ಬೆಂಗಳೂರು: ಕೆಆರ್ ಪುರಂ ಬಳಿಯ ಆವಲಹಳ್ಳಿಯಲ್ಲಿ ೫೪ ವರ್ಷದ ವ್ಯಕ್ತಿಯನ್ನು ದೇವಸ್ಥಾನದೊಳಗೆ ಕೊಲೆ ಮಾಡಲಾಗಿದೆ ಆವಲಹಳ್ಳಿಯ ಮುನೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಬೆಂಗಳೂರು ಜಿಲ್ಲಾ ಪೊಲೀಸ್ ಠಾಣೆಯ ಆವಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಮೃತ ವ್ಯಕ್ತಿಯನ್ನು ಕುಮಾರ್ ಎಂದು ಗುರುತಿಸಲಾಗಿದೆ. ಈತ ಕ್ಷೌರಿಕ ವೃತ್ತಿ ಮಾಡುತ್ತಿದ್ದ, ದೇಗುಲದ ಒಳಗಡೆಯೇ ಕೆಲಸ ಮಾಡುತ್ತಿದ್ದು, ದೇವಾಸ್ಥಾನದಲ್ಲಿ ಹರಕೆ ಕಟ್ಟಿಕೊಂಡು ಬರುವ ಭಕ್ತರಿಗೆ ಮುಡಿ ತೆಗೆಯುತ್ತಿದ್ದ. ಆತನ ಪತ್ನಿ, ಪುತ್ರ ಹಾಗೂ ಇತರ ಕುಟುಂಬ ಸದಸ್ಯರು ಆವಲಹಳ್ಳಿಯಲ್ಲಿ ವಾಸವಾಗಿದ್ದರು.
ಆರೋಪಿಯನ್ನು ಮಂಜುನಾಥ್ ಅಲಿಯಾಸ್ ಕೃಷ್ಣ ಮೂರ್ತಿ (೩೮) ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕುಮಾರ್ ಮತ್ತು ಮಂಜುನಾಥ್ ಇಬ್ಬರೂ ದೇವಸ್ಥಾನದ ಆವರಣದಲ್ಲಿ ಮಲಗಿದ್ದರು. ಕುಮಾರ್ ಮಂಜುನಾಥ್ ಹೊದಿಕೆಯನ್ನು ಬಳಸಿದ್ದರು ಎಂದು ಹೇಳಲಾಗಿದೆ, ಇದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಜಗಳದ ನಂತರ, ಕುಮಾರ್, ಕಂಬಳಿಯನ್ನು ಹಿಂತಿರುಗಿಸದೆ, ಚಳಿಯಾಗಿದ್ದರಿಂದ ಕಂಬಳಿ ಹೊದ್ದಕೊಂಡು ಮಲಗಿದ್ದ. ಕುಮಾರ್ ಮಲಗಿದ್ದಾಗ ಮಂಜುನಾಥ್ ತಲೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆವಲಹಳ್ಳಿಯ ವೀರಗೋಪುರದ ಖಾಸಗಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.