ಕೃಷಿ ಮೇಳಕ್ಕೆ ಮೆರುಗು ತಂದ ಬೌ ಬೌ ಸದ್ದು

ಕೃಷಿ ಮೇಳಕ್ಕೆ ಮೆರುಗು ತಂದ ಬೌ ಬೌ ಸದ್ದು

ಶಿವಮೊಗ್ಗ: ನವುಲೆಯ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಭಾನುವಾರ ವಿಪರೀತ ಮಳೆಯಿಂದ ಅಸ್ತವ್ಯಸ್ತಗೊಂಡಿದ್ದ ಮೂರನೇ ದಿನದ ಕೃಷಿ ಮತ್ತು ತೋಟಗಾರಿಕೆ ಮೇಳಕ್ಕೆ ಶ್ವಾನ ಮೇಳ ಕಳೆಗಟ್ಟಿತು.

ಮುಂಜಾನೆ ಮಳೆ ಕೊಂಚ ಬಿಡುವು ಕೊಡುತ್ತಿದ್ದಂತೆಯೇ ಮುಖ್ಯ ವೇದಿಕೆಯ ಪಕ್ಕದ ಮೈದಾನದಲ್ಲಿ ಶ್ವಾನಗಳ ಹಾಡುಪಾಡು ಜೀವ ಪಡೆಯಿತು.

ಮಧ್ಯಾಹ್ನದವರೆಗೂ ಕೃಷಿ ಕಾಲೇಜು ಅಂಗಳದಲ್ಲಿ ಬೌ ಬೌ ಸದ್ದು ಅನುರಣಿಸಿತು.

ಶ್ವಾನಮೇಳಕ್ಕೆ ಸಾಕು ನಾಯಿಗಳನ್ನು ಮಾಲೀಕರು ಕಾರು, ಬೈಕ್ಗಳಲ್ಲಿ ಕರೆತಂದಿದ್ದರು. ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ನಾಯಿಗಳನ್ನು ಮುದ್ದಿಸುತ್ತಾ, ಅವುಗಳಿಗೆ ಅಲಂಕಾರ ಮಾಡುತ್ತಾ ಸ್ಪರ್ಧೆಗೆ ಅಣಿಗೊಳಿಸಿದ್ದು ಕಂಡುಬಂದಿತು. ರಚ್ಚೆ ಹಿಡಿದ ಮಕ್ಕಳಂತೆ ಕೆಲವು ನಾಯಿಗಳು ಮೈದಾನದತ್ತ ಬರಲು ಹಿಂದೇಟು ಹಾಕುತ್ತಿದ್ದವು. ಕೊಸರಿದವು.

ಮೈದಾನದಲ್ಲಿ ಮೊದಲ ಬಾರಿಗೆ ಭೇಟಿಯಾದ ಭಿನ್ನ ತಳಿಯ ನಾಯಿಗಳು ಬೊಗಳಿ, ಅರಚಿ ಪರಸ್ಪರರು ತಮ್ಮ ಇರುವಿಕೆ ಖಚಿತಪಡಿಸಿದವು. ಮಾಲೀಕರು ಸಮಾಧಾನ ಮಾಡಿದಷ್ಟು ದನಿ ಜೋರು ಮಾಡುತ್ತಿದ್ದವು.

ದೇಹದಾರ್ಢ್ಯತೆ, ನೀಳ ಕೇಶರಾಶಿ, ಬಣ್ಣದಿಂದ ಕೆಲವು ನಾಯಿಗಳು ಗಮನ ಸೆಳೆದವು. ಅವುಗಳನ್ನು ಶ್ವಾನ ಪ್ರದರ್ಶನದ ವೀಕ್ಷಣೆಗೆ ಬಂದವರು ಮುಟ್ಟಿ ಮುದ್ದಾಡಿದರು. ಆ ನಾಯಿಗಳ ದಿನಚರಿ, ಆಹಾರ, ಸ್ವಭಾವಗಳ ಬಗ್ಗೆ ಮಾಲೀಕರೊಂದಿಗೆ ಮಾಹಿತಿ ಪಡೆದುಕೊಂಡರು. ಕೆಲವರು ಸೆಲ್ಫಿ ತೆಗೆಸಿಕೊಂಡರು. ಬಲಿಷ್ಠತೆ, ದನಿಯಲ್ಲಿನ ಆರ್ಭಟ, ಮುಖ ಗಂಟಿಕ್ಕಿಕೊಂಡು ರೌದ್ರವತೆ ಆವಾಹಿಸಿಕೊಂಡಿದ್ದ ಕೆಲವು ನಾಯಿಗಳನ್ನು ದೂರದಿಂದಲೇ ಕಣ್ತುಂಬಿಕೊಂಡ ಶ್ವಾನಪ್ರಿಯರು, ಅವು ಹತ್ತಿರ ಬರುತ್ತಲೇ ದಾರಿ ಬಿಟ್ಟುಕೊಟ್ಟರು.

