ದೇವೇಗೌಡರೇ ನಮ್ಮ ಸರ್ಕಾರ ಕಿತ್ತುಹಾಕಲು ಅದು ಹಾಸನದಲ್ಲಿ ಬೆಳೆಯುವ ಆಲೂಗಡ್ಡೆ ಗಿಡವಲ್ಲ: ಡಿ ಕೆ ಶಿವಕುಮಾರ್

ದೇವೇಗೌಡರೇ ನಮ್ಮ ಸರ್ಕಾರ ಕಿತ್ತುಹಾಕಲು ಅದು ಹಾಸನದಲ್ಲಿ ಬೆಳೆಯುವ ಆಲೂಗಡ್ಡೆ ಗಿಡವಲ್ಲ: ಡಿ ಕೆ ಶಿವಕುಮಾರ್

ಹಾಸನ : ಕುಮಾರಸ್ವಾಮಿ, ದೇವೇಗೌಡರು ಉಪಚುನಾವಣೆ ಸಮಯದಲ್ಲಿ ಈ ಸರ್ಕಾರವನ್ನು ಆರು ತಿಂಗಳಲ್ಲಿ ಕಿತ್ತೊಗೆಯುತ್ತೇವೆ ಎಂದು ಹೇಳಿದರು. ದೇವೇಗೌಡರೇ ಕಿತ್ತುಹಾಕಲು ನಮ್ಮ ಸರ್ಕಾರ ಹಾಸನದಲ್ಲಿ ಬೆಳೆಯುವ ಆಲೂಗಡ್ಡೆ ಗಿಡವಲ್ಲ. 138 ಶಾಸಕರ ಜನಬೆಂಬಲವಿರುವ ಸರ್ಕಾರ ಇದು. ಇದನ್ನು ಕಿತ್ತುಹಾಕಲು ನಿಮ್ಮ ಹಣೆಯಲ್ಲಿ ಬರೆದಿಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.

ನಿಮ್ಮ ಕುತಂತ್ರಗಳು ಯಶಸ್ವಿಯಾಗಲಿಲ್ಲ ಎಂದು ಬಿಜೆಪಿ ಪಕ್ಷದ ನಾಯಕರಿಗೆ ಹೇಳಲು ಬಯಸುತ್ತೇನೆ. ನಿಮ್ಮ ಕುತಂತ್ರಕ್ಕೆ ಜನರು ಈಗಾಗಲೇ ಉತ್ತರ ಕೊಟ್ಟಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಸಂಡೂರು, ಕಿತ್ತೂರು ಕರ್ನಾಟಕದ ಶಿಗ್ಗಾಂವಿಯಲ್ಲಿ ಮಾಜಿ ಸಿಎಂ ಬೊಮ್ಮಾಯಿ ಅವರ ಪುತ್ರನನ್ನು ಜನ ಸೋಲಿಸಿದ್ದಾರೆ. ಹಳೇ ಮೈಸೂರು ಭಾಗದ ಚನ್ನಪಟ್ಟಣದಲ್ಲಿ ಮಾಜಿ ಪ್ರಧಾನಮಂತ್ರಿಯ ಮೊಮ್ಮಗ, ಮಾಜಿ ಮುಖ್ಯಮಂತ್ರಿಯ ಮಗನನ್ನು ಜನ ಒಪ್ಪಿಲ್ಲ. ನಿಮ್ಮನ್ನು ಜನ ಮತ್ತೆ ಒಪ್ಪಲು ಸಾಧ್ಯವಿಲ್ಲ. 2028ಕ್ಕೆ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿದೆ. ಪ್ರತಿಯೊಬ್ಬರ ಜನರ ಬದುಕಿನಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳು ಪರಿಣಾಮ ಬೀರಿವೆ. ನಮ್ಮ ಮಾದರಿಯನ್ನು ಬಿಜೆಪಿಯು ಬೇರೆ ಬೇರೆ ರಾಜ್ಯಗಳಲ್ಲಿ ನಕಲು ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಯಾವುದೇ ಕಾರ್ಯಕ್ರಮ ಕೊಟ್ಟರೂ ಅದನ್ನು ನಾವು ಉಳಿಸಿಕೊಂಡು ಬರುತ್ತಿದ್ದೇವೆ. ಇಂದಿರಾ ಗಾಂಧಿ ಅವರ ಕಾಲದಿಂದ ಮನಮೋಹನ್ ಸಿಂಗ್ ಅವರ ಕಾಲದವರೆಗೂ ನಾವು ಶಾಸನಬದ್ಧ ಕಾರ್ಯಕ್ರಮ ನೀಡುತ್ತಾ ಬಂದಿದೆ. ಅಂಬೇಡ್ಕರ್ ಅವರು ನಮ್ಮ ದೊಡ್ಡ ಶಕ್ತಿ. ದೇಶದಲ್ಲಿ ಅತಿ ಹೆಚ್ಚು ಪ್ರತಿಮೆ ಇರುವುದು ಅಂಬೇಡ್ಕರ್ ಅವರದ್ದು ಮಾತ್ರ. ಕಾಂಗ್ರೆಸ್ ಸರ್ಕಾರದಲ್ಲಿ ಅವರು ಕೊಟ್ಟ ಸಂವಿಧಾನವನ್ನು ನಾವೆಲ್ಲರೂ ಸೇರಿ ಉಳಿಸಬೇಕು. ಈ ಜಿಲ್ಲೆಯ ಜನರ ಸ್ವಾಭಿಮಾನ ರಕ್ಷಣೆ ಮಾಡಿ, ಜನಕಲ್ಯಾಣ ಯಾತ್ರೆ ಆರಂಭಿಸಿದ್ದೇವೆ. ನನ್ನ ಗುರುಗಳು ನನಗೆ ಒಂದು ಮಾತು ಹೇಳಿಕೊಟ್ಟಿದ್ದಾರೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದ ವಿಶ್ವಕ್ಕೆ ಶಾಂತಿ ನೆಲೆಸಲಿ ಎಂದು ಹೇಳಿದ್ದಾರೆ. ನಾವು ಬಡವರಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಅದೇ ರೀತಿ ಸಂಪುಟ ಸಚಿವರೆಲ್ಲರೂ ಸೇರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಈ ರಾಜ್ಯದ ಸೇವೆ ಮಾಡಿ ನಿಮ್ಮ ಋಣ ತೀರಿಸುತ್ತೇವೆ.

ನೀವು ಮುಂದಿನ ಚುನಾವಣೆಯಲ್ಲಿ ಈ ಜಿಲ್ಲೆಯ ಜನ ಕೇವಲ ಸಂಸದರು ಹಾಗೂ ಶಿವಲಿಂಗೇಗೌಡರನ್ನು ಮಾತ್ರ ಗೆಲ್ಲಿಸುವುದಲ್ಲ. ಇಲ್ಲಿರುವ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಬೇಕು ಎಂದು ಡಿ ಕೆ ಶಿವಕುಮಾರ್ ಅವರು ಮತದಾರರ ಬಳಿ ಕೇಳಿಕೊಂಡರು.

Leave a Reply

Your email address will not be published. Required fields are marked *