ಬೆಂಗಳೂರು, ನವೆಂಬರ್ 11: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಇನ್ನಷ್ಟು ಪ್ರಯಾಣಿಕ ಸ್ನೇಹಿಯಾಗುವತ್ತ ಹೆಜ್ಜೆ ಹಾಕಿದೆ. ದಿನದಿಂದ ದಿನಕ್ಕೆ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಿದೆ. ಇಂದಿನ ಯುಗಕ್ಕೆ ತಕ್ಕಂತೆ ಪ್ರಯಾಣಿಕ ಸ್ನೇಹಿ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದು, ಸಂಪೂರ್ಣ ಡಿಜಿಟಲ್ ಆಗುವತ್ತ ಪ್ರಯತ್ನ ಆರಂಭಿಸಿದೆ. ಇದಕ್ಕಾಗಿ ಪ್ರಾಯೋಗಿಕ ಯೋಜನೆಯನ್ನು ಆಯ್ದ ಬಸ್‌ಗಳಲ್ಲಿ ಜಾರಿಗೊಳಿಸಿದೆ.
ಡಿಜಿಟಲ್ ಪೇಮೆಂಟ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಜನರು ತಮ್ಮ ಜೇಬು ಖಾಲಿ ಎಂದು ಹೇಳಿದರೂ ಮೊಬೈಲ್‌ನಲ್ಲಿ ದುಡ್ಡು ಅಡಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ‘ಚಿಲ್ಲರೆ’ ವಿಚಾರಕ್ಕೆ ಜಗಳ ಆಗುವುದನ್ನು ತಪ್ಪಿಸಲು ನಿಗಮ ಮೊದಲ ಹೆಜ್ಜೆ ಇಟ್ಟಿದೆ.
ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ: ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಸಂಚಾರ ನಡೆಸುವಾಗ ಜೇಬಿನಲ್ಲಿ ಹಣವಿಲ್ಲದಿದ್ದರೂ ಇನ್ನು ಮುಂದೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯಬಹುದು. ಇದರಿಂದಾಗಿ ಜನರು ಹಣ ತರುವುದು ಮರೆತರೂ ಟಿಕೆಟ್ ಪಡೆಯಲು ಅನುಕೂಲವಾಗಲಿದೆ. ಅಲ್ಲದೇ ಚಿಲ್ಲರೆ ವಿಚಾರಕ್ಕೆ ಬಸ್‌ಗಳಲ್ಲಿ ಆಗುವ ವಾಗ್ವಾದಕ್ಕೆ ತಡೆ ಬೀಳಲಿದೆ.
ಇದೀಗ ಕೆಎಸ್ಆರ್‌ಟಿಸಿಯ ಬಸ್‌ಗಳಲ್ಲಿ ಡಿಜಿಟಲ್ ಪಾವತಿ ಸೌಲಭ್ಯ. ಪ್ರಯಾಣಿಕರು ನಿರ್ವಾಹಕರಿಂದ ಡೈನಮಿಕ್ ಕ್ಯುಆರ್ ಕೋಡ್ ಮೂಲಕ ಟಿಕೆಟ್ ಪಡೆಯಬಹುದು ಎಂದು ಕೆಎಸ್ಆರ್‌ಟಿಸಿ ಹೇಳಿದೆ. ಫೋನ್ ಪೇ, ಗೂಗಲ್ ಪೇ, ಭೀಮ್, ಯಪಿಐ ನಾಲ್ಕು ವ್ಯವಸ್ಥೆಗಳ ಮೂಲಕ ಡಿಜಿಟಲ್ ಪೇಮೆಂಟ್ ಮಾಡಬಹುದಾಗಿದೆ