ಸರ್ಕಾರ, ವಕ್ಫ್ನಿಂದ ಲ್ಯಾಂಡ್ ಜಿಹಾದ್: ಆರ್.ಅಶೋಕ್ ಆರೋಪ

ಸರ್ಕಾರ, ವಕ್ಫ್ನಿಂದ ಲ್ಯಾಂಡ್ ಜಿಹಾದ್: ಆರ್.ಅಶೋಕ್ ಆರೋಪ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ವಕ್ಫ್ ಬೋರ್ಡ್ನಿಂದ ಲ್ಯಾಂಡ್ ಜಿಹಾದ್ ಆರಂಭವಾಗಿದ್ದು, ಬಡ ರೈತರ ಜಮೀನನ್ನು ಕಬಳಿಸಲು ಎಲ್ಲ ಬಗೆಯ ಪ್ರಯತ್ನ ನಡೆದಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.

ಕೇಂದ್ರದಲ್ಲಿ ಚರ್ಚಿಸಲು ಆಗ್ರಹಆಧುನಿಕ ಟಿಪ್ಪು ಸುಲ್ತಾನ್ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದ ನಂತರ ಇಡೀ ಕರ್ನಾಟಕ ಒಂದೇ ಸಮುದಾಯಕ್ಕೆ ಸೇರಿದ್ದು ಎಂಬಂತೆ ಆಡುತ್ತಿದೆ. ಇದರಿಂದಾಗಿ ರೈತರು, ಹಿಂದುಗಳಲ್ಲಿ ಭಯ ಶುರುವಾಗಿದೆ ಎಂಬ ಕಳವಳ ವ್ಯಕ್ತಪಡಿಸಿದರು.

ವಿಜಯಪುರ ಜಿಲ್ಲೆಯ ರೈತರ ಜಮೀನಿನ ಮಾಲೀಕತ್ವ ವಕ್ಫ್ ಹೆಸರಿನಲ್ಲಿ ದಾಖಲಾಗಿದ್ದರ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡಲೇ ಬಾಯಿಬಿಡಬೇಕು ಎಂದು ಆರ್.ಅಶೋಕ್ ಆಗ್ರಹಿಸಿದರು.

ವಿಜಯಪುರ ಜಿಲ್ಲೆಯ ಹೊನವಾಡ ಗ್ರಾಮದಲ್ಲಿ ಸುಮಾರು 12 ಸಾವಿರ ಹಾಗೂ ಇಡೀ ಜಿಲ್ಲೆಯಲ್ಲಿ ಒಟ್ಟಾರೆ 15 ಸಾವಿರ ಎಕರೆ ಭೂಮಿ ಕಬಳಿಸಲು ವಕ್ಫ್ ಬೋರ್ಡ್ ಯೋಜನೆ ರೂಪಿಸಿದೆ. ಇದಕ್ಕಾಗಿ ಕಂದಾಯ ಇಲಾಖೆಯಿಂದ 139 ರೈತರಿಗೆ ತಿಳಿವಳಿಕೆ ನೋಟಿಸ್ ನೀಡಲಾಗಿದೆ. ಇದು ಸ್ಪಷ್ಟವಾಗಿ ಲ್ಯಾಂಡ್ ಜಿಹಾದ್ ಎಂದು ಆಕ್ರೋಶ ವ್ಯಕ್ತಪಡಿದರು.

ಕಳೆದ ತಿಂಗಳು ವಿಜಯಪುರಕ್ಕೆ ಭೇಟಿ ನೀಡಿದ್ದ ಸಚಿವ ಜಮೀರ್ ಅಹ್ಮದ್, ಗೆಜೆಟ್ ಆಗಿರುವ ಆಸ್ತಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲು ಮೌಖಿಕ ಆದೇಶ ಮಾಡಿದ್ದಾರೆ. ಸರ್ಕಾರದಿಂದಲೇ ಅಧಿಕೃತವಾಗಿ ಒತ್ತುವರಿ ನಡೆಯುತ್ತಿದೆ ಎಂದರು.