ನಿತ್ಯ ಕೃಷಿ ಕಾಲೇಜು ಆವರಣದಲ್ಲಿ ನೆರೆಯುತ್ತಿದ್ದ ಬೀದಿ ನಾಯಿಗಳು, ಹೊರಗಿನಿಂದ ಬಂದಿದ್ದ ಗಣ್ಯ ನಾಯಿಗಳಿಂದ ತಮ್ಮ ಪರಿಸರದಲ್ಲಿ ಆದ ದಿಢೀರ್ ಬದಲಾವಣೆಗೆ ಗೊಂದಲಕ್ಕೀಡಾದಂತೆ ಕಂಡವು. ರಾಜ ಮರ್ಯಾದೆಯಿಂದ ಬೀಗುತ್ತಿದ್ದ ತಮ್ಮದೇ ಸಂತತಿಯ ಕಂಡು ದಿಗಿಲುಗೊಂಡವು. ಮಳೆಯಲ್ಲಿ ನೆನೆದು, ಕೆಸರಲ್ಲಿ ಹೊರಳಾಡಿ, ಅನ್ನದ ನಿರೀಕ್ಷೆಯಲ್ಲಿ ದಿನ ಕಳೆಯುವ ತಮ್ಮ ಸ್ಥಿತಿಯ ನೆನೆದು ಹಳಹಳಿಸಿದವು. ಬೊಗಳಿ, ಅತ್ತಿತ್ತ ಓಡಾಡಿ ಅಸಮಾಧಾನ ತೋಡಿಕೊಂಡವು.

ಶ್ವಾನಪ್ರದರ್ಶನಕ್ಕೆ ಶಿವಮೊಗ್ಗ, ದಾವಣಗೆರೆ, ಹರಿಹರ, ಚಿತ್ರದುರ್ಗ, ಸಾಗರ, ಭದ್ರಾವತಿ, ಶಿಕಾರಿಪುರ, ತುಮಕೂರಿನಿಂದ 30 ನಾಯಿಗಳು ಬಂದಿದ್ದವು. ಅದರಲ್ಲಿ 14 ತಳಿಯ (ಜರ್ಮನ್ ಶೆಪರ್ಡ್, ಬೆಲ್ಜಿಯನ್ ಮೆಲಿನೊವ, ಲ್ಯಾಬ್ರಡಾರ್ ರಿಟ್ರೀವರ್, ಡಾಬರ್ಮನ್, ರಾಟ್ವ್ಹೀಲರ್, ಕ್ಯಾರವಾನ್ ಹೌಂಡ್, ಮುಧೋಳ ಹೌಂಡ್, ಜಾಕ್ ರಸೆಲ್ ಟೆರಿಯರ್, ಫಗ್, ಪಮೇರಿಯನ್, ಗೋಲ್ಡನ್ ರಿಟ್ರೀವರ್, ಶಿಡ್ಜ್, ಬೀಗಲ್, ಮುಧೋಳ) ನಾಯಿಗಳು ಕಾಣಸಿಕ್ಕವು.

ಗಮನ ಸೆಳೆದ ಡಾಗ್ ಶೋ:

