ಸಂಡೂರು: ಗಣಿ ತಾಲ್ಲೂಕು ಸಂಡೂರಿನಲ್ಲಿ ಅದಿರು ಸಾಗಣೆ ಲಾರಿಗಳ ಅಬ್ಬರಕ್ಕೆ ಜನ ಅಕ್ಷರಶಃ ತತ್ತರಿಸಿದ್ದಾರೆ. ನಿತ್ಯವೂ ಭಯದಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಇಲ್ಲಿ ಎದುರಾಗಿದ್ದು, ಸಂಚಾರ ದಟ್ಟಣೆಗೆ ಮಾತ್ರ ಮುಕ್ತಿ ಸಿಕ್ಕಿಲ್ಲ.
ಸಂಡೂರಿನಿಂದ ನಂದಿಹಳ್ಳಿ, ಕುಮಾರಸ್ವಾಮಿ ರಸ್ತೆಯಲ್ಲಿ ನಿತ್ಯ ಆಗುತ್ತಿರುವ ಸಂಚಾರ ದಟ್ಟಣೆಯಿಂದ ಇಲ್ಲಿನ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು, ಕುಮಾರಸ್ವಾಮಿ ದೇವಸ್ಥಾನಕ್ಕೆ ತೆರಳುವ ಭಕ್ತರು, ಅಲ್ಲಿಂದ ದೇವಗಿರಿ, ಸುಬ್ಬರಾಯನಹಳ್ಳಿ ಮತ್ತು ಕಮ್ಮತ್ತೂರು ಗ್ರಾಮಗಳಿಗೆ ತೆರಳುವ ಸಾರ್ವಜನಿಕರ ಗೋಳು ಹೇಳತೀರದು ಎಂಬಂತಿದೆ.
ಸಂಡೂರಿನಿಂದ ಕೂಡ್ಲಿಗಿ ಮಾರ್ಗದಲ್ಲೂ ಇದೇ ಕಥೆ. ಯಶವಂತನಗರದ ಬಳಿಯೂ ಲಾರಿಗಳನ್ನು ದಾಟಿ ಹೋಗಲು ಜನ ಕಷ್ಟಪಡಬೇಕು. ಬಾಬಯ್ಯ ಕ್ರಾಸ್ ಬಳಿಯೂ ಸಾಕಷ್ಟು ಸಂಚಾರದಟ್ಟಣೆ ಉಂಟಾಗಿ ಜನಸಾಮಾನ್ಯರಷ್ಟೇ ಅಲ್ಲ, ಆಂಬ್ಯುಲೆನ್ಸ್ಗಳಿಗೂ ತೊಂದರೆಯಾಗುತ್ತಿದೆ. ಅದಿರು ಉತ್ಪಾದನೆ ಹೆಚ್ಚಳ; ಟ್ರಾಫಿಕ್ ಸಮಸ್ಯೆ ಉಲ್ಭಣ:
ಸಂಡೂರಿನಲ್ಲಿ 30 ಗಣಿಗಳಿವೆ. ಹಿಂದಿಗಿಂತ ಇಂದು ಅದಿರು ಉತ್ಪಾದನೆ ಹೆಚ್ಚಾಗಿದೆ. ವಾರ್ಷಿಕ 32 ದಶಲಕ್ಷ ಟನ್ಗಿಂತ ಹೆಚ್ಚು ಅದಿರನ್ನು ಉತ್ಪಾದಿಸಲಾಗುತ್ತಿದೆ. ಅದಿರು ಸಾಗಿಸುವ ಲಾರಿಗಳ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ರಸ್ತೆಗಳು ಮಾತ್ರ ಅವೇ. ಹೀಗಾಗಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇನ್ನೊಂದೆಡೆ ಐಎಲ್ಎಂಎಸ್ ( ಸಂಯೋಜಿತ ಗುತ್ತಿಗೆ ನಿರ್ವಹಣಾ ವ್ಯವಸ್ಥೆ) ತಂತ್ರಾಂಶದ ಮೂಲಕ ಪರ್ಮಿಟ್ಗಳನ್ನು ತೆಗೆಯಲಾಗುತ್ತಿದ್ದು, ಕೆಲವೊಮ್ಮೆ ನೆಟ್ವರ್ಕ್ ಸಮಸ್ಯೆಯಿಂದ ಪರ್ಮಿಟ್ ನೀಡಲು ವಿಳಂಬವಾಗುತ್ತದೆ. ಪರ್ಮಿಟ್ ವಿತರಿಸಿದ ನಂತರ ಎಲ್ಲಾ ಗಣಿಗಳಿಂದ ಲಾರಿಗಳು ಒಮ್ಮೆಲೆ ರಸ್ತೆಗೆ ಇಳಿದಾಗಲೂ ಸಂಚಾರ ದಟ್ಟಣ ಉಂಟಾಗುತ್ತಿದೆ. ಸಂಚಾರ ನಿಯಂತ್ರಣಕ್ಕಿಲ್ಲ ಸೂಕ್ತ ವ್ಯವಸ್ಥೆ:
ಸಮಸ್ಯೆ ನಿಯಂತ್ರಿಸಬೇಕಿದ್ದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಂತೂ ಇತ್ತ ಸುಳಿಯದೇ ಕೇವಲ ತಾಲ್ಲೂಕು ಮಟ್ಟದ ಸಭೆಗಳಲ್ಲಿ ಮಾತ್ರ ಕಾಣಸಿಗುತ್ತಾರೆ. ಆಯ್ದ ಸ್ಥಳಗಳಲ್ಲಿ ಅವಶ್ಯಕ ಅವಧಿಯಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಸಾರ್ವಜನಿಕರ ಒತ್ತಾಯಕ್ಕೆ ಸ್ಪಂದನೆ ಇಲ್ಲವಾಗಿದೆ. ಜೀವಕ್ಕೆ ಬೆಲೆಯೇ ಇಲ್ಲ!
