ಪತಿ ಭಾಗಿಯಾದ ಆರೋಪದಲ್ಲಿ ಪತ್ನಿಯನ್ನು ಸೇರಿಸಲಾಗದು : ಹೈಕೋರ್ಟ್

ಪತಿ ಭಾಗಿಯಾದ ಆರೋಪದಲ್ಲಿ ಪತ್ನಿಯನ್ನು ಸೇರಿಸಲಾಗದು : ಹೈಕೋರ್ಟ್

ಬೆಂಗಳೂರು: ಅಪರಾಧಿ ಪತಿಯೊಂದಿಗೆ ನೆಲೆಸಿರುವ ಕಾರಣಕ್ಕೆ ಪತ್ನಿಯನ್ನು ಸಹ ಆರೋಪಿಯನ್ನಾಗಿ ಮಾಡಲು ಅವಕಾಶವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಅಕ್ರಮವಾಗಿ ಮದ್ಯ ತಯಾರಿಕೆ ಮಾಡುತ್ತಿದ್ದ ಆರೋಪಿಯೊಂದಿಗೆ ನೆಲೆಸಿದ್ದ ಪತ್ನಿಯನ್ನು ಆರೋಪಿಯನ್ನಾಗಿಸಬೇಕು ಎಂದು ಕೋರಿ ತುಮಕೂರಿನ ಕುವೆಂಪು ನಗರ ನಿವಾಸಿ ಆರ್.ಕೆ ಭಟ್ ಎಂಬುವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಿರದ ಹೊರತಾಗಿ ಅಪರಾಧದಲ್ಲಿ ಭಾಗಿಯಾಗಿರುವ ಪತಿಯೊಂದಿಗೆ ನೆಲೆಸಿರುವುದಕ್ಕಾಗಿ ಪತ್ನಿಯನ್ನು ಸಹ ಆರೋಪಿಯನ್ನಾಗಿ ಮಾಡಲಾಗುವುದಿಲ್ಲ. ಅಲ್ಲದೆ ಸಿಆರ್ಪಿಸಿ ಸೆಕ್ಷನ್ 319 ರ ಅಡಿಯಲ್ಲಿ ವಿಚಾರಣೆಯ ಪೂರ್ವ ಹಂತದಲ್ಲಿ ಪ್ರಕರಣ ಕುರಿತಾಗಿ ಇನ್ನೋರ್ವ ಆರೋಪಿಯನ್ನು ಸೇರಿಸಲಾಗುವುದಿಲ್ಲ. ಆರೋಪ ಪಟ್ಟಿ ಸಲ್ಲಿಕೆ ನಂತರ ಸೂಕ್ತ ಪುರಾವೆ ಲಭ್ಯವಾದಲ್ಲಿ ಮಾತ್ರ ಸಮನ್ಸ್ ಜಾರಿಗೊಳಿಸಬಹುದಾಗಿದೆ. ಹೀಗಾಗಿ ಆರೋಪಿಯ ಪತ್ನಿಯನ್ನು ಅಪರಾಧ ಜಾಲದಲ್ಲಿ ಸಿಲುಕಿಸಲಾಗದು. ಈ ವಿಚಾರ ಸರಿಯಾಗಿ ಅರ್ಥೈಸಿಕೊಳ್ಳದೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಹೀಗಾಗಿ ಪ್ರಕರಣದಲ್ಲಿ ನ್ಯಾಯಪೀಠ ಮಧ್ಯ ಪ್ರವೇಶಿಸಲಾಗದು ಎಂದು ತಿಳಿಸಿ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಿವಾಸಿ ನಾರ್ಬರ್ಟ್ ಡಿಸೋಜಾ ಎಂಬುವರು ತಮ್ಮ ಹಿತ್ತಲಿನಲ್ಲಿ ನಕಲಿ ಮದ್ಯ ತಯಾರಿಸಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ತುಮಕೂರಿನ ಕುವೆಂಪು ನಗರದ ಆರ್.ಕೆ. ಭಟ್ ಎಂಬುವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಿ, ಕರ್ನಾಟಕ ಅಬಕಾರಿ ಕಾಯ್ದೆಯ ಸೆಕ್ಷನ್ 13, 32(2) ಮತ್ತು 38(ಅ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣದಲ್ಲಿ ಅರ್ಜಿದಾರರು ಆರೋಪಿ ನಾರ್ಬರ್ಟ್ ಡಿಸೋಜಾ ಪತ್ನಿ ಶಾಂತಿ ರೋಚ್ ಕೂಡ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಅವರು ವಿರುದ್ಧವೂ ಸಮನ್ಸ್ ಜಾರಿಗೊಳಿಸಿ ಸಹ ಆರೋಪಿಯನ್ನಾಗಿ ಮಾಡಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ಮನವಿಯನ್ನು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಬಂಟ್ವಾಳ ಜೆಎಂಎಫ್ಸಿ ನ್ಯಾಯಾಲಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಆರೋಪಿ ನಾರ್ಬರ್ಟ್ ಡಿಸೋಜಾ ಜತೆ ಪತ್ನಿ ಶಾಂತಿ ರೋಚ್ ಒಂದೇ ಮನೆಯಲ್ಲಿ ನೆಲೆಸಿದ್ದರು. ಪತ್ನಿಯೂ ಪತಿಯ ಅಕ್ರಮ ಮದ್ಯ ತಯಾರಿಕೆ ಹಾಗೂ ಮಾರಾಟದಲ್ಲಿ ಸಾಥ್ ನೀಡಿದ್ದಳು. ಹೀಗಾಗಿ ಪ್ರಕರಣದಲ್ಲಿ ಪತ್ನಿಯನ್ನೂ ಸಹ ಆರೋಪಿಯೆಂದು ಪರಿಗಣಿಸಿ ವಿಚಾರಣೆಗೊಳಪಡಿಸುವಂತೆ’ ಅರ್ಜಿದಾರರ ಪರ ವಕೀಲರು ಮನವಿ ಮಾಡಿದ್ದರು.

ಸರ್ಕಾರದ ಪರ ವಾದ ಮಂಡಿಸಿದ ವಕೀಲರು, ಪತಿಯ ಈ ವಹಿವಾಟನ್ನು ಪತ್ನಿಯೂ ಬಲ್ಲವಳಾಗಿರುತ್ತಾಳೆ. ಈ ನಿಟ್ಟಿನಲ್ಲಿ ಆಕೆಯನ್ನು ಸಹ ಆರೋಪಿ ಎಂದು ಪರಿಗಣನೆ ಮಾಡಬಹುದು ಎಂದು ಪೀಠಕ್ಕೆ ತಿಳಿಸಿದ್ದರು.

Leave a Reply

Your email address will not be published. Required fields are marked *