ಪ್ರದರ್ಶನ ಆರಂಭದಲ್ಲಿ ಪೊಲೀಸ್ ಶ್ವಾನ ದಳದ ನಾಯಿಗಳಾದ ಹಂಸ, ಝಾನ್ಸಿ, ಜಾಕಿ ಬಾಂಬ್ ಪತ್ತೆ, ವಾಸನೆಯ ಗ್ರಹಿಸಿ ಅಪರಾಧಿಗಳ ಪತ್ತೆ ಕಾರ್ಯ ಪ್ರದರ್ಶಿಸಿ ನೋಡುಗರಿಂದ ಚಪ್ಪಾಳೆ ಗಿಟ್ಟಿಸಿದವು. ನಾಯಿಗಳ ಪಾಲಕರಿಗೆ ತಮ್ಮ ನಿಷ್ಠೆ, ಆದೇಶ ಪಾಲನೆಯಲ್ಲಿ ಭಿನ್ನ ಭಿನ್ನ ದೈಹಿಕ ಕಸರತ್ತುಗಳ ತೋರಿಸಿ ಮೆಚ್ಚುಗೆ ಪಡೆದವು. ಪೊಲೀಸ್ ಶ್ವಾನದಳದ ಉಸ್ತುವಾರಿಗಳಾದ ಲೋಕೇಶ್, ರಾಘವೇಂದ್ರ ನಿರ್ವಹಣೆ ಮಾಡಿದರು. ಕೆಳದಿ ಶಿವಪ್ಪ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಆರ್.ಸಿ.ಜಗದೀಶ್ ಶ್ವಾನ ಪ್ರದರ್ಶನ ಸಂಪೂರ್ಣ ವೀಕ್ಷಣೆ ಮಾಡಿ ಬಹುಮಾನ ವಿತರಿಸಿದರು.

ಶ್ವಾನ ಪ್ರದರ್ಶನದಲ್ಲಿ ಗಮನ ಸೆಳೆದ ನಾಯಿಗಳುಶ್ವಾನ ಮೇಳದಲ್ಲಿ ಮೊದಲ ಬಹುಮಾನ ಶಿವಮೊಗ್ಗದ ಸೂರಜ್ ಅಭಿಷೇಕ್ ಅವರ ‘ಬಾಸ್’ ಹೆಸರಿನ ಜರ್ಮನ್ ಶಫರ್ಡ್ ನಾಯಿಗೆ ಸಂದಿತು. ಸೂರಜ್ ₹8000 ನಗದು ಬಹುಮಾನ ಜೇಬಿಗಿಳಿಸಿಕೊಂಡರು. ಎರಡನೇ ಬಹುಮಾನ ಶಿವಮೊಗ್ಗದ ಬಿ.ಸುಜಯ್ ಅವರ ಡಾಬರ್ಮನ್ ತಳಿಯ ನಾಯಿಗೆ ದೊರೆಯಿತು. ₹5000 ನಗದು ನೀಡಿ ಗೌರವಿಸಲಾಯಿತು. ಮೂರನೇ ಬಹುಮಾನ ಶಿವಮೊಗ್ಗದ ಕೆನಿತ್ ಅವರ ಕ್ಯಾರವಾನ್ ಹೌಂಡ್ ಪಡೆಯಿತು. ₹3000 ನಗದು ಬಹುಮಾನ ಕೊಡಲಾಯಿತು. ಪ್ರದರ್ಶನದಲ್ಲಿ ಪಾಲ್ಗೊಂಡ ಎಲ್ಲ ನಾಯಿಗಳಿಗೂ ಪ್ರಮಾಣಪತ್ರ ಕೊಡಲಾಯಿತು. ತೀರ್ಪುಗಾರರಾಗಿ ಶಿವಮೊಗ್ಗ ಪಾಲಿಕ್ಲಿನಿಕ್ ಉಪನಿರ್ದೇಶಕ ಬಸವೇಶ ಹೂಗಾರ ಪಶು ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಸಾಗರದ ಎನ್.ಎಚ್. ಶ್ರೀಪಾದರಾವ್ ಶಿಕಾರಿಪುರದ ಮುಖ್ಯ ಪಶುವೈದ್ಯಕೀಯ ಅಧಿಕಾರಿ ಡಾ.ಕೆ.ಎಂ.ಸುನಿಲ್ ಕಾರ್ಯನಿರ್ವಹಿಸಿದರು.’ಬಾಸ್’ಗೆ ಮೊದಲ ಬಹುಮಾನದ ಗರಿ!ಶ್ವಾನಪ್ರದರ್ಶನದಲ್ಲಿ ಇಂಗ್ಲೆಂಡ್ನಿಂದ ತರಿಸಿದ್ದ ಜಾಕ್ ರಸೆಲ್ ಟೆರಿಯರ್ ತಳಿಯ ಪುಟ್ಟ ನಾಯಿ ‘ಮೈಲೋ’ ಎಲ್ಲರ ಗಮನ ಸೆಳೆಯಿತು. ಮೈಲೋ ದಾವಣಗೆರೆಯಲ್ಲಿ ನೆಲೆಸಿರುವ ರೈಲ್ವೆ ಎಂಜಿನಿಯರ್ ತೇಜಸ್ವಿ ಇಂದ್ರಾನಾಯ್ಕ ಹಾಗೂ ಸುಭಾಷಿಣಿ ದಂಪತಿ ಕುಟುಂಬದ ಮುದ್ದಿನ ಸದಸ್ಯ. ಶಿವಮೊಗ್ಗದ

