ಗದಗ: ಚಳಿಗಾಲ ಆರಂಭವಾದರೆ ಸಾಕು ಸಾವಿರಾರು ಕಿಲೋಮೀಟರ್ ದೂರದಿಂದ ವಿದೇಶಿ ಹಕ್ಕಿಗಳು ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆ ಆಗಮಿಸುತ್ತವೆ. ಪರಿಣಾಮ ಬೇರೆ ಬೇರೆ ಕಡೆಗಳಿಂದ ಪಕ್ಷಿಗಳು ವಲಸೆ ಬಂದಿರುವುದರಿಂದ ಕೆರೆಯಲ್ಲಿ ಈಗ ಬೆಳಗ್ಗೆಯಿಂದ ಸಂಜೆವರೆಗೆ ವಲಸೆ ಪಕ್ಷಿಗಳ ಸಾಮ್ರಾಜ್ಯವೇ ಕಂಡು ಬರುತ್ತಿದೆ.
ವಿದೇಶಿ ಪಕ್ಷಿಗಳ ಆಗಮನದಿಂದ ಗದಗ ಜಿಲ್ಲೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇಲ್ಲಿ ದೇಶ-ವಿದೇಶಿಗಳ ಹಕ್ಕಿಗಳು ಪ್ರತಿವರ್ಷ ಚಳಿಗಾಲದ ಸಮಯದಲ್ಲಿ ಲಗ್ಗೆ ಇಡುತ್ತವೆ. ಮಂಗೊಲಿಯಾ, ಆಸ್ಟ್ರೇಲಿಯಾ, ಸೇರಿದಂತೆ ಅನೇಕ ದೇಶದ ಪಕ್ಷಿಗಳು ಇಲ್ಲಿಗೆ ಆಗಮಿಸುತ್ತವೆ. ಆ ದೇಶದ ಹವಾಮಾನವೇ ಈ ಪಕ್ಷಿಗಳು ಇಲ್ಲಿಗೆ ಬರಲು ಕಾರಣ.
ನಾನಾ ಜಾತಿಯ ಪಕ್ಷಿಗಳು: ಮಾಗಡಿ ಕೆರೆಯ ನೀರಿನಲ್ಲಿ ಸ್ವಚ್ಛಂದವಾಗಿ ವಿಹರಿಸುವ ಪಕ್ಷಿಗಳ ಹಿಂಡುಗಳನ್ನು ನೋಡಿದಾಗ ಅಲ್ಲೊಂದು ಹೊಸದಾದ ಪಕ್ಷಿಲೋಕವೇ ಕಾಣಿಸುತ್ತದೆ. ಕೆರೆಯ ತುಂಬೆಲ್ಲ ಕಣ್ಣು ಹಾಯಿಸಿದಷ್ಟು ಪಕ್ಷಿಗಳ ಸಂಕುಲ ತುಂಬಿಕೊOಡಿದೆ. ಅದರಲ್ಲೂ ಪ್ರಮುಖವಾಗಿ ಬಾರ್ ಹಡೆಡ್ ಗೂಸ್, ಬ್ರಾಮಿಣಿ ಡೆಕ್, ಬ್ಲಾಕ್ ಐಬಿಸ್, ಇಟಲ್ ಗಿಬ್ಸ್, ರೆಡ್ ಥಾರ್ಟ, ಪಾಂಟೆಡ್ ಸ್ಪಾರ್ಕ್ ಸೇರಿದಂತೆ ಅನೇಕ ಜಾತಿಯ ಪಕ್ಷಿಗಳು ಇಲ್ಲಿಗೆ ಆಗಮಿಸುತ್ತವೆ. ಈ ಪಕ್ಷಿಗಳ ಹಾರಾಟ, ಕೂಗಾಟ, ಅವುಗಳ ಅಂದ ಚೆಂದ ಪಕ್ಷಿಪ್ರಿಯರಿಗೆ ಆನಂದ ಉಂಟು ಮಾಡಿವೆ.
