ಬೆಂಗಳೂರು: BMTC ಚಾಲಕ ಮತ್ತು ನಿರ್ವಾಹಕರ ಮೇಲೆ ಇಬ್ಬರು ಬೈಕ್ ಸವಾರರು ಹಲ್ಲೆ ನಡೆಸಿರುವ ಘಟನೆ ಟ್ಯಾನರಿ ರಸ್ತೆಯಲ್ಲಿ ಶನಿವಾರ ನಡೆದಿದೆ. ಇದು ಬಿಎಂಟಿಸಿ ಸಿಬ್ಬಂದಿ ಈ ತಿಂಗಳಲ್ಲಿ ನಡೆದ 3ನೇ ಪ್ರಕರಣವಾಗಿದೆ. ಟ್ಯಾನರಿ ರಸ್ತೆಯ ಕೆನರಾ ಬ್ಯಾಕ್ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ.
ಹಲ್ಲೆಯಿಂದ ಗಾಯಗೊಂಡ ಡಿಪೋ ನಂಬರ್ 30ರ ಚಾಲಕ ಗಗನ್ ಹಾಗೂ ಕಂಡಕ್ಟರ್ ಶಿವಕುಮಾರ್ ಅವರನ್ನು ಬೌರಿಂಗ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಸಂಬಂಧ ಡಿ. ಜೆ. ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಸಂಜೆ 5-30ರ ಸುಮಾರಿನಲ್ಲಿ ಯಲಹಂಕದಿಂದ ಶಿವಾಜಿನಗರ ಬಸ್ ನಿಲ್ದಾಣ ಮಾರ್ಗದ ಬಸ್ ಪ್ರಯಾಣಿಕರನ್ನು ಇಳಿಸಲು ಕೆನರಾ ಬ್ಯಾಂಕ್ ನಿಲ್ದಾಣದ ಬಳಿ ನಿಲುಗಡೆ ಮಾಡಿದೆ. ಈ ವೇಳೆ ಮುಂಭಾಗಲಿನಿಂದ ಬಸ್ ಹತ್ತಿದ್ದ ಇಬ್ಬರು ಬೈಕ್ ಸವಾರರು, ಯಾವುದೇ ಪ್ರಚೋದನೆಯಿಲ್ಲದೆ ನಿಂದಿಸಿದ್ದು ಚಾಲಕ ಗಗನ್ ಮೇಲೆ ಹಲ್ಲೆ ನಡೆಸಿದ್ದಾರೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಕಂಡಕ್ಟರ್ ಶಿವಕುಮಾರ್ ಮಧ್ಯಪ್ರವೇಶಿಸಿದ್ದು, ಹಲ್ಲೆಯನ್ನು ಪ್ರಶ್ನಿಸಿದ್ದಾರೆ. ಅವರ ಮೇಲೂ ದುಷ್ಕರ್ಮಿಗಳು ಹಲ್ಲೆ ಮಾಡಿ, ಬಸ್ ನಿಂದ ಹೊರಗೆ ದಬ್ಬಿದ್ದಾರೆ ಎಂದು ಬಿಎಂಟಿಸಿ ಹೇಳಿಕೆಯಲ್ಲಿ ತಿಳಿಸಿದೆ.
ಹಲ್ಲೆ ವೇಳೆ ಚಾಲಕ ಹಾಗೂ ಕಂಡಕ್ಟರ್ ತೀವ್ರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಬೌರಿಂಗ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಗಗನ್ ನೀಡಿದ ದೂರಿನ ಆಧಾರದ ಮೇಲೆ ಡಿಜೆ ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಿಸಿಟಿವಿಯಲ್ಲಿ ಹಲ್ಲೆ ದೃಶ್ಯ ಸೆರೆಯಾಗಿದ್ದು, ಪೊಲೀಸರು ಅದನ್ನು ವಿಶ್ಲೇಷಿಸಿದ್ದಾರೆ. ರೋಡ್ ರೇಜ್ ಘಟನೆಯಿಂದ ಈ ಘಟನೆಯಾಗಿರಬಹುದೆಂದು ಪೊಲೀಸರು ಶಂಕಿಸಿದ್ದು, ನಿಖರ ಕಾರಣ ತಿಳಿಯಲು ತನಿಖೆ ಕೈಗೊಂಡಿದ್ದಾರೆ.