ಬೆಲ್ಲದ ನೀರು ಕುಡಿದರೆ ಏನೆಲ್ಲ ಬದಲಾವಣೆಯಾಗುತ್ತೆ ಗೊತ್ತಾ?
ಬಲ್ಲವನೇ ಬಲ್ಲ ಬೆಲ್ಲದ ಸವಿಯ ಎಂಬ ಮಾತಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಪ್ರತಿ ವ್ಯಕ್ತಿಯು ಸಕ್ಕರೆ ಬದಲು ಬೆಲ್ಲವನ್ನು ಆಯ್ದುಕೊಳ್ಳುತ್ತಾನೆ. ಏಕೆಂದರೆ, ಸಕ್ಕರೆ ಆರೋಗ್ಯಕ್ಕೆ ಅಪಾಯಕಾರಿ ಎಂಬುದು ತಿಳಿದಿದೆ. ಆದರೂ ಇಂದು ಅನೇಕ ಮಂದಿ ಸಕ್ಕರೆಗೆ ಅವಲಂಬಿತರಾಗಿದ್ದಾರೆ.
ಬೆಲ್ಲವನ್ನು ನಿರ್ಲಕ್ಷಿಸುವ ಅನೇಕ ಮಂದಿಯೂ ಇದಾರೆ. ಆದರೆ, ಬೆಲ್ಲದಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿದ್ರೆ ಖಂಡಿತವಾಗಿ ಬೆಲ್ಲವನ್ನು ಇಷ್ಟಪಡದೇ ಇರುವುದಿಲ್ಲ.
ಸಕ್ಕರೆಗೆ ಬೆಲ್ಲ ಉತ್ತಮ ಪರ್ಯಾಯವಾಗಿದೆ. ಹೀಗಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಬೆಲ್ಲ ನಿಮ್ಮ ಆದ್ಯತೆಯಾಗಿರಲಿ. ಆದಷ್ಟು ಸಕ್ಕರೆಯನ್ನು ತಪ್ಪಿಸಿ. ಅಂದಹಾಗೆ ಬೆಲ್ಲದಲ್ಲಿ ಕಬ್ಬಿಣ, ಮೆಗ್ನೀಶಿಯಂ ಮತ್ತು ಪೊಟ್ಯಾಶಿಯಂ ಸಮೃದ್ಧವಾಗಿದೆ. ಅಲ್ಲದೆ, ಪ್ರೋಟೀನ್, ಕ್ಯಾಲ್ಸಿಯಂ, ಮ್ಯಾಂಗನೀಸ್, ಫಾಸ್ಪರಸ್, ಕಬ್ಬಿಣ, ವಿಟಮಿನ್ ಎ, ಸೆಲೆನಿಯಂ ಹಾಗೂ ಜಿಂಕ್ ಸೇರಿದಂತೆ ಬೆಲ್ಲವು ಅನೇಕ ಪೋಷಕಾಂಶಗಳ ಆಗರವಾಗಿದೆ.
ಬೆಲ್ಲವನ್ನು ಟೀ, ಕಾಫಿ ಹಾಗೂ ಆಹಾರ ಮುಂತಾದ ರೂಪದಲ್ಲಿ ಸೇವಿಸಬಹುದು. ಕೆಲವರು ಹಾಗೇ ತಿನ್ನಲು ಬಯಸುತ್ತಾರೆ. ಒಂದು ವೇಳೆ ಹಾಗೇ ತಿನ್ನಲು ಇಷ್ಟವಾಗದಿದ್ದರೆ, ನೀರಿನಲ್ಲಿ ಮಿಶ್ರಣ ಮಾಡಿ ಸೇವಿಸಬಹುದು. ಬೆಲ್ಲದ ನೀರು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಬೆಲ್ಲದ ನೀರು ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ.
ಬೆಲ್ಲದ ನೀರಿನಿಂದ ಯಾವ ಸಮಸ್ಯೆಗಳನ್ನು ಹೋಗಲಾಡಿಸಬಹುದು ಎಂಬುದನ್ನು ನಾವೀಗ ನೋಡೋಣ. ಬೆಲ್ಲದ ನೀರು ಉತ್ತಮ ನಿರ್ವಿಶೀಕರಣವಾಗಿ ಕೆಲಸ ಮಾಡುತ್ತದೆ. ಅಂದರೆ, ಬೆಲ್ಲದ ನೀರನ್ನು ಕುಡಿದರೆ, ಹೊಟ್ಟೆಯಲ್ಲಿರುವ ವಿಷಕಾರಿ ಅಂಶವನ್ನು ತೆಗೆದುಹಾಕುತ್ತದೆ. ಇದರಿಂದ ಲಿವರ್ ಕೂಡ ಸ್ವಚ್ಛವಾಗುತ್ತದೆ.
ಇನ್ನು ಬೆಲ್ಲದ ನೀರು ರಕ್ತವನ್ನು ಶುದ್ಧೀಕರಿಸಲು ಸಹ ಸಹಾಯ ಮಾಡುತ್ತದೆ. ಬೆಲ್ಲದ ನೀರನ್ನು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಬೆಲ್ಲದ ನೀರಿನಲ್ಲಿ ಆಯಂಟಿಆಕ್ಸಿಡೆಂಟ್ಗಳು ಕೂಡ ಸಮೃದ್ಧವಾಗಿವೆ. ಇದು ಅನೇಕ ರೀತಿಯ ಸೋಂಕುಗಳಿಂದ ರಕ್ಷಿಸುತ್ತದೆ. ಬೆಲ್ಲದ ನೀರು ಕುಡಿದರೆ ನೆಮ್ಮದಿ ಸಿಗುತ್ತದೆ. ಬೆಚ್ಚನೆಯ ಅನುಭವವಾಗುತ್ತದೆ.
ಶೀತದಿಂದ ಬಳಲುತ್ತಿರುವವರು ಬೆಲ್ಲದ ನೀರು ಕುಡಿದರೆ ಪರಿಹಾರ ಸಿಗುತ್ತದೆ. ಖಾಲಿ ಹೊಟ್ಟೆಯಲ್ಲಿ ಬೆಲ್ಲದ ನೀರನ್ನು ಸೇವಿಸುವುದರಿಂದ ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಶಕ್ತಿಯೂ ಹೆಚ್ಚುತ್ತದೆ. ಮಹಿಳೆಯರು ಬೆಲ್ಲದ ನೀರನ್ನು ಸೇವಿಸಿದರೆ, ಮುಟ್ಟಿನ ಸಮಯದಲ್ಲಿ ಉಂಟಾಗುವ ತೊಂದರೆಗಳು ದೂರವಾಗುತ್ತವೆ ಮತ್ತು ಉಸಿರಾಟದ ತೊಂದರೆಗಳು ಸಹ ದೂರವಾಗುತ್ತವೆ.
ಇದಿಷ್ಟೇ ಅಲ್ಲದೆ, ಬೆಲ್ಲದ ಸೇವನೆಯು ಹಿಮೋಗ್ಲೋಬಿನ್ ಮಟ್ಟವನ್ನು ಸಹ ಹೆಚ್ಚಿಸುತ್ತದೆ. ಪ್ರತಿರಕ್ಷಣಾ
ವ್ಯವಸ್ಥೆಯನ್ನು ಬಲಪಡಿಸುತ್ತದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಹೀಗಾಗಿ ಬೆಲ್ಲವು ನಿಮ್ಮ ಆದ್ಯತೆಯಾಗಿರಲಿ.