ಚನ್ನಪಟ್ಟಣ: ಕ್ಷೇತ್ರದಲ್ಲಿ ಎರಡು ಬಾರಿ ಗೆದ್ದ ಎಚ್.ಡಿ. ಕುಮಾರಸ್ವಾಮಿ ಅವರು ಯಾವುದೇ ಅಭಿವೃದ್ಧಿ ಮಾಡದೆ, ಈಗ ತಮ್ಮ ಮಗನನ್ನು ತಂದು ನಿಲ್ಲಿಸಿದ್ದಾರೆ. ಅವರದ್ದು ಸ್ವಾರ್ಥ ರಾಜಕಾರಣ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಟೀಕಿಸಿದರು.
ತಾಲ್ಲೂಕಿನ ಕೂಡ್ಲೂರು ಗ್ರಾಮದಲ್ಲಿ ಭಾನುವಾರ ಪ್ರಚಾರ ನಡೆಸಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಈ ತಾಲ್ಲೂಕಿಗೆ ಯಾಕೆ ಬಂದರೋ ಗೊತ್ತಿಲ್ಲ.
ಯಾಕೆ ಬಿಟ್ಟು ಹೋದರೋ ಗೊತ್ತಿಲ್ಲ. ಇಲ್ಲಿ ಯಾವುದೇ ಅಭಿವೃದ್ಧಿ ಮಾಡದೇ ಮಗನನ್ನು ತಂದು ನಿಲ್ಲಿಸಿದ್ದಾರೆ ಎಂದರು.
‘ಕುಮಾರಸ್ವಾಮಿ ಅವರಿಗೆ ಕ್ಷೇತ್ರದಲ್ಲಿ ಜನವಿರೋಧಿ ಅಲೆ ಇದೆ. ಅಧಿಕಾರ ಇದ್ದಾಗಲೇ ಅವರು ಏನೂ ಮಾಡಿಲ್ಲ. ಮುಂದೆ ಏನು ಮಾಡಲು ಸಾಧ್ಯ. ಅವರು ಮಂಡ್ಯ, ಹಾಸನ, ರಾಮನಗರ ಎಂದು ಎಲ್ಲಾ ಕಡೆ ಓಡಾಡುತ್ತಾರೆ. ಇದು ನನ್ನ ಕರ್ಮಭೂಮಿ. ನಾನು ಹುಟ್ಟಿಬೆಳೆದಿದ್ದು ಇಲ್ಲೆ. ನಾನು ಇಲ್ಲೇ ಇರುತ್ತೇನೆ. ಕ್ಷೇತ್ರದ ಸಮಸ್ಯೆಗಳ ಅರಿವು ನನಗಿದೆ. ಹಾಗಾಗಿ ನನಗೆ ಆಶೀರ್ವಾದ ಮಾಡಿ’ ಎಂದು ಮನವಿ ಮಾಡಿದರು.
‘ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರ ಬದುಕಿನಲ್ಲಿ ಬದಲಾವಣೆ ತಂದಿವೆ. ಸರ್ಕಾರದ ಯೋಜನೆಗಳಿಂದ ಪ್ರಭಾವಿತರಾಗಿರುವ ಜನರು ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ. ತಾಲ್ಲೂಕಿನೆಲ್ಲೆಡೆ ನನಗೆ ಜನರ ಬೆಂಬಲ ದೊರೆಯುತ್ತದೆ. ಪಕ್ಷಾತೀತವಾಗಿ ಜನರು ನನಗೆ ಬೆಂಬಲ ನೀಡುತ್ತಿದ್ದಾರೆ. ನಾನು ಗೆಲ್ಲುವ ವಿಶ್ವಾಸ ಇದೆ’ ಎಂದರು.
