ಹಾವೇರಿ: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣ ರಂಗೇರಿದೆ. ಚುನಾವಣೆಯ ನಿರ್ಣಾಯಕವಾಗಲಿರುವ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ನಡೆ ಇಂದು ಬಹಿರಂಗವಾಗಲಿದೆ. ಇಂದು ನಾಮಪತ್ರ ವಾಪಸಾತಿಗೆ ಕೊನೆಯ ದಿನವಾಗಿದ್ದು, ಮಧ್ಯಾಹ್ನ 3 ಗಂಟೆ ಒಳಗೆ ನಾಮಪತ್ರ ವಾಪಸ್ ಪಡೆಯಲು ಅವಕಾಶವಿದೆ. ಖಾದ್ರಿ ಬೆಂಬಲಿಗರು ನಾಮಪತ್ರ ವಾಪಸ್ ಪಡೆಯದಂತೆ ಪಟ್ಟುಹಿಡಿದಿದ್ದಾರೆ. ಇತ್ತ ಕಾಂಗ್ರೆಸ್ ಅಜ್ಜಂಪೀರ್ ಖಾದ್ರಿಯ ಜೊತೆಗೆ ಸಚಿವ ಜಮೀರ್ ಅಹ್ಮದ್ ಅವರನ್ನು ಕಳುಹಿಸಿ ನಾಮಪತ್ರ ವಾಪಸ್ ಪಡೆಯುವಂತೆ ಮನವೊಲಿಸುವ ಟಾಸ್ಕ್ ನೀಡಿದೆ.
ಇದೀಗ ಖಾದ್ರಿ ಬಂಡಾಯ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಇಂದು ಸಚಿವ ಜಮೀರ್ ಅಹ್ಮದ್ ಸಮ್ಮುಖದಲ್ಲಿ ಖಾದ್ರಿ ನಾಮಪತ್ರ ವಾಪಸ್ ಪಡೆಯುತ್ತಾರಾ? ಬೆಂಬಲಿಗರ ಒತ್ತಾಯಕ್ಕೆ ಮಣಿದು ಚುನಾವಣಾ ಕಣದಲ್ಲಿ ಉಳಿಯುತ್ತಾರಾ? ಎಂಬುದು ನಿರ್ಣಯವಾಗಲಿದೆ.
10 ಗಂಟೆಗೆ ಖಾಸಗಿ ಹೋಟೆಲ್ನಲ್ಲಿ ಬೆಂಬಲಿಗರ ಸಭೆ: ಖಾದ್ರಿ ಜೊತೆ ಈಗಾಗಲೇ ಹುಬ್ಬಳ್ಳಿಗೆ ಬಂದಿರುವ ಸಚಿವ ಜಮೀರ್ ಅಹ್ಮದ್, ಹುಬ್ಬಳ್ಳಿಯಿಂದ ತಡಸ ಗ್ರಾಮದ ಬಳಿ ಇರುವ ಖಾಸಗಿ ಹೋಟೆಲ್ಗೆ ಆಗಮಿಸಲಿದ್ದಾರೆ. ಖಾದ್ರಿ ಹಾಗೂ ಜಮೀರ್ ಬೆಳಗ್ಗೆ 10 ಗಂಟೆಗೆ ಖಾಸಗಿ ಹೋಟೆಲ್ನಲ್ಲಿ ಬೆಂಬಲಿಗರ ಸಭೆ ನಡೆಸಲಿದ್ದಾರೆ. ಮೊದಲು ಬೆಂಬಲಿಗರ ಮನವೊಲಿಸಿ ಬಳಿಕ ನಾಮಪತ್ರ ವಾಪಸ್ ಪಡೆಯುವ ನಿರ್ಧಾರದಲ್ಲಿ ಖಾದ್ರಿ ಮತ್ತು ಜಮೀರ್ ಇದ್ದಾರೆ. ನಂತರ ಶಿಗ್ಗಾವಿ ಪಟ್ಟಣದಲ್ಲಿರುವ ತಹಶೀಲ್ದಾರ್ ಕಚೇರಿಗೆ ಆಗಮಿಸಿ ಖಾದ್ರಿ ನಾಮಪತ್ರ ವಾಪಸ್ ಪಡೆಯುವ ಸಾಧ್ಯತೆ ಇದೆ.
ಸಚಿವ ಜಮೀರ್ ಅಹ್ಮದ್ ಸಮ್ಮುಖದಲ್ಲಿ ಖಾದ್ರಿ ನಾಮಪತ್ರ ವಾಪಸ್ ಪಡೆಯಲಿದ್ದಾರೆ. ಖಾದ್ರಿಗೆ ಉನ್ನತ ಸ್ಥಾನ ಮಾನದ ಭರವಸೆಯನ್ನ ಕಾಂಗ್ರೆಸ್ ನಾಯಕರು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಕೆಶಿ, ಜಮೀರ್ ಒತ್ತಾಯಕ್ಕೆ ಕಟ್ಟುಬಿದ್ದು ಖಾದ್ರಿ ನಾಮಪತ್ರ ವಾಪಸ್ ಪಡೆಯಲು ನಿರ್ಧರಿಸಿದ್ದಾರೆ. ಖಾದ್ರಿ ನಾಮಪತ್ರ ವಾಪಸ್ ಪಡೆಯುವವರೆಗೂ ಜೊತೆಗಿದ್ದು, ಬೆಂಬಲಿಗರ ಮನವೊಲಿಸುವ ಟಾಸ್ಕ್ ವಹಿಸಿಕೊಂಡಿರುವ ಜಮೀರ್, ಖಾದ್ರಿ ಅವರನ್ನು ಬಿಟ್ಟು ಕದಲುತ್ತಿಲ್ಲ.
ಖಾದ್ರಿ ನಾಮಪತ್ರ ವಾಪಸ್ ಪಡೆದರೆ ಭರತ್ ಬೊಮ್ಮಾಯಿಗೆ ಗೆಲುವು ಕಷ್ಟವಾಗಲಿದೆ. ಖಾದ್ರಿ ಕಣದಲ್ಲಿ ಉಳಿದರೆ ಅಲ್ಪಸಂಖ್ಯಾತ ಮತಗಳು ಇಬ್ಭಾಗಗೊಂಡು ಭರತ್ ಬೊಮ್ಮಾಯಿ ಗೆಲುವು ಸುಲಭವಾಗಲಿದೆ. ಇದಕ್ಕೆಲ್ಲ ಇಂದು ಮಧ್ಯಾಹ್ನ ಪೂರ್ಣ ವಿರಾಮ ಬೀಳಲಿದೆ. ಮಧ್ಯಾಹ್ನದ ನಂತರ ಸ್ಪರ್ಧಾ ಕಣದ ಸ್ಪಷ್ಟ ಚಿತ್ರಣ ಸಿಗಲಿದೆ.