ಪೊಲೀಸ್ ಇಲಾಖೆ ಮಾಹಿತಿ ಪ್ರಕಾರ ಸಂಡೂರು ವೃತ್ತ ವ್ಯಾಪ್ತಿಯಲ್ಲಿ 2021ರಿಂದ ಇಲ್ಲಿಯವರೆಗೆ 152 ಜನ ಅಪಘಾತದಲ್ಲಿ ಅಸುನೀಗಿದ್ದಾರೆ. ನಂದಿಹಳ್ಳಿ ಬಳಿ ಕೆಲ ವರ್ಷಗಳ ಹಿಂದೆ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದರು. ಆದರೆ ಅಪಘಾತ ನಡೆಸಿದ ವಾಹನ ಯಾವುದೆಂಬ ಸುಳಿವು ಈವರೆಗೆ ಸಿಕ್ಕಿಲ್ಲ. ಬಾಬಯ್ಯ ಕ್ರಾಸ್ ಬಳಿಯೂ ಕೃಷ್ಣಾನಗರ ಗ್ರಾಮದ ಇಬ್ಬರು ಸಹೋದರರು ಮೃಪಟ್ಟಿದ್ದರು. ಇಲ್ಲೂ ಅದೇ ಕಥೆ. ಇದರ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ಪ್ರತ್ಯೇಕ ಕಾರಿಡಾರ್ ಆಗಲಿ
ಗಣಿಗಾರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ಸಾವಿರಾರುವ ಕೋಟಿ ಹಣ ಸಂದಾಯವಾದರೂ ಲಾರಿಗಳ ಓಡಾಟಕ್ಕೆ ಯಾರೂ ಕೂಡಾ ಪರ್ಯಾಯ ರಸ್ತೆ ನಿರ್ಮಿಸಲು ಮುಂದಾಗುತ್ತಿಲ್ಲ ಎಂಬುದು ಕೆಲ ಸಂಘಟನೆಗಳ ಆರೋಪ. ಜನರ ಸಮಸ್ಯೆಯನ್ನು ಗಣಿ ಮಾಲೀಕರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ವಯಂ ಪ್ರೇರೀತರಾಗಿ ಅರಿತು ಪರ್ಯಾಯ ರಸ್ತೆ ನಿರ್ಮಿಸಬೇಕಿತ್ತು. ಆದರೆ ಆಗಿಲ್ಲ. ಕೆಎಂಇಆರ್ಸಿಯಲ್ಲಿ ₹30 ಸಾವಿರ ಕೋಟಿಗೂ ಹೆಚ್ಚು ಹಣವಿದೆ. ಪರ್ಯಾಯ ರಸ್ತೆ ನಿರ್ಮಿಸಿ ಗಣಿ ಲಾರಿಗಳ ಓಡಾಟಕ್ಕೆ ಅನುವು ಮಾಡಿದರೆ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎನ್ನುತ್ತಾರೆ ಜನ ಸಂಗ್ರಾಮ ಪರಿಷತ್ ಮುಖಂಡ ಟಿ.ಎಂ.ಶಿವಕುಮಾರ್.
ಟಿ.ಎಂ ಶಿವಕುಮಾರ್, ಜನಸಂಗ್ರಾಮ ಪರಿಷತ್ ಮುಖಂಡರುಗಣಿಬಾಧಿತ ಅನೇಕ ಹಳ್ಳಿಗಳಲ್ಲೂ ಟ್ರಾಫಿಕ್ ಸಮಸ್ಯೆಯಿಂದ ಜನ ರೋಸಿ ಹೋಗಿದ್ದಾರೆ. ಅದಿರು ಲಾರಿಗಳಿಗಾಗಿ ಪ್ರತ್ಯೇಕ ಕಾರಿಡಾರ್ ಮಾಡುವುದೇ ಪರಿಹಾರ.ಪ್ರಸಾದ್ ಗೋಖಲೆ, ಡಿವೈಎಸ್ಪಿಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಗಣಿ ವ್ಯವಸ್ಥಾಪಕರು ಮತ್ತು ಅದಿರು ಸಾಗಣೆದಾರರ ಸಭೆ ಕರೆದು ಮಾತನಾಡಿದ್ದೇವೆ. ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲಾಗುವುದು. ಸಯ್ಯದ್ ದಾದಾ ಖಲಂದರ್, ವಲಯ ಅರಣ್ಯಾಧಿಕಾರಿಅದಿರು ಸಾಗಣೆ ಪ್ರಮಾಣ ಹೆಚ್ಚಾದ ಕಾರಣಕ್ಕೆ ಲಾರಿಗಳ ಓಡಾಟವೂ ಹೆಚ್ಚಾಗಿದೆ. ಕನ್ವೆಯರ್ ರೈಲುಗಳ ಮೂಲಕ ಅದಿರು ಸಾಗಣೆ ಮಾಡಿದರೂ ಲಾರಿಗಳ ಸಂಖ್ಯೆ ಹೆಚ್ಚಿ ಟ್ರಾಫಿಕ್ ಸಮಸ್ಯೆ ತಲೆದೋರುತ್ತಿದೆ.