ಕೇಂದ್ರದಲ್ಲಿ ಚರ್ಚಿಸಲು ಆಗ್ರಹ ಕೇಂದ್ರದ ಉದ್ದೇಶಿತ ವಕ್ಫ್ ಕಾಯ್ದೆ ತಿದ್ದುಪಡಿ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಕಾಯ್ದೆ ತಿದ್ದುಪಡಿ ಕರಡು ಪರಾಮರ್ಶೆಗೆ ಜಂಟಿ ಸಂಸದೀಯ ಸಮಿತಿ ರಚನೆಯಾಗಿದ್ದು, ಎಲ್ಲ ವಕ್ಫ್ ಆಡಳಿತ ಮಂಡಳಿಗಳಿಂದ ಕೇಂದ್ರ ಸರ್ಕಾರ ಮಾಹಿತಿ ಕೇಳಿದೆ.

ಕರ್ನಾಟಕದ ವಕ್ಫ್ ಬೋರ್ಡ್ ಇದನ್ನು ವಿರೋಧಿಸಿದೆ. ನಾವು ಮಾಹಿತಿ ಕೊಡಲ್ಲ, ನಮ್ಮದು ಸ್ವಾಯತ್ತ ಸಂಸ್ಥೆ ಎಂದು ಸಚಿವ ಜಮೀರ್ ಅಹಮದ್ ಹೇಳಿದ್ದಾರೆ. ರೈತರ ಜಮೀನು ಕಬಳಿಸಲು ರಾಜ್ಯ ಸರ್ಕಾರ ಅವಕಾಶ ಕೊಡುವುದು ಬಿಟ್ಟು, ಜಂಟಿ ಸಂಸದೀಯ ಜತೆಗೆ ಚರ್ಚಿಸಲಿ ಎಂದು ಆರ್.ಅಶೋಕ್ ಆಗ್ರಹಿಸಿದರು.

ಆಧುನಿಕ ಟಿಪ್ಪು ಸುಲ್ತಾನ್

ಈ ಹಿಂದೆ ಟಿಪ್ಪು ಸುಲ್ತಾನ್, ಔರಂಗಜೇಬನಂತಹ ಮತಾಂಧರು ಹಿಂದುಗಳ ಭೂಮಿ, ಉದ್ಯೋಗ, ಬದುಕು ಕಿತ್ತುಕೊಂಡು ಮತಾಂತರ ಮಾಡಿದ್ದರು. ಈಗ ರೈತರ ಭೂಮಿ ಕಿತ್ತುಕೊಳ್ಳಲಾಗುತ್ತಿದೆ ಎಂದು ಆರ್.ಅಶೋಕ್ ದೂರಿದರು.

ಸಚಿವ ಜಮೀರ್ ಅಹ್ಮದ್, ಆಧುನಿಕ ಟಿಪ್ಪು ಸುಲ್ತಾನ್ ಆಗಲು ಹೊರಟಿದ್ದು, ಭೂಮಿ ಕಸಿದು, ಸಿಎಂ ಆಗುವ ಯೋಜನೆ ರೂಪಿಸಿದಂತಿದೆ. ಮುಡಾ, ಸಿಎ ನಿವೇಶನಗಳನ್ನು ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಲೂಟಿ ಮಾಡುತ್ತದೆ ಎಂದು ಆಪಾದಿಸಿದರು.

ಕಾಂಗ್ರೆಸ್ ಸರ್ಕಾರದ ದೌರ್ಜನ್ಯ ವಿರೋಧಿಸಿ ವಿಜಯಪುರದ ರೈತರು ಈ ವರ್ಷ ದೀಪಾವಳಿ ಆಚರಿಸದಿರಲು ನಿರ್ಧರಿಸಿದ್ದಾರೆ. ಅನ್ನ ನೀಡುವ ರೈತರ ಭೂಮಿಗೆ ಕನ್ನ ಹಾಕಿದ ಸರ್ಕಾರಕ್ಕೆ ಅನ್ನದಾತರ ಶಾಪ ತಟ್ಟದೇ ಇರದು ಎಂದು ಆರ್.ಅಶೋಕ್ ಎಚ್ಚರಿಸಿದರು.

Leave a Reply

Your email address will not be published. Required fields are marked *