ಸಿದ್ದರಾಮಯ್ಯ ‘ಯೂಟರ್ನ್’ ಮುಖ್ಯಮಂತ್ರಿ; ಅಬ್ದುಲ್ ಮಜೀದ್

ಸಿದ್ದರಾಮಯ್ಯ 'ಯೂಟರ್ನ್' ಮುಖ್ಯಮಂತ್ರಿ; ಅಬ್ದುಲ್ ಮಜೀದ್

ಮಡಿಕೇರಿ: ‘ವಕ್ಫ್ ಆಸ್ತಿ ಒತ್ತುವರಿದಾರರಿಗೆ ನೀಡಿರುವ ನೋಟಿಸ್ ವಾಪಸ್ ಪಡೆಯುತ್ತೇವೆ ಎಂದು ಹೇಳಿರುವ ಸಿದ್ದರಾಮಯ್ಯ ಅವರು ‘ಯೂಟರ್ನ್’ ಮುಖ್ಯಮಂತ್ರಿ’ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ರಾಜ್ಯ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್ ಟೀಕಿಸಿದರು.

‘ಒತ್ತುವರಿದಾರರಿಗೆ ನೋಟಿಸ್ ನೀಡುವುದೇ ತಪ್ಪು ಎಂದು ಹೇಳಿದ ಬಿಜೆಪಿ ಮತ್ತು ಆರ್ಎಸ್ಎಸ್ ಕಾರ್ಯಸೂಚಿ ಪ್ರಕಾರವೇ ಕಾಂಗ್ರೆಸ್ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಐ.ಟಿ. ಸೆಲ್ಗೆ ಹೆದರಿರುವ ಸಿದ್ದರಾಮಯ್ಯ ನೋಟಿಸ್ ವಾಪಸ್ ಪಡೆಯಲು ನಿರ್ಧರಿಸಿದ್ದಾರೆ. ಇದೊಂದು ಪುಕ್ಕಲು ಸರ್ಕಾರ’ ಎಂದು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.

‘ಮುಸ್ಲಿಮರನ್ನೆಲ್ಲಾ ಪಾಕಿಸ್ತಾನಕ್ಕೆ ಓಡಿಸುತ್ತೇವೆ ಎಂದು ಬಿಜೆಪಿಯ ಸಿ.ಟಿ.ರವಿ ಪ್ರಚೋದನಾಕಾರಿಯಾಗಿ ಮಾತನಾಡಿದರೂ ಸರ್ಕಾರ ಅವರ ವಿರುದ್ಧ ಪ್ರಕರಣ ದಾಖಲಿಸಿಲ್ಲ. ಜಿ.ಪರಮೇಶ್ವರ ಅವರು ಗೃಹಸಚಿವರಾಗಲು ನಾಲಾಯಕ್ ಆಗಿದ್ದು, ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದಲ್ಲಿ 1.25 ಲಕ್ಷ ಎಕರೆ ವಕ್ಫ್ ಆಸ್ತಿ ಇದ್ದು, ಅದರಲ್ಲಿ 23ಸಾವಿರ ಎಕರೆ ಮಾತ್ರ ವಕ್ಫ್ ಮಂಡಳಿ ಹಿಡಿತದಲ್ಲಿದೆ. ಉಳಿದದ್ದೆಲ್ಲವೂ ಒತ್ತುವರಿಯಾಗಿದೆ. ಇವರಲ್ಲಿ ರಾಜಕಾರಣಿಗಳು ಹಾಗೂ ಮುಸ್ಲಿಮರೂ ಇದ್ದಾರೆ. ನೋಟಿಸ್ ನೀಡಿ ಒತ್ತುವರಿದಾರರ ಬಳಿ ಇರುವ ದಾಖಲೆಗಳನ್ನು ಪಡೆಯುವುದೇ ತಪ್ಪು ಎಂದರೆ ಹೇಗೆ?’ ಎಂದು ಕೇಳಿದರು.

‘ವಕ್ಫ್ ಆಸ್ತಿಯನ್ನು ಒತ್ತುವರಿದಾರರಿಂದ ತೆರವುಗೊಳಿಸುವ ಬಗ್ಗೆ ಬಿಜೆಪಿ ಹಿಂದೆ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದೆ. ಬಸವರಾಜ ಬೊಮ್ಮಾಯಿ ಅವರೂ ಇದೇ ಮಾತುಗಳನ್ನಾಡಿದ್ದರು. ಆದರೆ, ಈಗ ಉಪಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯಲು ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ರೈತರ ಒಂದಿಚು ಭೂಮಿಯೂ ವಕ್ಫ್ಗೆ ಬೇಡ. ರೈತರು ಅಥವಾ ವಕ್ಫ್ಗೆ ಪರ್ಯಾಯ ಭೂಮಿ ನೀಡುವ ಮೂಲಕ ಸರ್ಕಾರ ಪ್ರಕರಣವನ್ನು ಸುಲಭವಾಗಿ ಇತ್ಯರ್ಥಗೊಳಿಸಬಹುದಾಗಿದೆ’ ಎಂದು ಸಲಹೆ ನೀಡಿದರು.

Leave a Reply

Your email address will not be published. Required fields are marked *