ಕನಕಪುರ: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಮತದಾನ ಮಾಡಲು ತೆರಳುತ್ತಿದ್ದ ಆಟೋ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆಟೋದಲ್ಲಿದ್ದ ಓರ್ವ ಮಹಿಳೆ ಸಾವನಪ್ಪಿ, ಉಳಿದವರು ಗಂಭೀರವಾಗಿ ಗಾಯಗೊಂಡಿರುವುದು ತಾಮಸಂದ್ರ ಗೇಟ್ ಬಳಿ ಬುಧವಾರ ನಡೆದಿದೆ.
ಅಪಘಾತದಲ್ಲಿ ಸಾವನಪ್ಪಿದ ಮಹಿಳೆಯು ಚನ್ನಪಟ್ಟಣ ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿ ಬೂಹಳ್ಳಿ ಗ್ರಾಮದ ಶಿವಮತ್ತು ಅವರ ಪತ್ನಿ ಶಿವಮ್ಮ(55) ಆಗಿದ್ದು, ಅವರ ಕುಟುಂಬದವರಾದ ಲೋಕೇಶ್, ಶಶಿಕಲಾ, ಅಭಿಷೇಕ್, ಶಿವಮುತ್ತು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇವರು ಚನ್ನಪಟ್ಟಣ ತಾಲ್ಲೂಕು ವಿರುಪಾಕ್ಷಿಪುರ ಹೋಬಳಿ, ಬೂಹಳ್ಳಿ ಗ್ರಾಮದವರಾಗಿದ್ದು ಬೆಂಗಳೂರಿನ ಸಾರಕ್ಕಿ ಗ್ರಾಮದಲ್ಲಿ ವಾಸವಾಗಿದ್ದರು.
ಚನ್ನಪಟ್ಟಣ ತಾಲ್ಲೂಕಿನಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಮತದಾನ ಮಾಡಲು ಬುಧವಾರ ಮಧ್ಯಾಹ್ನ ಸುಮಾರು 12 ಗಂಟೆ ಸಮಯದಲ್ಲಿ ಕುಟುಂಬದ ಸದಸ್ಯರೆಲ್ಲ ಆಟೋದಲ್ಲಿ ಕನಕಪುರದ ಮಾರ್ಗವಾಗಿ ಬೂಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದಾಗ ಬೈಪಾಸ್ ರಸ್ತೆಯ ತಾಮಸಂದ್ರ ಗೇಟ್ ಬಳಿ ಈ ಅಪಘಾತ ಸಂಭವಿಸಿದೆ.
ಚಾಮರಾಜನಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಹ್ಯೂಂಡಾಯ್ ಕಂಪನಿಯ ಕಾರು ಎದುರುಗಡೆ ಬರುತ್ತಿದ್ದ ಆಟೋ ಮುಖಾಮುಖಿ ಹೊಡೆದಿವೆ. ಈ ವೇಳೆ ಶಿವಮ್ಮ ಅವರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನಪ್ಪಿದ್ದಾರೆ.
ಲೋಕೇಶ್, ಶಶಿಕಲಾ, ಶಿವಮುತ್ತು, ಅಭಿಷೇಕ ಗಂಭೀರವಾಗಿ ಗಾಯಗೊಂಡಿದ್ದು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದ ಮಾಹಿತಿ ತಿಳಿದ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗಾಯಗೊಂಡವರನ್ನು ದಯಾನಂದ ಸಾಗರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತ ದೇಹವನ್ನು ದಯಾನಂದ ಸಾಗರ್ ಆಸ್ಪತ್ರೆ ಗೆ ಸ್ಥಳಾಂತರಿಸಿದ್ದಾರೆ.
ಅಪಘಾತ ಸಂಬಂಧ ಮೃತರ ಕುಟುಂಬದವರು ಕನಕಪುರ ಸಂಚಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎರಡು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.