ಚಿತ್ರದುರ್ಗ: ಅಪಘಾತಗಳಿಗೆ ಬ್ರೇಕ್ ಹಾಕಲು ರಸ್ತೆ ಅಗಲೀಕರಣಕ್ಕಾಗಿ ಸರ್ಕಾರ ಅನುದಾನ ನೀಡಿತ್ತು. ಆದರೆ ರಸ್ತೆ ಅಗಲೀಕರಣ ಮಾಡದೇ ರಸ್ತೆ ಮಧ್ಯೆ ಅವೈಜ್ಞಾನಿಕವಾಗಿ ಡಿವೈಡರ್ ಅಳವಡಿಸಿದ ಪರಿಣಾಮ ಅವಘಡಗಳು ಮಿತಿಮೀರಿದ ಬೆನ್ನಲ್ಲೇ ಎಚ್ಚೆತ್ತ ಚಿತ್ರದುರ್ಗ (Chitradurga) ಜಿಲ್ಲಾಡಳಿತ ರಸ್ತೆ ಅಗಲೀಕರಣಕ್ಕೆ ಮುಂದಾಗಿದೆ.
ಐತಿಹಾಸಿಕ ಹಿನ್ನೆಲೆಯ ಕೋಟೆನಾಡು ಚಿತ್ರದುರ್ಗ ಹೇಳಿಕೇಳಿ ರಾಜ್ಯದ ಪ್ರಮುಖ ಪ್ರವಾಸಿತಾಣ. ಈ ತಾಣದ ಅಭಿವೃದ್ಧಿಗೆ ಸರ್ಕಾರ ಕೋಟ್ಯಂತರ ರೂ. ಅನುದಾನ ನೀಡಿದೆ. ಇದನ್ನು ಸದುಪಯೋಗಪಡಿಸಿಕೊಂಡು ಸುಸಜ್ಜಿತ ರಸ್ತೆ ಮಾಡಬೇಕಾದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರಸ್ತೆ ಅಗಲೀಕರಣ (Road Widening) ಮಾಡದೇ ಅವೈಜ್ಞಾನಿಕವಾಗಿ ಡಿವೈಡರ್ ಅಳವಡಿಸಿರುವ ಪರಿಣಾಮ ಕೋಟೆನಾಡಿನ ಜನರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ಯೋಜನಬದ್ಧವಾಗಿ ರಸ್ತೆ ಅಗಲೀಕರಣ ಮಾಡದೇ, ಕಿಷ್ಕಿಂದೆಯಂತಹ ಪ್ರಮುಖ ರಸ್ತೆಯಲ್ಲಿ ಡಿವೈಡರ್ ಅಳವಡಿಸಿದ್ದು, ವಾಹನ ಸವಾರರು ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಿದೆ. ಎದುರಿಗೆ ಬರುವ ವಾಹನಗಳನ್ನು ತಪ್ಪಿಸಲು ಡಿವೈಡರ್ ಗಳಿಗೆ ವಾಹನ ಡಿಕ್ಕಿಯಾಗಿ ಅಪಘಾತ ಪ್ರಕರಣ ಹೆಚ್ಚಳವಾಗಿವೆ.