ರಾಹುಲ್ ಗಾಂಧಿ ತೋರಿಸಿದ ಸಂವಿಧಾನದ ಪ್ರತಿ ನಕಲಿ: ಅಮಿತ್ ಶಾ

ರಾಹುಲ್ ಗಾಂಧಿ ತೋರಿಸಿದ ಸಂವಿಧಾನದ ಪ್ರತಿ ನಕಲಿ: ಅಮಿತ್ ಶಾ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂವಿಧಾನದ ನಕಲಿ ಪ್ರತಿಯನ್ನು ತೋರಿಸುವ ಮೂಲಕ ಸಂವಿಧಾನವನ್ನು ಅವಮಾನಿಸಿದ್ದಾರೆ ಮತ್ತು ಅಪಹಾಸ್ಯ ಮಾಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಆರೋಪಿಸಿದ್ದಾರೆ.

ಇಂದು ಜಾರ್ಖಂಡ್ ನ ಪಲಮುನಲ್ಲಿ ಬಿಜೆಪಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಅಲ್ಪಸಂಖ್ಯಾತರಿಗೆ ಮೀಸಲಾತಿ ಜಾರಿಗೊಳಿಸಲು ಬಿಜೆಪಿ ಎಂದಿಗೂ ಕಾಂಗ್ರೆಸ್ಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

“ರಾಹುಲ್ ಗಾಂಧಿಯವರು ಸಂವಿಧಾನದ ಪ್ರತಿಯನ್ನು ತೋರಿಸುತ್ತಾರೆ. ಅವರು ತೋರಿಸಿದ ಸಂವಿಧಾನದ ಪ್ರತಿ ನಕಲಿ ಎಂಬುದು ಎರಡು ದಿನಗಳ ಹಿಂದೆ ಬಹಿರಂಗವಾಗಿದೆ. ಯಾವುದೇ ವಿಷಯವಿಲ್ಲದ ಆ ಪ್ರತಿಯ ಮುಖಪುಟದಲ್ಲಿ ಭಾರತದ ಸಂವಿಧಾನ ಎಂದು ಬರೆಯಲಾಗಿದೆ…. ಸಂವಿಧಾನವನ್ನು ಅಪಹಾಸ್ಯ ಮಾಡಬೇಡಿ, ಸಂವಿಧಾನದ ನಕಲಿ ಪ್ರತಿಯನ್ನು ತೋರಿಸುವ ಮೂಲಕ ನೀವು ಬಿ ಆರ್ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದೀರಿ ಮತ್ತು ಸಂವಿಧಾನವನ್ನು ಅಪಹಾಸ್ಯ ಮಾಡಿದ್ದೀರಿ ಎಂದು ಅಮಿತ್ ಶಾ ವಾಗ್ದಾಳಿ ನಡೆಸಿದರು.

ನವೆಂಬರ್ 26ನ್ನು ಸಂವಿಧಾನ ದಿನವನ್ನಾಗಿ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವರು ತಿಳಿಸಿದರು.

ಒಬಿಸಿ, ಬುಡಕಟ್ಟು ಮತ್ತು ದಲಿತರಿಂದ ಮೀಸಲಾತಿಯನ್ನು ಕಿತ್ತುಕೊಳ್ಳಲು ಕಾಂಗ್ರೆಸ್ ಯತ್ನಿಸುತ್ತಿದೆ ಮತ್ತು ಆ ಮೀಸಲಾತಿಯನ್ನು ಅಲ್ಪಸಂಖ್ಯಾತರಿಗೆ ನೀಡಲು ಯೋಜಿಸಿದೆ ಎಂದು ಶಾ ಆರೋಪಿಸಿದರು.

“ಕಾಂಗ್ರೆಸ್ ಒಬಿಸಿ ಕೋಟಾದ ವಿರುದ್ಧವಾಗಿದೆ. ಉಲೇಮಾಗಳ ನಿಯೋಗವು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನಾಯಕರನ್ನು ಭೇಟಿಯಾದಾಗ ಅಲ್ಪಸಂಖ್ಯಾತರಿಗೆ ಶೇ. 10 ರಷ್ಟು ಮೀಸಲಾತಿ ನೀಡುವ ಭರವಸೆ ನೀಡಿದೆ. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ, ಬಿಜೆಪಿ ಯಾವತ್ತೂ ಧರ್ಮ ಆಧಾರಿತ ಮೀಸಲಾತಿ ಅವಕಾಶ ನೀಡುವುದಿಲ್ಲ” ಎಂದು ಅಮಿತ್ ಶಾ ಹೇಳಿದ್ದಾರೆ.

Leave a Reply

Your email address will not be published. Required fields are marked *