ಲೋಕಾಯುಕ್ತ ಅಧಿಕಾರಿಗಳಿಂದ 151 ಪ್ರಕರಣ ಇತ್ಯರ್ಥ

ಲೋಕಾಯುಕ್ತ ಅಧಿಕಾರಿಗಳಿಂದ 151 ಪ್ರಕರಣ ಇತ್ಯರ್ಥ

ತುಮಕೂರು: ಲೋಕಾಯುಕ್ತ ಅಧಿಕಾರಿಗಳು ನಗರದಲ್ಲಿ ಕಳೆದ ಎರಡು ದಿನ ಜನರಿಂದ ಅಹವಾಲು ಸ್ವೀಕರಿಸಿದ್ದು, ಬಾಕಿ ಪ್ರಕರಣ ಸೇರಿ ಒಟ್ಟು 151 ಪ್ರಕರಣ ವಿಲೇವಾರಿ ಮಾಡಿದ್ದಾರೆ.

‘ಇದುವರೆಗೆ ರಾಜ್ಯದ 17 ಜಿಲ್ಲೆಗಳಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ್ದು, ತುಮಕೂರಿನಲ್ಲಿ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿದೆ.

299 ಹೊಸ ಪ್ರಕರಣ ದಾಖಲಾಗಿದ್ದು, ಇದರಲ್ಲಿ 80 ಪ್ರಕರಣ ವಿಲೇವಾರಿಯಾಗಿವೆ. 183 ಬಾಕಿ ಪ್ರಕರಣಗಳ ಪೈಕಿ 71 ಪ್ರಕರಣ ಇತ್ಯರ್ಥವಾಗಿವೆ. ಉಳಿದ ಪ್ರಕರಣ ಒಂದು ತಿಂಗಳಲ್ಲಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಉಪಲೋಕಾಯುಕ್ತ ಬಿ.ವೀರಪ್ಪ ಇಲ್ಲಿ ಭಾನುವಾರ ತಿಳಿಸಿದರು.

ಪ್ರಜಾಪ್ರಭುತ್ವದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜತೆಗೆ ಮಾಧ್ಯಮ ಕ್ಷೇತ್ರವೂ ಬಲಹೀನವಾಗಿದೆ. ಕಾನೂನು ರೂಪಿಸುವವರೂ ಬಲಹೀನರಾಗಿದ್ದಾರೆ. ನಮ್ಮ ಸ್ವಾರ್ಥಕ್ಕೆ ದೇಶ ಬಲಿಯಾಗುತ್ತಿದೆ. ಸ್ವಾತಂತ್ರ್ಯದ ಸಮಯದಲ್ಲಿ ದೇಶದಲ್ಲಿ ಶೇ 95 ರಷ್ಟು ಜನ ಒಳ್ಳೆಯವರಿದ್ದರು. ಈಗ ಶೇ 90 ರಷ್ಟು ಕಳ್ಳರು ಕಾಣಿಸುತ್ತಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಾವು ಸರಿಯಾಗಿದ್ದರೆ, ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಯಾರಿಗೂ ತಲೆ ಬಾಗಬೇಕಿಲ್ಲ. ನಮ್ಮ ಒಳಗೆ ಹುಳುಕು ಇದ್ದರೆ ಏನೂ ಮಾಡಲು ಆಗುವುದಿಲ್ಲ. ಜನರು ಬದಲಾಗಬೇಕು, ಹಣ ಪಡೆದು ಮತ ಹಾಕುವ ವ್ಯವಸ್ಥೆ ಕೊನೆಯಾಗುವ ತನಕ ರಾಷ್ಟ್ರ ಅಭಿವೃದ್ಧಿಯಾಗುವುದಿಲ್ಲ ಎಂದರು.

ಜಿಲ್ಲೆಯಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಅರ್ಜಿ ಸಲ್ಲಿಕೆಯಾಗಿವೆ. ರಾತ್ರಿ 10, 11 ಗಂಟೆಯ ತನಕ ಅರ್ಜಿ ಸ್ವೀಕಾರ ಮಾಡಲಾಗಿದೆ. ಇದರಿಂದ ಜನರಿಗೆ ಅನುಕೂಲವಾಗಿದೆ. ಭ್ರಷ್ಟಾಚಾರ ತೊಲಗಿಸುವುದು ನಮ್ಮ ಧ್ಯೇಯ. ಎಲ್ಲ ಇಲಾಖೆಯ ಅಧಿಕಾರಿಗಳು ಕೈ ಜೋಡಿಸಿದರೆ ಜನರಿಗೆ ಸರ್ಕಾರದ ಸೇವೆ ತಲುಪಿಸಬಹುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ, ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎ.ವಿ.ಲಕ್ಷ್ಮಿನಾರಾಯಣ ಹಾಜರಿದ್ದರು.

ಶಿಸ್ತು ಕ್ರಮದ ಎಚ್ಚರಿಕೆ

ಉಪಲೋಕಾಯುಕ್ತ ಬಿ.ವೀರಪ್ಪ ಭಾನುವಾರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೋಗಿಗಳ ಆರೋಗ್ಯ ವಿಚಾರಿಸಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಸ್ಗರ್ಬೇಗ್ ಅವರಿಂದ ಅಗತ್ಯ ಮಾಹಿತಿ ಪಡೆದರು. ಆಸ್ಪತ್ರೆಗೆ ಬರುವ ರೋಗಿಗಳಿಗೆ ಹೊರಗಡೆಯಿಂದ ಔಷಧಿ ತರಲು ಚೀಟಿ ನೀಡಬಾರದು ಎಂದು ಸೂಚಿಸಿದರು. ಪ್ರಯೋಗಾಲಯದ ಪರೀಕ್ಷೆಗಳನ್ನು ಖಾಸಗಿ ಪ್ರಯೋಗಾಲಯದಲ್ಲಿ ಮಾಡಿಸಲು ನಿರ್ದೇಶಿಸಬಾರದು. ಜಿಲ್ಲಾ ಆಸ್ಪತ್ರೆಯಲ್ಲೇ ಎಲ್ಲ ರೀತಿಯ ಚಿಕಿತ್ಸೆ ಒದಗಿಸಬೇಕು. ತಪ್ಪಿದಲ್ಲಿ ಸಂಬಂಧಪಟ್ಟ ವೈದ್ಯರು ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

Leave a Reply

Your email address will not be published. Required fields are marked *