ಬ್ರೀಡರ್ ರಾಜೇಶ್ ಎಂಬುವವರ ಮೂಲಕ ಮೈಲೋನನ್ನು ಇಂಗ್ಲೆಂಡ್ನಿಂದ ಖರೀದಿಸಿ ತರಿಸಿರುವುದಾಗಿ ಸುಭಾಷಿಣಿ ಹೇಳಿದರು. ‘ಮೈಲೋ ನಮ್ಮ ಮನೆಗೆ ಬಂದಾಗ 35 ದಿನದ ಮರಿ. ಈಗ ಅವನಿಗೆ 4.5 ವರ್ಷ. ಜೊತೆಗೆ ಐದು ಮಕ್ಕಳ ತಂದೆ. ಮೈಲೋನನ್ನು ನಾಯಿ ಎಂಬಂತೆ ಕಂಡಿಲ್ಲ. ಮನೆಯ ಸದಸ್ಯನಂತೆ ಬೆಳೆಸಿದ್ದೇವೆ. ಇಡೀ ಕರ್ನಾಟಕ ಸುತ್ತಿಸಿದ್ದೇವೆ. ಎಲ್ಲಿಗೇ ಕರೆದೊಯ್ದರೂ ಹವಾನಿಯಂತ್ರಿತ ವಾಹನದಲ್ಲಿ ಕರೆದೊಯ್ಯುತ್ತೇವೆ’ ಎಂದು ಸುಭಾಷಿಣಿ ಶ್ವಾನಪ್ರೀತಿಯ ಬಗ್ಗೆ ಹೇಳಿದರು.ಗಮನ ಸೆಳೆದ ಇಂಗ್ಲೆಂಡ್ ಮೂಲದ ಮೈಲೋಚಿನ್ನಿಕಟ್ಟೆಯ ಕಾರ್ತಿಕ್ ಮುಧೋಳ ತಳಿಯ ನಾಯಿ ಸುಝಿ ಗಮನ ಸೆಳೆಯಿತು. ತುಮಕೂರಿನ ನವೀನ್ ಅವರು ಕರೆತಂದಿದ್ದ ಚೀನಾ ಮೂಲದ ಸಿಟ್ಜೋ ತಳಿಯ ಟೆಡ್ಡಿ ಹೆಸರಿನ ನಾಯಿ ಶಿವಮೊಗ್ಗದ ದರ್ಶನ್ ತಂದಿದ್ದ ಕ್ರೇಜಿ ಹೆಸರಿನ ಜರ್ಮನ್ ಶಫರ್ಡ್ ಶಿವಮೊಗ್ಗದ ರೋಲೆಕ್ಸ್ ಹೆಸರಿನ ಡಾಬರ್ಮನ್ ತಳಿಯ ನಾಯಿ ಗಮನ ಸೆಳೆದವು. ಬೆಲ್ಜಿಯನ್ ಮೆಲಿನೊವ ತಳಿ ವಿಭಾಗದಲ್ಲಿ ಹೊಸನಗರ ತಾಲ್ಲೂಕಿನ ನಗರದಿಂದ ಬಂದಿದ್ದ ರವೀಂದ್ರ ಅವರ ಕರ್ಣ ಹಾಗೂ ಭದ್ರಾವತಿ ತಾಲ್ಲೂಕಿನ ಅರೆಬಿಳಚಿಯ ಮಂಜುನಾಥ್ ಅವರ ಲಕ್ಕಿ ಹೆಸರಿನ ನಾಯಿಗಳು ತಮ್ಮ ವಿಭಾಗದಲ್ಲಿ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದು ಶ್ವಾನಪ್ರಿಯರ ಗಮನ ಸೆಳೆದವು

Leave a Reply

Your email address will not be published. Required fields are marked *