ಬೆಂಗಳೂರು: ಇಂಜಿನಿಯರಿಂಗ್ ಸೀಟು ಬ್ಲಾಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿಬ್ಬಂದಿ ಸೇರಿದಂತೆ 10 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
2024-25ನೇ ಸಾಲಿಗಾಗಿ ವಿವಿಧ ಸ್ನಾತಕ ಇಂಜಿನಿಯರಿಂಗ್ ಕೋರ್ಸ್ ಪ್ರವೇಶದ ವೇಳೆಯಲ್ಲಿ ಕೆಇಎ ಅಧಿಕಾರಿಯೊಬ್ಬರು ಸೀಟು ಬ್ಲಾಕಿಂಗ್ ಅನುಮಾನದ ಬಗ್ಗೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ನಂತರ ನವೆಂಬರ್ 13 ರಂದು ಈ ಹಗರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯ ಸಂದರ್ಭದಲ್ಲಿ ಮೂರು ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಆಡಳಿತವನ್ನು ಪ್ರಶ್ನಿಸಲಾಗಿದೆ. ಹಗರಣ ಸಂಬಂಧ ಹತ್ತು ಜನರನ್ನು ಬಂಧಿಸಿದ್ದೇವೆ. ಅವರಲ್ಲಿ ಒಬ್ಬರು ಕೆಇಎ ಸಿಬ್ಬಂದಿ ಇದ್ದಾರೆ. ಇತರರಲ್ಲಿ ಮಧ್ಯವರ್ತಿಗಳು ಮತ್ತು ಕೆಲವು ಎಂಜಿನಿಯರಿಂಗ್ ಕಾಲೇಜುಗಳ ಕೆಲವು ಸಿಬ್ಬಂದಿ ಸೇರಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಗಳನ್ನು ಸೋಮವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನಂತರ ಅವರನ್ನು 10 ದಿನಗಳ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಕೆಇಎ ನೀಡಿದ ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ವಂಚನೆ, ನಂಬಿಕೆ ದ್ರೋಹ, ಐಟಿ ಕಾಯ್ದೆಯ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಫ್ಐಆರ್ ಪ್ರಕಾರ, ಸೀಟು ತೆಗೆದುಕೊಳ್ಳುವ ಉದ್ದೇಶಹೊಂದಿಲ್ಲದ ಕೆಲವು ಅಭ್ಯರ್ಥಿಗಳನ್ನು ಕಾಲೇಜು ಆಯ್ಕೆ ನಮೂದಿಸಲು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.