂಡರು.
ಕ್ಷೇತ್ರದ ಚುನಾವಣಾಧಿಕಾರಿ ಬಿನೋಯ್ ಅವರು, ಇದುವರೆಗೆ ನಡೆದಿರುವ ಚುನಾವಣಾ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ವಿವಿಧ ತಂಡಗಳ ನೋಡಲ್ ಅಧಿಕಾರಿಗಳು, ಚನ್ನಪಟ್ಟಣದ ಡಿವೈಎಸ್ಪಿ ಗಿರಿ ಹಾಗೂ ಇತರ ಅಧಿಕಾರಿಗಳು ಇದ್ದರು.