ಮಂಗಳೂರು: ಆರೋಗ್ಯ ಇಲಾಖೆ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಸೇವಾ ಶುಲ್ಕವನ್ನು ಬಹಳ ವರ್ಷಗಳ ನಂತರ ಹೆಚ್ಚಿಸಲಾಗಿದೆ. ಜನರಿಗೆ ಹೊರೆಯಾಗದಂತೆ ಅಲ್ಪ ಪ್ರಮಾಣದಲ್ಲಿ ಸೇವಾ ಶುಲ್ಕ ಪರಿಷ್ಕರಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಗುರುವಾರ ಮಾಧ್ಯಮಗಳಿಗೆ ಸೇವಾ ಶುಲ್ಕ ಹೆಚ್ಚಳ ಕುರಿತು ಪ್ರತಿಕ್ರಿಯಿಸಿದ ಸಚಿವರು, ಆಸ್ಪತ್ರೆಗಳಲ್ಲಿ ಸೇವಾ ಶುಲ್ಕ ಪರಿಷ್ಕರಣೆ ಒಂದು ಪ್ರಕ್ರಿಯೆ. ಸೇವಾ ಶುಲ್ಕ ಆಸ್ಪತ್ರೆ ಸಮಿತಿಗೆ ಹೋಗುತ್ತದೆ. ಸ್ಥಳೀಯ ಶಾಸಕರೇ ಆ ಸಮಿತಿ ಅಧ್ಯಕ್ಷರಾಗಿದ್ದು, ಆ ಹಣವನ್ನು ಆಸ್ಪತ್ರೆಗೆ ಬಳಸಿಕೊಳ್ಳಲಾಗುತ್ತದೆ ಎಂದರು.
ಆಸ್ಪತ್ರೆಗಳಲ್ಲಿ ಬೇರೆ ಸೇವೆ ನೀಡಬೇಕು. ಆಸ್ಪತ್ರೆಯ ಅಭಿವೃದ್ಧಿಗಾಗಿ ಅಲ್ಪ ಪ್ರಮಾಣದಲ್ಲಿ ಅಂದರೆ 10 ರೂನಿಂದ 15 , 20 ರೂನಿಂದ 25 ರೂಗೆ ಏರಿಸಲಾಗಿದೆ. ಜೊತೆಗೆ ಬಹಳ ವರ್ಷದ ನಂತರ ಹೆಚ್ಚಳ ಮಾಡಲಾಗಿದ್ದು, ಇದು ಬಡವರಿಗೆ ತೊಂದರೆ ಆಗುವ ರೀತಿಯಲ್ಲೂ ಕೂಡ ಇದು ಇಲ್ಲ. ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕ ಸರ್ಕಾರಕ್ಕೆ ಸಂದಾಯವಾಗುವುದಿಲ್ಲ. ಅದೇ ಆಸ್ಪತ್ರೆಗೆ ಬಳಸಿಕೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕದ ಹಣವನ್ನು ಆಯಾ ಆಸ್ಪತ್ರೆಗಳ ARS ಸಮಿತಿಗಳು ಚರ್ಚೆ ನಡೆಸಿ ಆಸ್ಪತ್ರೆಯ ಅಭಿವೃದ್ಧಿಗೆ ಬಳಕೆ ಮಾಡುತ್ತವೆ. ಆಸ್ಪತ್ರೆಯ ARS Fund ಹೆಸರಲ್ಲಿ ಅನುದಾನ ಲಭ್ಯವಿರುತ್ತದೆ. ಆಸ್ಪತ್ರೆಯ ಸ್ವಚ್ಛತೆ, ದುರಸ್ತಿ ಕಾರ್ಯಗಳು ಸೇರಿದಂತೆ ಆಸ್ಪತ್ರೆಗಳ ಅಭಿವೃದ್ಧಿಗಳಿಗೆ ಬಳಕೆ ಮಾಡಲಾಗುತ್ತದೆ ಎಂದರು