ಬೆಂಗಳೂರು: ಪೂರ್ವ ವಲಯದಲ್ಲಿ ಅನಧಿಕೃತ ಕಟ್ಟಡಗಳ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪೂರ್ವ ವಲಯದ ಪಿ.ಯು.ಬಿ ಕಟ್ಟಡದ 10ನೇ ಮಹಡಿಯಲ್ಲಿ ನಡೆದ ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ವೇಳೆ ಮಾತನಾಡಿದ ಅವರು, ಅನಧಿಕೃತ ಕಟ್ಟಡ ನಿರ್ಮಾಣ ಮಾಡುವವರಿಗೆ ನೋಟೀಸ್ ಜಾರಿ ಮಾಡಿ ಕಾಲಮಿತಿಯೊಳಗಾಗಿ ಅನಧಿಕೃತ ಕಟ್ಟಡ ಹಾಗೂ ಕಟ್ಟಡದ ವ್ಯತಿರಿಕ್ತ ಭಾಗಗಳನ್ನು ತೆರವುಗೊಳಿಸಲು ಸೂಚನೆ ನೀಡಿದರು.
ಕಸ್ತೂರಿ ನಗರದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಮಾಡಿ:
ಸಿ.ವಿ. ರಾಮನ್ ನಗರದ ಕಸ್ತೂರಿ ನಗರ ವ್ಯಾಪ್ತಿಯ ರಸ್ತೆ ಬದಿ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪಾದಚಾರಿ ಮಾರ್ಗಗಳಲ್ಲಿ ಒತ್ತುವರಿಯಾಗಿರುವುದನ್ನು ಪಾಲಿಕೆ ವತಿಯಿಂದ ತೆರವುಗೊಳಿಸಲಾಗುತ್ತಿದ್ದು, ಪಾದಚಾರಿ ಮಾರ್ಗದಲ್ಲಿ ಒತ್ತುವರಿ ತೆರವುಮಾಡಿ ಶಾಶ್ವತವಾಗಿ ಸ್ಥಾಪಿಸಿರುವ ಪೆಟ್ಟಿಗೆಗಳು ಇಲ್ಲದಂತೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ಜಲಮಂಡಳಿಯಿಂದ ರಸ್ತೆ ಮುಚ್ಚಿಸಿ:
ನ್ಯೂ ತಿಪ್ಪಸಂದ್ರ ವೆಂಕಟೇಶ್ವರ ಕಾಲೋನಿ ರಸ್ತೆಯಲ್ಲಿ ಒಳಚರಂಡಿಯ ಕಾಮಗಾರಿಗಾಗಿ ರಸ್ತೆ ಮಧ್ಯದ ಭಾಗ ಅಗೆದಿದ್ದು, ಕಾಮಗಾರಿ ಪೂರ್ಣಗೊಂಡು 6 ತಿಂಗಳಾದರೂ ರಸ್ತೆ ದುರಸ್ತಿ ಮಾಡಿರುವುದಿಲ್ಲ ಎಂದು ಕೇಳಿದ ಪ್ರಶ್ನೆಗೆ, ಜಲಮಂಡಳಿ ಅಧಿಕಾರಿಗಳ ಜೊತೆ ಮಾತನಾಡಿ ಕೂಡಲೆ ರಸ್ತೆ ಅಗೆದಿರುವ ಭಾಗವನ್ನು ಜಲಮಂಡಳಿಯಿಂದ ಮುಚ್ಚಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾಕ್ಸ್ ಟೌನ್ ಮಾರುಕಟ್ಟೆ ತೆರೆಯಲು ಮನವಿ:
ಕಾಕ್ಸ್ ಟೌನ್ ನಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಿದ್ದು, ಅದನ್ನು ಇನ್ನೂ ತೆರೆದಿರುವುದಿಲ್ಲ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕಾಕ್ಸ್ ಟೌನ್ ಮಾರುಕಟ್ಟೆ ತೆರವು ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದರು.
ಅಪಘಾತ ಜಾಗಗಳನ್ನು ನಿಯಂತ್ರಿಸಿ:
ಪೂರ್ವ ವಲಯ ವ್ಯಾಪ್ತಿಯಲ್ಲಿ ಅಪಘಾತ ಸ್ಥಳಗಳನ್ನು ಗುರುತಿಸಿ, ಆ ಸ್ಥಳಗಳಲ್ಲಿ ಸಂಚಾರ ಪೊಲೀಸ್ ಅಧಿಕಾರಿಗಳ ಸಲಹೆ ಮೇರೆಗೆ ರಸ್ತೆ ಉಬ್ಬುಗಳನ್ನು ಹಾಕಿ ರಸ್ತೆಯಲ್ಲಾಗುವ ಅಪಘಾತಗಳನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.
