ಬೆಂಗಳೂರು : ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕ ಸಂಖ್ಯೆ ಹೆಚ್ಚುತ್ತಿರುವ ಕಾರಣ ಭವಿಷ್ಯದ ದೃಷ್ಟಿಯಿಂದ ಬೆಂಗಳೂರು ಸಮೀಪವೇ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸಲು ಸರ್ಕಾರ ಮುಂದಾಗಿದೆ.
ಈ ಉದ್ದೇಶಿತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹಳೇ ಮೈಸೂರು ಭಾಗದಲ್ಲಿ ಸ್ಥಾಪಿಸುವಂತೆ ಸ್ಥಳೀಯ ಶಾಸಕರೇ ಸರ್ಕಾರದ ಮೇಲೆ ಒತ್ತಡ ತಂದಿದ್ದಾರೆ. ಈ ಮೂಲಕ ಬೆಂಗಳೂರು 2ನೇ ಅಂತಾರಾಷ್ಟ್ರೀಯ ಏರ್ಪೋರ್ಟ್ ವಿಚಾರ ಮತ್ತಷ್ಟು ಮಹತ್ವ ಪಡೆದುಕೊಳ್ಳುತ್ತಿದೆ.
ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Bengaluru 2nd Airport) ನಿಮಾರ್ಣಕ್ಕೆ ಸರ್ಕಾರ, ಸಚಿವರು, ಅಧಿಕಾರಿಗಳು ಜಾಗ ಹುಡುಕುತ್ತಿದ್ದಾರೆ. ಮತ್ತೊಂದು ಅಧಿಕಾರಿಗಳ ಗುಂಪು ಸಮಗ್ರ ಯೋಜನಾ ವರದಿ (DPR) ಸಿದ್ಧಪಡಿಸುತ್ತಿದ್ದಾರೆ. ಈ ಮೊದಲು ಬೆಂಗಳೂರು ತುಮಕೂರು, ಶಿರಾ ಭಾಗದಲ್ಲಿ ನಿರ್ಮಿಸುವಂತೆ ಕೆಲವರು ಆಗ್ರಹಿಸಿದ್ದರು.
ಏರ್ಪೋರ್ಟ್ಗೆ ಹಲವು ಶಾಸಕರಿಂದಲೇ ಪತ್ರ, ಮನವಿ
ಇದೀಗ ಹಳೇ ಮೈಸೂರು ಭಾಗದ ವಾಣಿಜ್ಯ ಕಾರ್ಯ ಚಟುವಟಿಕೆಗೆ ಅನುಕೂಲವಾಗುವಂತೆ ಹೊಸ ವಿಮಾನ ನಿಲ್ದಾಣ ಸ್ಥಾಪಿಸಬೇಕು ಎಂದು ಸ್ವತಃ ಶಾಸಕ ಎಚ್.ಸಿ ಬಾಲಕೃಷ್ಣ, ಎಸ್.ರವಿ, ಉದಯಕುಮಾರ್, ಇಕ್ಬಾಲ್ ಹುಸೇನ್, ಪಿ.ಎಂ. ನರೇಂದ್ರಸ್ವಾಮಿ ಸೇರಿದಂತೆ ಹಳೇ ಮೈಸೂರು ಭಾಗದ ಶಾಸಕರು, ಮುಖಂಡರು ಬೆಂಗಳೂರು ದಕ್ಷಿಣ ಭಾಗಕ್ಕೆ ನಿರ್ಮಾಣ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದು ಕೋರಿದ್ದಾರೆ.
