ಕಲಬುರಗಿ: ಜಿಲ್ಲೆಯ ಯಾಡ್ರಾಮಿಯಲ್ಲಿ ಇತ್ತೀಚಿಗೆ ನಡೆದ ೧೧ ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಖಂಡಿಸಿ ಬಂಜಾರ ಸಮಾಜ, ವಿಶ್ವ ಹಿಂದೂ ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸಕಲ ಹಿಂದೂ ಸಮಾಜ ಒಕ್ಕೂಟದಡಿ ಸೋಮವಾರ ಪ್ರತಿಭಟನೆ ನಡೆಸಿದರು.
ಬಂಜಾರ ಭವನದಲ್ಲಿ ಜಮಾಯಿಸಿದ ಸಮುದಾಯದ ಕಾರ್ಯಕರ್ತರು ಮಿನಿ ವಿಧಾನಸೌಧವರಗೂ ಜಾಥಾ ನಡೆಸಿದರು. ಎಸ್ವಿಪಿ ಸರ್ಕಲ್ ಕಡೆಗೆ ಹೋಗುತ್ತಿದ್ದಾಗ ಹಿಂಸಾಚಾರ ಭುಗಿಲೆದಿದ್ದು, ಮಿನಿ ವಿಧಾನಸೌಧದ ಎರಡನೇ ಗೇಟ್ ಬಳಿ ನಿಲ್ಲಿಸಿದ್ದ ಕಾರಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.
ಘಟನೆಯಲ್ಲಿ ಕಾರಿನ ಕಿಟಕಿ ಗಾಜುಗಳು ಪುಡಿ ಪುಡಿಯಾಗಿದ್ದು, ಕೆಲ ಅಂಗಡಿಗಳ ಮೇಲೂ ಕಲ್ಲು ತೂರಾಟ ನಡೆಸಲಾಗಿದೆ. ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಹಿಂಸಾಚಾರದಲ್ಲಿ ತೊಡಗಿಸಿಕೊಳ್ಳದಂತೆ ಮುಖಂಡರು ಕಾರ್ಯಕರ್ತರು ಮನವಿ ಮಾಡಿದರು.
ಮಾಜಿ ಸಂಸದ ಉಮೇಶ ಜಾಧವ್, ಮಾಜಿ ಸಚಿವ ರೇವು ನಾಯ್ಕ್ ಬೆಳಮಗಿ, ವಿಎಚ್ಪಿ ಹಿರಿಯ ಮುಖಂಡ ಲಿಂಗರಾಜಪ್ಪ ಅಪ್ಪ, ಶ್ರೀರಾಮಸೇನೆ ರಾಜ್ಯ ಘಟಕದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಸಮುದಾಯದ ಮುಖಂಡರು, ಮಿನಿ ವಿಧಾನಸೌಧ ಹಾಗೂ ಎಸ್ವಿಪಿ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯನ್ನು ತಡೆದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಪ್ರಾಪ್ತರು ಸೇರಿದಂತೆ ಮಹಿಳೆಯರ ಮೇಲಿನ ದೌರ್ಜನ್ಯಗಳು, ಅತ್ಯಾಚಾರ ಘಟನೆಗಳು ಹೆಚ್ಚಿವೆ ಎಂದು ಜಾಧವ್ ಆರೋಪಿಸಿದರು. ೫ನೇ ತರಗತಿಯಲ್ಲಿ ಓದುತ್ತಿದ್ದ ಸಂತ್ರಸ್ತೆ ಮೇಲೆ ಅತ್ಯಾಚಾರ ನಡೆಸಿರುವ ಸಂಸ್ಥೆಯ ಮುಖ್ಯಸ್ಥರಾಗಿರುವ ಆರೋಪಿಗೆ ಮರಣದಂಡನೆ ವಿಧಿಸಬೇಕೆಂದು ಎಲ್ಲಾ ನಾಯಕರು ಒತ್ತಾಯಿಸಿದರು.