ಮಧುಗಿರಿ: ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಕೆ.ಟಿ. ಅನಿಲ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಗರಣಿ ಗ್ರಾಮ ಪಂಚಾಯತಿ ಮತ್ತು ಡಿವಿ ಹಳ್ಳಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ನರೇಗಾ ಕಾಮಗಾರಿಗಳನ್ನು ವೀಕ್ಷಿಸಿ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಮಾನವ ದಿನಗಳ ಸೃಜನೆಗಳಲ್ಲಿ ಮೊದಲ ಸ್ಥಾನ ಪಡೆದಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ದೃಷ್ಟಿಕೋನದಿಂದ ಗ್ರಾಮ ಪಂಚಾಯಿತಿ ಸಮಗ್ರ ದರ್ಶನ ಎಂಬ ವಿಶೇಷ ಅಭಿಯಾನ ನಡೆಸಲಾಗಿದೆ. ಆ ಮೂಲಕ ಈಗಾಗಲೇ 196.52 ಕೋಟಿ ರೂ.ಗಳ ವೆಚ್ಚದಲ್ಲಿ ಚರಂಡಿ, ರಸ್ತೆ, ಗ್ರಾಮ ಪಂಚಾಯಿತಿ ಕಟ್ಟಡ, ಸಂಜೀವಿನಿ ಭವನ, ಗ್ರಾಮೀಣ ಗೋದಾಮು, ಶಾಲಾ ಆವರಣ ಗೋಡೆ, ಶೌಚಾಲಯ, ಆಟದ ಮೈದಾನ, ಅಂಗನವಾಡಿ ಕಟ್ಟಡ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಕೈಗೊಂಡಿರುವ 1161 ಶಾಲಾ ಕಾಂಪೌOಡ್,874 ಶೌಚಾಲಯ, 945 ಆಟದ ಮೈದಾನಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. ನೈಜವಾಗಿ ಕೆಲಸ ಮಾಡುತ್ತಿರುವ ನರೇಗಾ ಕಾರ್ಮಿಕರಿಗೆ ಕೆಲವು ತೊಡಕುಗಳು ಉಂಟಾಗುತ್ತಿರುವ ಬಗ್ಗೆ ಮತ್ತು ನರೇಗಾ ಯೋಜನೆ ಅನುಷ್ಠಾನದಲ್ಲಿ ಎದುರಾಗುವ ಸಮಸ್ಯೆಗಳ ಕುರಿತು ಹೆಚ್ಚುವರಿ ಕಾರ್ಯದರ್ಶಿಗಳಿಗೆ ತಿಳಿಸಿದರು.
ನಂತರ ಮಧುಗಿರಿ ತಾಲೂಕು ಗರಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಲಮಾಚಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಾಣವಾಗಿರುವ ಶಾಲಾ ಕಾಂಪೌOಡ್ ಮತ್ತು ಶೌಚಾಲಯ ಕಾಮಗಾರಿ ಮತ್ತು ಡಿ ವಿ ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಿರ್ಮಿಸಿರುವ ಆಟದ ಮೈದಾನ, ಶೌಚಾಲಯ, ಶಾಲಾ ಕಾಂಪೌOಡ್ ಕಾಮಗಾರಿಗಳನ್ನು ವೀಕ್ಷಿಸಿದರು.
ಎನ್‌ಆರ್‌ಎಲ್‌ಎಂ ಅಭಿಯಾನ ನಿರ್ದೇಶಕಿ ವಿದ್ಯಾ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತ ಪವನ್‌ಕುಮಾರ್ ಮಾಲಪಾಟಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಶೈಲ ದಿಡ್ಡಿಮನಿ, ನರೇಗಾ ರಾಜ್ಯ ಸಂಯೋಜಕ ವೇಣುಗೋಪಾಲ್, ಕಾರ್ಯನಿರ್ವಾಹಕ ಅಧಿಕಾರಿ ಜಿ.ಎಸ್, ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಮಧುಸೂದನ್, ಪಿಡಿಓ ಶಿವಕುಮಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.