ನ್ಯೂ ಇಯರ್ಗೆ ಕಿಕ್ ಏರಿಸಲು ಬಂದಿದ್ದ ಭಾರಿ ಪ್ರಮಾಣದ ಡ್ರಗ್ಸ್ ಸೀಜ್

ನ್ಯೂ ಇಯರ್ಗೆ ಕಿಕ್ ಏರಿಸಲು ಬಂದಿದ್ದ ಭಾರಿ ಪ್ರಮಾಣದ ಡ್ರಗ್ಸ್ ಸೀಜ್

ಬೆಂಗಳೂರು: ಹೊಸ ವರ್ಷಾಚರಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಹಿನ್ನೆಲೆ ಬೆಂಗಳೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಪಾರ್ಟಿಗಳಲ್ಲಿ ನಶೆ ಕಿಕ್ ಕೊಡಲು ಬಂದಿದ್ದ ಭಾರಿ ಪ್ರಮಾಣ ಡ್ರಗ್ಸ್ ಅನ್ನು ಜಪ್ತಿ ಮಾಡಿದ್ದಾರೆ. ಅಲ್ಲದೆ ಡ್ರಗ್ಸ್ ಪೆಡ್ಲರ್ಗಳ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಅವರು ಮಾಹಿತಿ ನೀಡಿದ್ದಾರೆ. ಸಿಸಿಬಿಯ ಮಾದಕ ವಸ್ತುಗಳ ನಿಗ್ರಹ ದಳ ಇಬ್ಬರು ಮಾದಕ ವಸ್ತು ಮಾರಾಟಗಾರರನ್ನು ಬಂಧಿಸಿ, ಅವರಿಂದ ಬರೋಬ್ಬರಿ 71 ಲಕ್ಷ ರೂಪಾಯಿ ಮೌಲ್ಯದ ನಿಷೇಧಿತ ಅಕ್ರಮ ವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದು ವಿವರಿಸಿದ್ದಾರೆ.

ಪೊಲೀಸರ ಕಾರ್ಯಾಚರಣೆಯಲ್ಲಿ 15.05 ಗ್ರಾಂ ಎಂಡಿಎಂಎ ಕ್ರಿಸ್ಟಲ್ಗಳು, 934 ಗ್ರಾಂ ಹೈಡ್ರೋ ಗಾಂಜಾ, 2.745 ಕೆ.ಜಿ ಗಾಂಜಾ, 30 ಎಂಡಿಎಂಎ ಎಕ್ಸ್ಟಸಿ ಮಾತ್ರೆಗಳು, 18 ಎಲ್ಎಸ್ಡಿ ಸ್ಟ್ರಿಪ್ಗಳು ಮತ್ತು 309 ಗ್ರಾಂ ಹಾಷಿಶ್ ಎಣ್ಣೆ ಹಾಗೂ ಮೊಬೈಲ್ ಫೋನ್ಗಳು ಮತ್ತು ವಿದ್ಯುತ್ ತೂಕದ ಯಂತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನು ಕೋಡಿಗೇಹಳ್ಳಿ ಪೊಲೀಸ್ ಠಾಣೆ ಪೊಲೀಸರು ನಿಷೇಧಿತ ಅಕ್ರಮ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ನಾಲ್ಕು ವ್ಯಕ್ತಿಗಳನ್ನು ಅರೆಸ್ಟ್ ಮಾಡಿದ್ದಾರೆ. ಅವರಿಂದ ಒಟ್ಟು 8.6 ಕೆ.ಜಿ ಗಾಂಜಾ ಹಾಗೂ ಅಪರಾಧದಲ್ಲಿ ಬಳಸಿದ ಆಟೋ-ರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟಾರೆ ಮೊತ್ತ ಬರೋಬ್ಬರಿ 8.6 ಲಕ್ಷ ರೂಪಾಯಿಗಳು ಎಂದು ತಿಳಿದುಬಂದಿದೆ.

ಬೆಂಗಳೂರು ದಕ್ಷಿಣ ವಿಭಾಗದ ಸಿಇಎನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕ್ಯಾಶ್ ಫ್ರೀ ಪೇಮೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನಿಂದ 15,58,709 ರೂಪಾಯಿ ವಂಚಿಸಿದ ಆರೋಪಿಯನ್ನು ಹರಿಯಾಣದಲ್ಲಿ ಯಶಸ್ವಿಯಾಗಿ ಬಂಧಿಸಲಾಗಿದೆ. ಸಿವೈಇಎನ್ ಕಂಪನಿಯೊಂದಿಗೆ ಸಂಬಂಧ ಹೊಂದಿರುವ ಆರೋಪಿಯು ಗ್ರಾಹಕರ ಮರುಪಾವತಿಗಳನ್ನು ತಡೆಹಿಡಿಯುವ ಮೂಲಕ ವಂಚನೆಯ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.

ತಿಲಕ ನಗರ ಪೊಲೀಸರು 15 ಲಕ್ಷ ರೂಪಾಯಿ ಮೌಲ್ಯದ 11 ದ್ವಿಚಕ್ರ ವಾಹನಗಳು, 40 ಗ್ಯಾಸ್ ಸಿಲಿಂಡರ್ಗಳು ಮತ್ತು 28 ಬ್ಯಾಟರಿಗಳ ಕಳ್ಳತನದಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಳ್ಳತನಗಳು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಹಲವಾರು ಪ್ರಕರಣಗಳಿಗೆ ಸಂಬಂಧಿಸಿವೆ ಎಂದು ಹೇಳಿದ್ದಾರೆ. ಬೆಂಗಳೂರಿನಾದ್ಯಂತ ಮೊಬೈಲ್ ಫೋನ್ ಮತ್ತು ದ್ವಿಚಕ್ರ ವಾಹನ ಕಳ್ಳತನದಲ್ಲಿ ತೊಡಗಿದ್ದ ಇಬ್ಬರನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ. 13 ಲಕ್ಷ ರೂಪಾಯಿ ಮೌಲ್ಯದ ಒಟ್ಟು 20 ಮೊಬೈಲ್ ಫೋನ್ಗಳು ಹಾಗೂ 15 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಲ್ಲಿ ಸಿಕ್ಕಿರುವ ವಸ್ತುಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಅನೇಕ ಪ್ರಕರಣಗಳಿಗೆ ಸಂಬಂಧಿಸಿದ್ದು ಎನ್ನಲಾಗಿದೆ.

ಸುದ್ದಗುಂಟೇಪಾಳ್ಯ ಪೊಲೀಸ್ ಠಾಣೆ ದ್ವಿಚಕ್ರ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ನಾಲ್ಕು ಆರೋಪಿಗಳನ್ನು ಬಂಧಿಸಿದ್ದು, 21 ಲಕ್ಷ ಮೌಲ್ಯದ 13 ಕಳ್ಳತನವಾದ ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣಗಳು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿವೆ. ವಶಪಡಿಸಿಕೊಂಡಿರುವ ಇನ್ನೂ 5 ಬೈಕ್ಗಳ ಮಾಲೀಕರನ್ನು ಗುರುತಿಸುವ ಕೆಲಸ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Leave a Reply

Your email address will not be published. Required fields are marked *