ಸಾರ್ವಜನಿಕರಿಂದ 66 ದೂರುಗಳ ಸ್ವೀಕಾರ:
ಪೂರ್ವ ವಲಯದಲ್ಲಿ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದಲ್ಲಿ 66 ದೂರುಗಳನ್ನು ಸ್ವೀಕರಿಸಲಾಗಿದ್ದು, ಎಲ್ಲಾ ಸಮಸ್ಯೆಗಳನ್ನು ನಿಗದಿತ ಸಮಯದೊಳಗಾಗಿ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾರ್ವಜನಿಕರಿಂದ ಬಂದ ಪ್ರಮುಖ ಅಹವಾಲುಗಳ ವಿವರ:
1. ಸದಾನಂದ ನಗರದಲ್ಲಿ ರಸ್ತೆ ಡಾಂಬರೀಕರಣ ಮಾಡಲು ಮನವಿ.
2. ಇ-ಖಾತಾ ಪಡೆಯಲು ಸಮಸ್ಯೆಯಾಗುತ್ತಿದ್ದು, ಕೂಡಲೆ ಇ-ಖಾತಾ ವ್ಯವಸ್ಥೆ ಮಾಡಿಕೊಡಲು ಮನವಿ.
3. ಬೀದಿ ದೀಪಗಳನ್ನು ಅಳವಡಿಸಲು ಮನವಿ.
4. ಅನಧಿಕೃತ ಕಟ್ಟಡ ಹಾವಾಳಿ ಹೆಚ್ಚಾಗಿದ್ದು, ಅದನ್ನು ನಿಯಂತ್ರಿಸಲು ಮನವಿ.
5. ಉಚ್ಛ ನ್ಯಾಯಾಲಯದ ಆವರಣದಲ್ಲಿ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಮಾಡಲು ಮನವಿ.
6. ಖಾಲಿ ಜಾಗದಲ್ಲಿ ತ್ಯಾಜ್ಯ ಬಿಸಾಡುತ್ತಿದ್ದು, ಅದನ್ನು ನಿಯಂತ್ರಿಸಲು ಮನವಿ.
7. ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಮಾಡಲು ಮನವಿ.
8. ರಸ್ತೆ ಬದಿ ಚರಂಡಿಗಳಲ್ಲಿ ಹೂಳೆತ್ತಿ ಸ್ವಚ್ಛತೆ ಕಾಪಾಡಲು ಮನವಿ.
9. ಅನಧಿಕೃತ ರಸ್ತೆ ಕತ್ತರಿಸುವಿಕೆಯನ್ನು ನಿಯಂತ್ರಿಸಲು ಮನವಿ.
10. ರಿಚರ್ಡ್ಸ್ ಟೌನ್ ನಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲು ಮನವಿ.
11. ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಒಳಚರಂಡಿಯಿಂದ ಕೊಳಚೆ ನೀರು ಹುಕ್ಕಿ ಬರುತ್ತಿದ್ದು, ಅದನ್ನು ನಿಯಂತ್ರಿಸಲು ಮನವಿ.
12. ಅಸ್ಸೆಯಾ ರಸ್ತೆಯಲ್ಲಿ ಗ್ರೇಂಟಿಂಗ್ಸ್ ಗಳ ಮೇಲೆ ಅಳವಡಿಸಿರುವ ಗ್ರಿಲ್ ಗಳು ಹಾಳಾಗಿದ್ದು, ಅದನ್ನು ದುರಸ್ತಿ ಪಡಿಸಲು ಮನವಿ.
13. ರಸ್ತೆಯಲ್ಲಿ ವೇಗ ತಗ್ಗಿಸಲು ರಸ್ತೆ ಉಬ್ಬುಗಳನ್ನು ನಿರ್ಮಿಸಿದ್ದು, ಅದಕ್ಕೆ ಮಾರ್ಕಿಂಗ್ ಮಾಡಲು ಮನವಿ.
14. ಸ್ಕೈವಾಕ್ ಗಳನ್ನು ಸರಿಯಾಗಿ ನಿರ್ವಹಣೆ ಮಾಡಲು ಮನವಿ.
15. ಹೊರ ವರ್ತುಲ ರಸ್ತೆಯ ಸರ್ವೀಸ್ ರಸ್ತೆಯಲ್ಲಿ ಬೀದಿ ದೀಪಗಳನ್ನು ಅಳವಡಿಸಲು ಮನವಿ. ಈ ವೇಳೆ ವಲಯ ಆಯುಕ್ತರಾದ ಪ್ರೀತಿ ಗೆಹ್ಲೋಟ್, ವಲಯ ಜಂಟಿ ಆಯುಕ್ತರಾದ ಸರೋಜಾ, ಮುಖ್ಯ ಅಭಿಯಂತರರಾದ ಸುಗುಣಾ, ಉಪ ಆಯುಕ್ತರಾದ ರಾಜು, ಕಾರ್ಯಪಾಲಕ ಅಭಿಯಂತರರು, ಆರೋಗ್ಯಾಧಿಕಾರಿ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು