ಚಿತ್ರದುರ್ಗ: ನವೆಂಬರ್ 1ರಂದು ಅಂದರೆ ಇಂದು ಕಾರುನಾಡಿನಾದ್ಯಂತ ದೀಪಾವಳಿ ಜೊತೆಗೆ ಕನ್ನಡ ರಾಜ್ಯೋತ್ಸವ ಸಂಭ್ರಮ ಮನೆಮಾಡಿದೆ. ಹಾಗೆಯೇ, ಕನ್ನಡ ರಾಜ್ಯೋತ್ಸವ ಅಂಗವಾಗಿ ಐತಿಹಾಸಿಕ ಕೋಟೆ ನಗರಿ ಚಿತ್ರದುರ್ಗದಲ್ಲಿ ಸ್ತಬ್ಧಚಿತ್ರ ಮೆರವಣಿಗೆಯನ್ನು ಹಮ್ಮುಕೊಳ್ಳಲಾಗಿದೆ.
ನಗರ ನೀಲಕಂಠೇಶ್ವರ ದೇವಸ್ಥಾನದ ಬಳಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸ್ತಬ್ದಚಿತ್ರ ಮೆರವಣಿಗೆ: ನಗರದಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಕಲರವವನ್ನು ಸ್ತಬ್ದಚಿತ್ರ ಮೆರವಣಿಗೆ ಮೂಡಿಸಿತು. ‘ಹೊನ್ನ ಬಿತ್ತೇವು ಹೊಲಕೆಲ್ಲಾ’ ಎಂಬ ನಾಣ್ನುಡಿಯಂತೆ ಜೋಡೆತ್ತುಗಳೊಂದಿಗೆ ಹೊಲದಲ್ಲಿ ಬಿತ್ತನೆ ಮಾಡುತ್ತಿರುವ ರೈತನ ಪ್ರತಿಮೆ ಇರುವ ಕೃಷಿ ಇಲಾಖೆಯ ಸ್ತಬ್ದಚಿತ್ರ ಮೆರವಣಿಗೆಯಲ್ಲಿ ಜನರ ಗಮನ ಸೆಳೆಯಿತು.
ಕನ್ನಡಗರ ಅಸ್ಮಿತೆ ಹಣತೆ ಹಚ್ಚಿ ವಿಶಾಲ ಕನ್ನಡ ಸಾಮ್ರಾಜ್ಯ ಸ್ಥಾಪನೆಗೆ ನಾಂದಿ ಹಾಡಿದ ಕದಂಬ ರಾಜ ಮಯೂರು ವರ್ಮನ ಪುತ್ಥಳಿ ಜೊತೆಗೆ, ಜಿಲ್ಲೆಯ ತೋಟಗಾರಿಕೆ ಬೆಳೆಗಳ ಬಗ್ಗೆ ಮಾಹಿತಿ ನೀಡುವ ತೋಟಗಾರಿಕೆ ಇಲಾಖೆ ಸ್ತಬ್ದಚಿತ್ರ ನೋಡುಗರಲ್ಲಿ ಕನ್ನಡ ಅಭಿಮಾನವನ್ನು ಮೂಡಿಸಿತು. ಗೃಹಲಕ್ಷ್ಮೀ ಸೇರಿದಂತೆ ಇತರೆ ಯೋಜನೆಗಳ ಮಾಹಿತಿ ನೀಡುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ಥಬ್ಧಚಿತ್ರ ಹಾಗೂ ತಾಯಿ ಭುವನೇಶ್ವರಿ ಭಾವಚಿತ್ರದೊಂದಿಗೆ ಪುಷ್ಪಾಲಂಕೃತಗೊಂಡ ಕೆಎಸ್ಆರ್ಟಿಸಿ ಸ್ತಬ್ದಚಿತ್ರ ಮಹಿಳೆಯರ ಸಬಲೀಕರಣಕ್ಕೆ ಇಂಬಾಗಿರುವ ಶಕ್ತಿ ಯೋಜನೆಗಳ ಮಹತ್ವ ಸಾರಿದವು.
ಜಿಲ್ಲಾ ಕೈಗಾರಿಕೆ ತರಬೇತಿ ಕೇಂದ್ರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳು, ಸಾರ್ವಜನಿಕ ಶಿಕ್ಷಣ, ಅರಣ್ಯ, ಪ್ರವಾಸೋದ್ಯಮ ಇಲಾಖೆಗಳ ಸ್ತಬ್ದಚಿತ್ರಗಳು ಸರ್ಕಾರದ ಯೋಜನೆಗಳನ್ನು ಪ್ರಚುರ ಪಡಿಸಿದವು. ಇನ್ನು ಮೆರವಣಿಗೆಯಲ್ಲಿ ಸೇವಾದಳ, ಶಾಲಾ ಮಕ್ಕಳ ವಾದ್ಯ ತಂಡ, ಗೊಂಬೆ ಹಾಗೂ ಪಟ ಕುಣಿತ, ಡೊಳ್ಳು, ವೇಷಗಾರ, ಬ್ಯಾಂಡ್, ಶಾಲೆ ಮಕ್ಕಳು ಸೇರಿದಂತೆ ಇತರೆ ಸಾಂಸ್ಕೃತಿಕ ಕಲಾ ತಂಡಗಳು ಪಾಲ್ಗೊಂಡಿದ್ದವು.
ಮೆರವಣಿಗೆ ಗಾಂಧಿ ವೃತ್ತ, ಎಸ್.ಬಿ.ಎಂ ವೃತ್ತ, ಅಂಬೇಡ್ಕರ್ ವೃತ್ತ ಹಾಗೂ ಓಬವ್ವ ವೃತ್ತದ ಮೂಲಕ ಪೊಲೀಸ್ ಕವಾಯತು ಮೈದಾನ ತಲುಪಿತು. ಈ ವೇಳೆ ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್, ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಧಿಕಾರಿ ಎಂ.ಕಾರ್ತಿಕ್, ನಗರ ಸಭೆ ಆಯುಕ್ತೆ ರೇಣುಕಾ, ತಹಶೀಲ್ದಾರ್ ಡಾ.ನಾಗವೇಣಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಇನ್ನು ದಾವಣಗೆರೆ ಜಿಲ್ಲೆಯಲ್ಲಿ 34 ರಾಜ್ಯೋತ್ಸವ ಪುರಸ್ಕೃತ ಸಾಧಕರಿದ್ದಾರೆ. ಈ ಪೈಕಿ ಜಿಲ್ಲೆಯ ಜಗಳೂರು ತಾಲ್ಲೂಕು, ತೋರಣಗಟ್ಟೆ ಗ್ರಾಮದ ಜಿ.ಟಿ.ಬಡಪ್ಪ ಬಿನ್ ಔಗಳ ತಿಮ್ಮಪ್ಪ ಅವರಿಗೆ ಈ ವರ್ಷದ ರಂಗಭೂಮಿ ಕಾಲಕ್ಷೇತ್ರದ ಬಯಲಾಟ ದೊಡ್ಡಾಟದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.