ಪಕ್ಷಿಗಳ ಗುಂಪು ನೋಡುವುದು ಚಂದ: ಬೆಳಗ್ಗೆ ಸೂರ್ಯ ಆಗಸದಲ್ಲಿ ಉದಯಿಸುವ ವೇಳೆಗೆ ಈ ಪಕ್ಷಿಗಳು ಆಹಾರ ಅರಸಿ ಕೆರೆಯಿಂದ ಹಾರಿ ಹೋಗುತ್ತವೆ. ಮಾಗಡಿ ಕೆರೆಯಿಂದ ನೂರಾರು ಕಿಮೀ ದೂರ ಹೋಗುವ ಪಕ್ಷಿಗಳು ರೈತರ ಹೊಲದಲ್ಲಿ ಬೆಳೆದ ಭತ್ತ, ಕಡಲೆ, ಶೇಂಗಾ ಮುಂತಾದವುಗಳನ್ನು ತಿಂದು ಮರಳಿ ಎರಡು ಮೂರು ತಾಸಿನಲ್ಲಿ ಕೆರೆಗೆ ಬರುತ್ತವೆ. ಕೆರೆಯಲ್ಲಿ ಸಂಜೆವರೆಗೆ ವಿಹರಿಸುವ ಪಕ್ಷಿಗಳು ಸೂರ್ಯ ಪಡುವಣದಲ್ಲಿ ಮರೆಯಾಗುವ ಮುನ್ನ ಮತ್ತೆ ಆಹಾರ ಅರಸುತ್ತ ತಂಡತOಡವಾಗಿ ಹಾರಿ ಹೋಗುತ್ತವೆ. ರೈತರ ಹೊಲಗಳಲ್ಲಿ ಮತ್ತೆ ಕಾಳು ಕಡಿ ತಿಂದು ಮರಳಿ ಕೆರೆಗೆ ಬರುತ್ತವೆ.
ಕೆರೆಯಲ್ಲಿ ಹಕ್ಕಿಗಳ ರಂಗೋಲಿ: ಮಾಗಡಿ ಕೆರೆಯಲ್ಲಿ ಗುಂಪು ಗುಂಪಾಗಿ ವಿಹರಿಸುವ ಬಣ್ಣ ಬಣ್ಣದ ಈ ಹಕ್ಕಿಗಳನ್ನು ಕಂಡಾಗ ನೀರಲ್ಲಿ ರಂಗೋಲಿ ಹಾಕಿದಂತೆ ಬಾಸವಾಗುತ್ತದೆ . ಬಂಗಾರ ವರ್ಣದ ಬಾಹ್ಮಿಣಿ ಡಕ್, ಬೂದು ಕೆಂಪು ನೆರಳೆ, ಕಪ್ಪು ಬಣ್ಣದ ಕುತ್ತಿಗೆ ಕೊಕ್ಕರೆಗಳು , ಹೊಟ್ಟೆ ಭಾಗದಲ್ಲಿ ಬಿಳಿ ಹಾಗೂ ಬೂದು ಬಣ್ಣದ ರೆಕ್ಕೆಗಳು, ಕೇಸರಿ ಬಣ್ಣದ ನೀಳ ಕಾಲುಗಳನ್ನು ಹೊಂದಿರುವ ಈ ಪಕ್ಷಿಗಳು ನೀರಲ್ಲಿ ಗಂಭೀರವಾಗಿ ಚಲಿಸುವದನ್ನು ಕಂಡಾಗ ಮೈಯೆಲ್ಲಾ ಪುಳಕಗೊಂಡು ಸ್ಮರಣೀಯ ಅನುಭವವಾಗುತ್ತದೆ .
ಆಕರ್ಷಕ ಪ್ರವಾಸಿ ತಾಣ: ಗದಗದಿಂದ ಹಾವೇರಿಗೆ ತೆರಳುವ ಮಾರ್ಗದಲ್ಲಿ 26 ಕಿ. ಮಿ. ಸಂಚರಿಸಿದರೆ ಮಾಗಡಿ ಗ್ರಾಮ ದೊರೆಯುತ್ತದೆ. ತಾಲೂಕು ಮಾಗಡಿ ಕೆರೆಯ ಬಾನಾಡಿಗಳ ಕೇಂದ್ರವಾದ ಶಿರಹಟ್ಟಿಯಿಂದ ಕೆವಲ 8 ಕಿ.ಮಿ. ಹಾಗೂ ಇತಿಹಾಸ ಪ್ರಸಿದ್ಧ ಲಕ್ಷ್ಮೇಶ್ವರದಿಂದ 11 ಕಿ.ಮಿ. ಪಯಣಿಸಿದರೆ ಮಾಗಡಿ ಕೆರೆ ದೊರೆಯುತ್ತದೆ. ಈ ಕೆರೆಯ ಒಟ್ಟು ವಿಸ್ತೀರ್ಣ 134. 15 ಎಕರೆಯಷ್ಟ್ಟು ವಿಶಾಲವಾದುದು. ಮಾಗಡಿ ಗ್ರಾಮದಲ್ಲಿ ಮೈಚಾಚಿದ ಈ ಕೆರೆಯ ಜಲಾನಯನ ಪ್ರದೇಶ ಪಕ್ಷಿಗಳ ಬಿಡಾರಕ್ಕೆ ಹೇಳಿ ಮಾಡಿಸಿದಂತಿದೆ.
