ಬೆಂಗಳೂರು: ಬೆಂಗಳೂರು ಟ್ರಾಫಿಕ್‌ನಲ್ಲಿ ನಿತ್ಯ ಹೈರಾಣಾಗುವ ವಾಹನ ಸವಾರರನ್ನು ಗಮನದಲ್ಲಿಟ್ಟುಕೊಂಡು ಮಹದೇವಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಸವಾರರಿಗೆ ಪರ್ಯಾಯ ಮಾರ್ಗದ ವ್ಯವಸ್ಥೆ ಸಹ ಮಾಡಲಾಗಿದೆ. ಈ ಎಲ್ಲ ಬದಲಾವಣೆಗಳು ಡಿಸೆಂಬರ್ 14ರ ಮಧ್ಯಾಹ್ನ 3 ಗಂಟೆಯಿಂದ ಡಿ.15ರ ಸಂಜೆ 5 ಗಂಟೆವರೆಗೆ ಜಾರಿಯಲ್ಲಿರುತ್ತವೆ ಎಂದು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಸಂಚಾರ ಸಲಹೆ ಕುರಿತು ಟ್ವೀಟ್ ಮಾಡಿರುವ ಬೆಂಗಳೂರು ಟ್ರಾಫಿಕ್ ಪೊಲೀಸ್ ವಿಭಾಗವು, ಮಹದೇವಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಟಿ.ಪಿ.ಒ ರಸ್ತೆ ಮತ್ತು ಇಪಿಐಪಿ ರಸ್ತೆಗಳಲ್ಲಿ ರೋಟರಿ ಕ್ಲಬ್ ಆಫ್ ಬೆಂಗಳೂರು ಹಾಗೂ ಐ.ಟಿ, ಕಾರಿಡರ್ ವತಿಯಿಂದ 17ನೇ ವರ್ಷದ ಮಿಡ್ ನೈಟ್ ಮ್ಯಾರಥಾನ್ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಈ ಭಾಗದಲ್ಲಿ ಓಡಾಡುವ ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಈ ಕೆಳಕಂಡಂತೆ ಸಂಚಾರ ಮಾರ್ಪಾಡು ಮಾಡಲಾಗಿದೆ.
ವಾಹನ ಸಂಚಾರ ನಿರ್ಬಂಧ ರಸ್ತೆಗಳು
ಕುಂದಲಹಳ್ಳಿ ಮುಖ್ಯರಸ್ತೆಯ ಕುಂದಲಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಇರುವ ಜಿಂಜರ್ ಹೋಟೆಲ್ ಜಂಕ್ಷನ್‌ನಿಂದ ಐಟಿಪಿಎಲ್ ಬ್ಯಾಕ್ ಗೇಟ್‌ವರೆಗೆ ಎಡಭಾಗದ ರಸ್ತೆ.
ನಿರ್ಬಂಧಿಸಿದ ರಸ್ತೆಗೆ ಪರ್ಯಾಯ ಮಾರ್ಗ
ಗ್ರಾಫೈಟ್ ಇಂಡಿಯಾ ಜಂಕ್ಷನ್‌ನಿಂದ ವೈದೇಹಿ, ಐ.ಟಿ.ಪಿ.ಎಲ್ ಕಡೆಗೆ ಸಂಚರಿಸುವ ವಾಹನ ಸವಾರರು/ಚಾಲಕರು ಕುಂದಲಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಇರುವ ಜಿಂಜರ್ ಹೋಟೆಲ್ ಬಳಿ ಬಲ ತಿರುವು ಪಡೆಯಬೇಕು. ಅಲ್ಲಿಂದ ಐಟಿಪಿಲ್ ಬ್ಯಾಕ್ ಗೇಟ್‌ವರೆಗೆ ಬಲ ಭಾಗದ ರಸ್ತೆಯಲ್ಲಿ ಸಂಚರಿಸಿ, ಬಿಗ್ ಬಜಾರ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಹೂಡಿ ಕಡೆಗೆ ತೆರಳಲು ನೇರವಾಗಿ ಸಂಚರಿಸಬಹುದು.
ಹೋಪ್ ಫಾರಂ ಕಡೆಗೆ ತೆರಳಲು ಶಾಂತಿನಿಕೇತನ ಜಂಕ್ಷನ್ ಬಳಿ ಬಲ ತಿರುವು ಪಡೆದು ಹೋಪ್ ಫಾರಂ ಮತ್ತು ಚನ್ನಸಂದ್ರ ಕಡೆಗೆ ಸಂಚರಿಸಬಹುದು.
ಇನ್ನೂ ಕುಂದಲಹಳ್ಳಿ ಕಡೆಯಿಂದ ವೈದೇಹಿ ಕಡೆಗೆ ಸಂಚರಿಸುವ ಬಿಎಂಟಿಸಿ ಬಸ್‌ಗಳು ಮತ್ತು ಭಾರಿ ಸರಕು ಸಾಗಣೆ ವಾಹನಗಳು ಗ್ರಾಫೈಟ್ ಇಂಡಿಯಾ ಜಂಕ್ಷನ್ನಲ್ಲಿ ನೇರವಾಗಿ ಸಂಚರಿಸಿ ಸುಮಧುರ ನಂದನ ಅಪಾರ್ಟ್ ಮೆಂಟ್ ಬಳಿ ಎಡ ತಿರುವು ಪಡೆಯಬೇಕು. ಬಳಿಕ ಅಲ್ಲಿಂದ ನೇರವಾಗಿ ಸಂಚರಿಸಿ ನೆಟ್ ಆಫ್ ಜಂಕ್ಷನ್ ಬಳಿ ಬಲ ತಿರುವು ಪಡೆದು ಐ.ಟಿ.ಪಿ.ಎಲ್ ಮತ್ತು ಹೋಪ್ ಫಾರಂ ಕಡೆಗೆ ಸಂಚರಿಸುವಂತೆ ಸಂಚಾರಿ ಪೊಲೀಸರು ಸಲಹೆ ನೀಡಿದ್ದಾರೆ.
ನಿತ್ಯದ ಕೆಲಸ ಕಾರ್ಯಗಳಿಗೆ, ಉದ್ಯೋಗಕ್ಕಾಗಿ ಇನ್ನಿತರೇ ಕಾರಣವಾಗಿ ಈ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಓಡಾಡುವವರು ಮಾರ್ಗ ಬದಲಾವಣೆ ಗಮನಿಸಿ ಓಡಾಡಬೇಕು. ಈ ಬದಲಾವಣೆಗೆ ಸಹರಿಸುವಂತೆ ಸಂಚಾರಿ ಪೊಲೀಸರು ಕೋರಿದ್ದಾರೆ.