ಇಲ್ಲಿ ನಿರ್ಮಿಸಲು ಕಾರಣಗಳು, ಅನುಕೂಲ
ಬೆಂಗಳೂರು ಹಾಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುತ್ತಿದೆ. ಆದ್ದರಿಂದ ಬೆಂಗಳೂರಿನ ದಕ್ಷಿಣ ಭಾಗಕ್ಕೆ ಏರ್ರ್ಪೋಟ್ ನಿರ್ಮಿಸಬೇಕು. ಏಕೆಂದರೆ ಇಲ್ಲಿ ಮೂಲ ಸೌಕರ್ಯ, ಮೆಟ್ರೋ ರೈಲು ಸಂಪರ್ಕ ಉತ್ತಮವಾಗಿದೆ. ಈ ಬೆಂಗಳೂರು ದಕ್ಷಿಣ ಭಾಗವು ಸಮತಟ್ಟಾಗಿದೆ. ಹಲವು ಜಲಾಶಗಯಳು ಇಲ್ಲಿವೆ. ಉತ್ತಮ ನೀರಿನ ಲಭ್ಯತೆ ಇದೆ. ಬೆಂಗಳೂರು ಸುತ್ತುವರೆದ ನೈಸ್ ರಸ್ತೆಯು ದಕ್ಷಿಣ ಭಾಗದಲ್ಲಿದ್ದು, ಏರ್ಪೋರ್ಟ್ಗೆ ಓಡಾಡುವವರಿಗೆ ಉತ್ತಮ ಸಂಚಾರ ಸೇವೆ ಒದಗಿಸಲಿದೆ. ಅಲ್ಲದೇ ಸಂಚಾರ ದಟ್ಟಣೆ, ಕಿರಿ ಕಿರಿ ತಪ್ಪಿಸಲಿದೆ ಎಂದು ಶಾಸಕರು ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಹಾಗೂ ಸಚಿವ ಎಂಬಿ ಪಾಟೀಲ್ ಅವರಿಗೆ ಬರೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮೈಸೂರು ಎಕ್ಸ್ಪ್ರೆಸ್ ವೇ ಮುಖ್ಯ ಕಾರಣ
ಮುಖ್ಯವಾಗಿ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ ನಿರ್ಮಾಣವಾದ ಬಳಿಕ ಈ ಮಂಡ್ಯ, ಮೈಸೂರು, ರಾಮನಗರ ಭಾಗಗಳಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿವೆ. ಒಂದು ಕಡೆಯಿಂದ ಮತ್ತೊಂದು ನಗರಕ್ಕೆ ಕೆಲವೇ ನಿಮಿಷಗಳಲ್ಲಿ ನೀವು ತಲುಪಲು ಸಾಧ್ಯವಾಗುತ್ತಿದೆ. ಇಲ್ಲೆಲ್ಲ ಮೂಲಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಇಲ್ಲಿಯೇ ಏರ್ಪೋರ್ಟ್ ನಿರ್ಮಾಣವಾದರೆ, ಪ್ರಯಾಣಿಕರಿಗೆ ಹೆಚ್ಚಿನ ಸಾರಿಗೆ ಅನುಕೂಲ ಸಿಗಲಿದೆ ಎಂದು ವಿವರಿಸಲಾಗಿದೆ.
ಶೀಘ್ರವೇ ಶಿಫಾರಸು ಮಾಡಲು ಒತ್ತಾಯ
ಆದ್ದರಿಂದ ಸರ್ಕಾರ, ಸಚಿವರು ಮುಂದಿನ ಸಭೆಯಲ್ಲಿ ಇಲ್ಲಿಯೇ ಜಾಗ ಅಂತಿಮಗೊಳಿಸಿ, ಅನುಮೋದನೆ ಕೊಟ್ಟು ಅದನ್ನು ನಾಗರಿಕ ವಿಮಾನಯಾನ ಪ್ರಾಧಿಕಾರ, ಇನ್ನಿತರ ಸಂಬಂಧಿ ಸಂಸ್ಥೆಗಳಿಗೆ ಶೀಪಾರಸು ಮಾಡಬೇಕು ಎಂದು ಅವರು ಕೇಳಿಕೊಂಡಿದ್ದಾರೆ. ಸದ್ಯ ಈ ಬಗ್ಗೆ ಸರ್ಕಾರ ಯಾವ ತಿರ್ಮಾನ ಕೈಗೊಳ್ಳಲಿದೆಯೇ ಕಾದು ನೋಡಬೇಕು.
ಸರ್ಕಾರ ಗುಡ್ಡ ಬೆಟ್ಟ ಇಲ್ಲದ ಕಡೆ, ರಸ್ತೆ ಮಾರ್ಗ ಸುಸೂತ್ರವಾಗಿರುವ ಬೆಂಗಳೂರಿನ ಸಮೀಪವೇ ಹುಡುಕಾಟ ನಡೆಸಿದೆ. ಈ ಹಿಂದೆ ನೆಲಮಂಗಲ, ತುಮಕೂರು, ರಾಮನಗರ, ಕನಕಪುರ, ಹಾಸನ ರಸ್ತೆ ಕಡೆಗಳಲ್ಲಿ ಒಂದಷ್ಟು ಪ್ರದೇಶಗಳ ಹುಡುಕಾಟದಲ್ಲಿ ಸರ್ಕಾರ ನಿರತವಾಗಿದೆ. 2033ರ ಹೊತ್ತಿಗೆ ವಿಮಾನ ನಿಲ್ದಾಣದ ಒಪ್ಪಂದ ಮುಗಿಯಲಿದೆ. ಅಲ್ಲದೇ ಆ ಹೊತ್ತಿಗೆ ಪ್ರಯಾಣೀಕರ ದಟ್ಟಣೆ ವ್ಯಾಪಕವಾಗಿ ಹೆಚ್ಚಲಿದ್ದು, ದೇವನಹಳ್ಳಿ ಏರ್ಪೋರ್ಟ್ ಮೇಲಿನ ಹೊರೆ ತಪ್ಪಿಸಲು ಸರ್ಕಾರ ಮತ್ತೊಂದು ಬೃಹತ್ ವಿಮಾನ ನಿಲ್ದಾಣ ಸ್ಥಾಪನೆಗೆ ಪ್ಲಾನ್ ಮಾಡಿಕೊಂಡಿದೆ.