ರಾಜ್ಯದಲ್ಲಿ ಮತ್ತೆ ಮಳೆರಾಯ ಆರ್ಭಟವನ್ನು ಶುರು ಮಾಡಿದ್ದಾನೆ. ಈಗಾಗಲೇ ಬಹುತೇಕ ಜಿಲ್ಲೆಗಳಲ್ಲಿ ದೊಡ್ಡ ದೊಡ್ಡ ಅವಾಂತರಗಳನ್ನೇ ಸೃಷ್ಟಿಸಿದ್ದಾನೆ. ಹಾಗೆಯೇ ಇಂದು (ಅಕ್ಟೋಬರ್ 23) ಕೆಲವೇ ಗಂಟೆಗಳಲ್ಲಿ ಈ ಭಾಗಗಳಲ್ಲಿ ಮಿಂಚು, ಗುಡುಗು ಸಹಿತ ಬಿರುಗಾಳಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆಯಿಂದ ಬಿಸಿಲಿನ ವಾತಾವರಣ ನಿರ್ಮಾಣವಾಗಿದ್ದು, ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈಗಾಗಲೇ ನಗರದಲ್ಲಿ ಮಳೆರಾಯನ ಸೃಷ್ಟಿಸಿದ ಅವಾಂತರ ಚಿಕ್ಕದೇನಲ್ಲ. ಹಲವೆಡೆ ಅಪಾರ್ಟ್ಮೆಂಟ್ಗಳು, ಮನೆಗಳು ಜಲಾವೃತವಾಗಿದ್ದು, ಅಲ್ಲಿನ ನಿವಾಸಿಗಳನ್ನು ರಕ್ಷಣೆ ಮಾಡಲು ರಕ್ಷಣಾ ಪಡೆಗಳು ಮುಂದಾಗಿವೆ. ಮತ್ತೊಂದೆಡೆ ಬೀದಿಬದಿ ವ್ಯಾಪಾರಿಗಳ ಬದುಕು ನೀರಲ್ಲಿ ಹೋಮ ಮಾಡಿದಂತಾಗಿದೆ.
ಅದರಲ್ಲೂ ಇದೀಗ ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು, ವ್ಯಾಪಾರಿಗಳ ಉತ್ತಮ ವ್ಯಾಪಾರಕ್ಕೆ ಇದೇ ಉತ್ತಮ ಸಮಯವಾಗಿದೆ. ಇಂತಹ ಸಂದರ್ಭದಲ್ಲೇ ಮಳೆರಾಯ ವ್ಯಾಪಾರಿಗಳ ಕೈಕಟ್ಟಿಹಾಕಿಬಿಟ್ಟಿದ್ದು, ಅವರ ಜೀವನ ಇದೀಗ ಅಸ್ತವ್ಯಸ್ತವಾದಂತಾಗಿದೆ. ಇನ್ನು ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ.
ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ದಕ್ಷೀನ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಘಾಟ್ಗಳಲ್ಲಿ ವ್ಯಾಪಕವಾಗಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಇನ್ನು ಬೆಂಗಳೂರು ನಗರ ಜಿಲ್ಲೆಯಲ್ಲಿ ಅಕ್ಟೋಬರ್ 15 ರಿಂದ 22, 2024ರ ತನಕ ಬೆಂಗಳೂರು ಸುರಿದ ಒಟ್ಟಾರೆ ಮಳೆ 241 ಮಿಲಿ ಮೀಟರ್ ಆಗಿದೆ. ಇನ್ನು ವಾಡಿಕೆಯಂತೆ ಈ ಅವಧಿಯಲ್ಲಿ 118 ಮಿಲಿ ಮೀಟರ್ ಮಳೆಯಾಗಬೇಕಿತ್ತು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೇಳಿದೆ. ಆದರೆ ಇದಕ್ಕಿಂತ ಹೆಚ್ಚಾಗಿದೆ ಮಳೆ ಸುರಿದಿದೆ. ಅಲ್ಲದೆ ಇಂದು (ಅಕ್ಟೋಬರ್ 23) ಬೆಂಗಳೂರು ನಗರದಲ್ಲಿ ಮಳೆಯಾಗುವ ಮುನ್ಸೂಚನೆ ಇದ್ದು, ಮುಂಜಾಗ್ರತಾ ಕ್ರಮವಾಗಿ ಮಕ್ಕಳ ಹಿತದೃಷ್ಟಿಯಿಂದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮತ್ತೊಂದೆಡೆ ಐಟಿ, ಬಿಟಿ ಕಂಪನಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಆಯ್ಕೆ ನೀಡಬೇಕು ಎಂದು ಸಲಹೆಯನ್ನು ಕೊಡಲಾಗಿದೆ.