ತಾಲ್ಲೂಕಿನ ವಾಲೇತೋಪು ಗ್ರಾಮದಿಂದ ಪ್ರಚಾರ ಆರಂಭಿಸಿದ ಯೋಗೇಶ್ವರ್, ಶ್ರೀರಾಂಪುರ, ಎಸ್.ಎಂ.ದೊಡ್ಡಿ, ಎಸ್.ಎಂ.ಹಳ್ಳಿ, ಮಾಳಗಾಳು, ಮಳೂರುಪಟ್ಟಣ, ತೂಬಿನಕೆರೆ, ಕುಕ್ಕೂರು, ಕುಕ್ಕೂರುದೊಡ್ಡಿ, ಮಾರ್ಚನಹಳ್ಳಿ, ಬೆಳಕೆರೆ, ಚಕ್ಕಲೂರುದೊಡ್ಡಿ, ಕೂರಣಗೆರೆ, ಗೋವಿಂದಹಳ್ಳಿ, ಚಕ್ಕೆರೆ, ಹೊಟ್ಟಿಗನಹೊಸಳ್ಳಿ, ದೊಡ್ಡಮಳೂರು, ದೇವರಹಳ್ಳಿ, ಬೈರಾಪಟ್ಟಣ, ಸಂಕಲಗೆರೆ, ಮತ್ತೀಕೆರೆ, ಶೆಟ್ಟಿಹಳ್ಳಿ, ಮುದಗೆರೆ, ಸೀಬನಹಳ್ಳಿ, ಕೋಲೂರು ಸೇರಿದಂತೆ ಹಲವೆಡೆ ಪ್ರಚಾರ ನಡೆಸಿದರು.
ಮಾಗಡಿ ಶಾಸಕ ಬಾಲಕೃಷ್ಣ, ಮಾಜಿ ಶಾಸಕ ಎಂ.ಸಿ. ಅಶ್ವಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್, ಸುನೀಲ್, ಸ್ಥಳೀಯ ಮುಖಂಡರು ಭಾಗವಹಿಸಿದ್ದರು. ಯೋಗೇಶ್ವರ್ ಅವರ ಪ್ರಚಾರದ ವೇಳೆ ಭಾರೀ ಗಾತ್ರದ ಹೂವಿನ ಹಾರಗಳನ್ನು ಹಾಕಿ, ಪಟಾಕಿ ಸಿಡಿಸಿ ಸ್ವಾಗತಿಸಲಾಯಿತು. ಮಹಿಳೆಯರು ಆರತಿ ಎತ್ತಿ ಸ್ವಾಗತಿಸಿದರು.
ಚನ್ನಪಟ್ಟಣ ತಾಲ್ಲೂಕಿನ ಮಳೂರುಪಟ್ಟಣ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರು ಪ್ರಚಾರ ನಡೆಸಿದರು. ಸಂಸದ ಡಿ.ಕೆ. ಸುರೇಶ್ ಶಾಸಕ ಬಾಲಕರಷ್ಣ ಇತರರು ಹಾಜರಿದ್ದರು.
ಕಣ್ಣೀರಿಗೆ ಮರುಳಾಗಬೇಡಿ..
ತಾಲ್ಲೂಕಿನ ಜನತೆ ಕುಮಾರಸ್ವಾಮಿ ಅವರ ಕಣ್ಣಿರಿಗೆ ಮರುಳಾಗಬೇಡಿ. ಅಧಿಕಾರ ಇದ್ದಾಗ ಇತ್ತ ಮುಖ ಮಾಡದೆ ಈಗ ಬಂದು ನನ್ನ ಮಗನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ ನಿಮ್ಮ ಮಡಿಲಲ್ಲೆ ಇರುವ ನಿಮ್ಮ ಮನೆಮಗ ಯೋಗೇಶ್ವರ್ ಅವರನ್ನು ಮರೆಯಬೇಡಿ. ಯೋಗೇಶ್ವರ್ ಅವರನ್ನು ಗೆಲ್ಲಿಸುವ ಮೂಲಕ ನಿಮ್ಮ ಸೇವೆಗೆ ಅವಕಾಶ ಮಾಡಿಕೊಡಿ ಎಂದು ಎಂದು ಸಂಸದ ಡಿ.ಕೆ. ಸುರೇಶ್ ಮನವಿ ಮಾಡಿದರು.