ತಿಪಟೂರು : ಹಿಂದೂ ಸಮಾಜದಲ್ಲಿ ಮನೆಗೊಬ್ಬ ಭಗತ್ ಸಿಂಗ್ ಹುಟ್ಟಬೇಕು ಎಂದು ಕುಪ್ಪೂರು-ತಮ್ಮಡಿಹಳ್ಳಿ ವಿರಕ್ತ ಮಠದ ಪೀಠಾಧ್ಯಕ್ಷರಾದ ಶ್ರೀ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಮಹಾಸ್ವಾಮೀಜಿ ಕರೆ ನೀಡಿದರು. ಅವರು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ ಖಂಡಿಸಿ, ಪಟ್ಟಣದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯಿಂದ ನಡೆದ ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.
ಹಿಂದೂ ಸಮಾಜ ತಮ್ಮ ಉಳಿವಿಗಾಗಿ ಶತ್ರುಗಳ ಬಗ್ಗೆ ಜಾಗೃತರಾಗುವ ಅಗತ್ಯವಿದೆ. ಬಾಂಗ್ಲಾ ದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಜಿಹಾದಿ ಶಕ್ತಿಗಳ ದೌರ್ಜನ್ಯವನ್ನು ತಡೆಯಲು ವಿಶ್ವಸಂಸ್ಥೆ, ಮಾನವ ಹಕ್ಕುಗಳ ಆಯೋಗ ಕೆಲಸ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಗ್ರಾಮದೇವತೆ ಶ್ರೀ ಕೆಂಪಮ್ಮದೇವಿ ದೇವಾಲಯದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಕೋಡಿ ಸರ್ಕಲ್, ದೊಡ್ಡಪೇಟೆ, ಬಿ.ಹೆಚ್.ರಸ್ತೆ ಮೂಲಕ ಸಾಗಿ ಶ್ರೀ ಜಯದೇವ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಸಮಾವೇಶ ನಡೆಸಲಾಯಿತು. ಪ್ರತಿಭಟನಾನಿರತರು ಬಾಂಗ್ಲಾದೇಶ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತಲ್ಲದೆ, ಉಪವಿಭಾಗಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ತಿಪಟೂರು ಗುರುಕುಲಾನಂದಾಶ್ರಮದ ಶ್ರೀ ಇಮ್ಮಡಿ ಕರಿಬಸವ ದೇಶೀಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ವಿಶ್ವದಲ್ಲಿಯೇ ಶಾಂತಿ ಸೌರ್ಹಾರ್ದತೆ ಕಾಪಾಡುವ ಹಿಂದೂ ಸಮಾಜದ ಮೇಲೆ ದುಷ್ಟಶಕ್ತಿಗಳು ದೌರ್ಜನ್ಯ ಮಾಡುತ್ತಿದ್ದಾರೆ. ಬಾಂಗ್ಲಾದೇಶದಲ್ಲಿ ಅತ್ಯಾಚಾರ, ಅನಾಚಾರ ಮಿತಿಮೀರಿದೆ. ಇಸ್ಕಾನ್ ಮಂದಿರ, ದುರ್ಗಾಮಂದಿರ ಸೇರಿದಂತೆ ಹಿಂದೂಗಳ ಮನೆ ಮಠಗಳನ್ನು ಧ್ವಂಸ ಮಾಡಲಾಗಿದೆ. ಭಾರತ ಸರ್ಕಾರ ಸಂಕಷ್ಟದಲ್ಲಿ ಇರುವ ಬಾಂಗ್ಲಾ ದೇಶದ ಹಿಂದೂಗಳ ನೆರವಿಗೆ ಧಾವಿಸಬೇಕು ಎಂದು ತಿಳಿಸಿದರು.
ಚಿನ್ಮಯಿ ಕೃಷ್ಣದಾಸ್ ರವರನ್ನು ಭಯೋತ್ಪಾದಕರಂತೆ ಬಿಂಬಿಸಲಾಗುತ್ತಿದೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ, ಮಾನವ ಹಕ್ಕುಗಳ ಹರಣವಾಗುತ್ತಿದೆ. ವಿಶ್ವಸಂಸ್ಥೆ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಮೌನವಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಪ್ರತಿಯೊಬ್ಬ ಹಿಂದೂವೂ ಸಹ ಬಾಂಗ್ಲಾದೇಶದ ಹಿಂದೂಗಳ ಪರವಾಗಿ ನಿಲ್ಲಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಬಿ.ಸಿ.ನಾಗೇಶ್, ಹಿಂದೂ ಹಿತರಕ್ಷಣಾ ವೇದಿಕೆಯ ರೇಣುಕಾರಾಧ್ಯ, ರಂಗಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ್, ಬಿಜೆಪಿ ಮುಖಂಡರಾದ ಗಂಗರಾಜು, ಬಿಸ್ಲೇಹಳ್ಳಿ ಜಗದೀಶ್, ಮಾಜಿ ನಗರಸಭೆ ಅಧ್ಯಕ್ಷ ರಾಮ್ಮೋಹನ್, ಸದಸ್ಯ ಶಶಿಕಿರಣ್, ಹಿಂದೂ ಸಮಾಜದ ಮುಖಂಡ ವಿನಯ್ ಮಡೇನೂರು, ಭಜರಂಗ ದಳದ ನಾಗೇಶ್, ರಂಗಾಪುರ ನಾಗೇಶ್, ಉಮೇಶ್, ಗುಲಾಬಿ ಸುರೇಶ್, ಬಾಳೆಕಾಯಿ ನಟರಾಜ್, ಗಾಡಿ ಮಂಜುನಾಥ್, ಕೃಷ್ಣಪ್ಪ, ಹರ್ಷ, ಚೇತನ್ ಮತ್ತು ಬಳ್ಳೆಕಟ್ಟೆ ಸುರೇಶ್ ಸೇರಿದಂತೆ ವೇದಿಕೆಯ ಪದಾಧಿಕಾರಿಗಳು, ಹಿಂದೂ ಪರ ಸಂಘಟನೆಗಳ ಮತ್ತು ಸಮಾಜದ ಮುಖಂಡರುಗಳು ಹಾಗೂ ಕಾರ್ಯಕರ್ತರಿದ್ದರು.