ಪಡಿತರದಾರರಿಗೆ ದೀಪಾವಳಿ ಶಾಕ್, ಸರ್ವರ್ ಸಮಸ್ಯೆ ರೇಷನ್ ವಿತರಣೆ ಅನುಮಾನ!

ಪಡಿತರದಾರರಿಗೆ ದೀಪಾವಳಿ ಶಾಕ್, ಸರ್ವರ್ ಸಮಸ್ಯೆ ರೇಷನ್ ವಿತರಣೆ ಅನುಮಾನ!

ಹುಬ್ಬಳ್ಳಿ : ರಾಜ್ಯದಲ್ಲಿ ಜನರು ದೀಪಾವಳಿ ಹಬ್ಬದ ಸಂಭ್ರಮ ಸ್ವಾಗತಿಸಲು ಸಜ್ಜಾಗಿದ್ದಾರೆ. ಅದಕ್ಕಾಗಿ ಅಗತ್ಯ ತಯಾರಿಯಲ್ಲಿ ತೊಡಗಿದ್ದಾರೆ. ಇನ್ನೂ ಬಡವರು ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳಲು ಅನುಕೂಲವಾಗುವಂತೆ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮುಖೇನ ಪಡಿತರ ಅಕ್ಕಿ, ಗೋಧಿ ಇನ್ನಿತರ ಆಹಾರ ಧಾನ್ಯ ವಿತರಿಸುತ್ತದೆ.

ಆದರೆ ಈ ಬಾರಿ ದೀಪಾವಳಿ ಹಬ್ಬಕ್ಕು ಮೊದಲೇ ಪಡಿತರ ವಿತರಣೆಗೆ ತಾಂತ್ರಿಕ ಸಮಸ್ಯೆ ಎದುರಾಗಿದೆ. ಪಡಿತರ ಸಿಗುತ್ತಾ? ಸಿಗಲ್ಲವಾ? ಎಂಬುದೇ ಅನುಮಾನವಾಗಿದೆ.

ಇಲಾಖೆ ವ್ಯಾಪ್ತಿಯ ಹೊಸ ಸರ್ವರ್ ಸಮಸ್ಯೆಯಿಂದ ಫಲಾನುಭವಿಗಳು ಹಾಗೂ ಆಹಾರ ಧಾನ್ಯ ವಿತರಕರು ಪರದಾಡುತ್ತಿದ್ದಾರೆ. ಸರ್ವರ್ ಸಮಸ್ಯೆ ಇನ್ನೇನು ಗಂಟೆಯಲ್ಲಿ ಸರಿಹೋಗುತ್ತದೆ ಕಾದು ಕಾದು ಹೈರಾಣಾಗಿದ್ದಾರೆ. ಇದು ಕೇವಲ ಉತ್ತರ ಕರ್ನಾಟಕ, ಹುಬ್ಬಳ್ಳಿ ಧಾರವಾಡದ ಸಮಸ್ಯೆ ಮಾತ್ರವಲ್ಲ. ಇಡೀ ರಾಜ್ಯದಲ್ಲಿ ಬಹುತೇಕ ಎಲ್ಲ ಕಡೆಗಳಲ್ಲಿ ಈ ಸರ್ವರ್ ಸಮಸ್ಯೆಯಿಂದ ಹೀಗೆ ಆಗಿದೆ.

ಶೇ.5 ರಷ್ಟು ಪಡಿತರ ವಿತರಣೆ ಬಳಿಕ ಸಮಸ್ಯೆ

ಮಾಸಿಕ ವಿತರಣೆಯಂತೆ ಈ ತಿಂಗಳಲ್ಲಿ ಸದ್ಯಕ್ಕೆ ಶೇಕಡಾ 5 ರಷ್ಟು ಕಾರ್ಡ್ಗಳಿಗೆ ಮಾತ್ರ ಪಡಿತರ ವಿತರಣೆ ಆಗಿದೆ. ಉಳಿದ 95ರಷ್ಟು ಪಡಿತರದಾರರು ನಿತ್ಯ ನ್ಯಾಯಬೆಲೆ ಅಂಗಡಿಗಳಿಗೆ ಅಲೆಯುತ್ತಿದ್ದಾರೆ. ಸಮಸ್ಯೆ ಸರಿಹೋಯಿತಾ, ಚೀಲ ತಂದು ಧಾನ್ಯ ಒಯ್ಯಬಹುದಾ ಎಂದು ಕೇಳುತ್ತಲೇ ಇದ್ದಾರೆ.

ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ವಿತರಣೆ ಕಾರ್ಯಕ್ಕೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಹೊಸ ಸರ್ವರ್ ಅಳವಡಿಸಿದೆ. ಇದೀಗ ಸರ್ವರ್ನಲ್ಲಿ ಸಮಸ್ಯೆ ಆಗಿದೆ. ಇದರಿಂದ ಪಡಿತರದಾರರು ಹೈರಾಣಾಗುತ್ತಿದ್ದಾರೆ. ಇಲಾಖೆ ವ್ಯಾಪ್ತಿಯಲ್ಲಿ ಒಂದು ತಾಂತ್ರಿಕ ಸಮಸ್ಯೆ ಪರಿಹಾರವಾಗಲು ಇಷ್ಟು ದಿನ ಬೇಕೆ? ಎಂದು ಜನರು ಬೇಸರ ಜೊತೆ ಜೊತೆಗೆ ಆಕ್ರೋಶವನ್ನೂ ವ್ಯಕ್ತಪಡಿಸುತ್ತಿದ್ದಾರೆ.