ಬೆಳಗ್ಗೆ ಸೂರ್ಯ ಉದಯಿಸುವ ವೇಳೆಗೆ ಈ ಪಕ್ಷಿಗಳು ಆಹಾರ ಆರಸಿಕೊಂಡ ಕೆರಯಿಂದ ಹಾರಿ ಹೋಗುತ್ತವೆ. ನೂರಾರು ಕಿಮೀ ದೂರ ಹೋಗುವ ಪಕ್ಷಿಗಳು ರೈತರ ಹೊಲದಲ್ಲಿ ಬೆಳೆದ ಬೆಳೆಗಳನ್ನು ತಿಂದು ಮೂರು ಘಂಟೆಯಲ್ಲಿ ಮತ್ತೆ ಕೆರೆಗೆ ಬಂದು ಠಿಕಾಣಿ ಹೂಡುತ್ತವೆ. ಮತ್ತೆ ಸಂಜೆ ಸೂರ್ಯ ಮರೆಯಾಗುವ ಮುನ್ನ ಮತ್ತೊಮ್ಮೆ ಆಹಾರ ಅರಸಿ ಹೋಗಿ ಕಾಳು ಕಡಿ ತಿಂದು ಬರುತ್ತವೆ. ಹೀಗೇ ಅಹಾರ ಆರಿಸಿಕೊಂಡು ಗುಂಪು ಗುಂಪಾಗಿ ಹಾರಿ ಹೋಗುವ ಹಕ್ಕಿಗಳನ್ನು ನೋಡೋದೇ ಕಣ್ಣಿಗೆ ಹಬ್ಬ.
ಹಕ್ಕಿಗಳು ಆಗಸದಲ್ಲಿ ಹಾರೋವಾಗ ಬಾನಿನಲ್ಲಿ ರಂಗವಲ್ಲಿ ಬಿಡಿಸಿದ ರೀತಿ ಕಾಣುತ್ತದೆ. ಕಳೆದ ಹಲವಾರು ವರ್ಷಗಳಿಂದ ವಿದೇಶಿ ಅತಿಥಿಗಳು ಈ ಕೆರೆಗೆ ಬರ್ತಾ ಇದ್ದು ಈ ಪಕ್ಷಿಗಳಿಂದಲೇ ಮಾಗಡಿ ಕೆರೆ ಪ್ರಸಿದ್ದಿಯಾಗಿದೆ. ಒಟ್ಟಿನಲ್ಲಿ ನವೆಂಬರ್ ತಿಂಗಳ ಕೊನೆಯ ವಾರದಿಂದ ಕೆರೆಗೆ ಆಗಮಿಸುವ ಈ ಪಕ್ಷಿಗಳು ಏಪ್ರೀಲ್ ವೇಳೆಗೆ ತಮ್ಮ ದೇಶದತ್ತ ಕಾಲು ಕೀಳುತ್ತವೆ. ಮಾಗಡಿ ಕೆರೆ ಹಾಗೂ ಶೆಟ್ಟಿಕೆರೆ ವಿದೇಶಿ ಪಕ್ಷಿಗಳಿಗೆ ಅಚ್ಚುಮೆಚ್ಚಿನ ತಾಣವಾಗಿದೆ. ಆದರೆ ಇದನ್ನೊಂದು ಪ್ರಸಿದ್ಧ ಪಕ್ಷಿಧಾಮವನ್ನಾಗಿ ಅಭಿವೃದ್ದಿಗೊಳಿಸುವಲ್ಲಿ ಸರಕಾರ ಮುಂದಾಗದಿರೋದು ವಿಷಾಧದ ಸಂಗತಿಯಾಗಿದೆ.