ಅಳವಡಿಸಿದ್ದ ಸರ್ವರ್ನಲ್ಲಿ ದೋಷ: ಗ್ರಾಹಕರು-ವಿತರಕರು ಹರಾಣು

ಹಬ್ಬದ ಸಂದರ್ಭಗಳಲ್ಲಿ ದಿನಸಿ ಜೊತೆಗೆ ಆಹಾರ ಧಾನ್ಯಕ್ಕೂ ಹೆಚ್ಚಿನ ಬೇಡಿಕೆ ಇರುತ್ತದೆ. ಈ ಪಡಿತರ ಸಿಕ್ಕರೆ ಹಬ್ಬದಕ್ಕೆ ಅನುಕೂಲವಾಗಲಿದೆ ಎಂದುಕೊಂಡಿದ್ದ ಪಡಿತರದಾರರಿಗೆ ನಿರಾಸೆಯಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ಪಾಯಿಂಟ್ ಆಪ್ ಸೇಲ್ (ಇ-ಪಿಒಎಸ್) ಯಂತ್ರಗಳ ಕಾರ್ಯಾಚರಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಆನ್ಲೈನ್ ವ್ಯವಸ್ಥೆಗೆ ಇಲಾಖೆ ನೂತನ ಸರ್ವರ್ ಅಳವಡಿಸಿದೆ. ಇದರಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಅದು ಇಡೀ ರಾಜ್ಯಾದ್ಯಂತ ಪಡಿತರ ವಿತರಣೆ ವ್ಯವಸ್ಥೆಯ ಮೇಲೆಯೇ ಪರಿಣಾಮ ಬೀರಿದೆ.

ಸಕಾಲಕ್ಕೆ/ದೀಪಾವಳಿಗೆ ಪಡಿತರ ವಿತರಣೆ ಅನುಮಾನ?

ಈ ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಮೊದಲು ಗ್ರಾಹಕರ ಬೆರಳಿನ ಬಯೋಮೆಟ್ರಿಕ್ ಪಡೆಯುತ್ತಿದ್ದಂತೆ ಮೊಬೈಲ್ ಗೆ ಬರುತ್ತಿದ್ದ ಒಟಿಪಿ ಹೇಳಿದರೆ ಚೀಟಿ ಪಡೆದುಕೊಂಡು ಆಹಾರ ಧಾನ್ಯ ಪಡೆಯಲಾಗುತ್ತಿತ್ತು. ಇದೀಗ ಆ ವ್ಯವಸ್ಥೆಯಲ್ಲಿ ಬದಲಾವಣೆಗೆ ಆಗಿದೆ. ಮೊಬೈಲ್ ಒಟಿಪಿ ಸಂಪೂರ್ಣ ಬಂದ್ ಆಗಿದೆ. ಬಯೋಮೆಟ್ರಿಕ್ ಎನ್ಐಸಿಯಿಂದ ಪಡಿತರ ವಿತರಿಸಲಾಗುತ್ತಿದೆ. ಈ ಸಂಬಂಧ ಕರ್ನಾಟಕ ಸ್ಟೇಟ್ ಡಾಟಾ ಸೆಂಟರ್ಗೆ ಅಳವಡಿಸಲಾಗಿದ್ದ ಹೊಸ ಸರ್ವರ್ ನಲ್ಲಿ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ಈ ಬಾರಿ ಸಕಾಲಕ್ಕೆ/ದೀಪಾವಳಿಗೆ ಪಡಿತರ ವಿತರಣೆ ಆಗುವುದು ಅನುಮಾನ ಎಂಬ ಮಾತುಗಳು ಕೇಳಿ ಬಂದಿವೆ.

ಹೆಚ್ಚುತ್ತಿರುವ ಒತ್ತಡ, ಧಾನ್ಯಗಳಿಗಾಗಿ ದಿನವಿಡೀ ಕ್ಯೂ

ಅಕ್ಟೋಬರ್ 17 ರಿಂದ ನೂತನ ವ್ಯವಸ್ಥೆ ಶುರುವಾಗಿದ್ದು, ಏಕಕಾಲಕ್ಕೆ ಎಲ್ಲ ನ್ಯಾಯಬೆಲೆ ಅಂಗಡಿಗಳು ಸೂಚಿತ ದಿನಾಂಕಕ್ಕೆ ತೆರೆದುಕೊಳ್ಳುತ್ತವೆ. ಹೀಗಾಗಿ ಇಲಾಕೆ ವ್ಯಾಪ್ತಿಯ ಸರ್ವರ್ ಮೇಲೆ ಒತ್ತಡ ಉಂಟಾಗುತ್ತದೆ. ಆಗ ತಾಂತ್ರಿಕ ಸಮಸ್ಯೆಗಳು ಕಂಡು ಬರುತ್ತದೆ. ಇಲ್ಲಿ ಸಹ ಅದೇ ರೀತಿ ಆಗಿದೆ. ಆದರೆ ಒಂದು ಸಮಸ್ಯೆ ಪರಿಹಾರವಾಗಲು ಇಷ್ಟೊಂದು ಸಮಯ ಬೇಕೆ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಹೋಗಿ ಬಂದು ಅಧಿಕಾರಿಗಳನ್ನು ಕೇಳುವ ಗ್ರಾಹಕರು ದಿನವಿಡೀ ನ್ಯಾಯಬೆಲೆ ಅಂಗಡಿ ಮುಂದೆ ಕ್ಯೂ ನಿಲ್ಲುವಂತಾಗಿದೆ.

Leave a Reply

Your email address will not be published. Required fields are marked *