ಮೈಸೂರು: ಮೈಸೂರು ಜಿಲ್ಲೆಯ ತಿ.ನರಸೀಪುರದ ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳ 2025ರ ಫೆಬ್ರವರಿ 10ರಿಂದ ಮೂರು ದಿನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಸುತ್ತೂರು ಶಾಖಾ ಮಠದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಿದ್ಧತೆಗಳ ಕುರಿತು ಪೂರ್ವಭಾವಿ ಸಭೆ ನಡೆಸಲಾಗಿದೆ.
ಸಭೆಯಲ್ಲಿ ಮಾತನಾಡಿದ ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ,’ 2019ರಲ್ಲಿ ನಡೆದ 11ನೇ ಕುಂಭಮೇಳ ಯಶಸ್ವಿಯಾಗಿ ನಡೆದಿದೆ. ಆನಂತರ 2021ರಲ್ಲಿ ಕೋವಿಡ್ ಕಾರಣದಿಂದಾಗಿ ಕುಂಭಮೇಳ ನಡೆದಿಲ್ಲ. ಹೀಗಾಗಿ ಈ ಬಾರಿ 12ನೇ ಕುಂಭಮೇಳ ಆಯೋಜಿಸಲಾಗಿದೆ’ ಎಂದರು.
‘ಫೆ.10, 11 ಮತ್ತು 12ರ ಮೂರು ದಿನಗಳ ಕಾಲ ನಡೆಯುವ ಮೇಳದಲ್ಲಿ ಲಕ್ಷಾಂತರ ಮಂದಿ ಭಾಗವಹಿಸುವರು. ಇದಕ್ಕೆ ಬೇಕಾದ ಸಿದ್ಧತೆಗಳನ್ನು ಜಿಲ್ಲಾಡಳಿತದಿಂದ ಕೈಗೊಳ್ಳುವ ಸಂಬಂಧ ಮತ್ತೊಮ್ಮೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನರಸೀಪುರದಲ್ಲಿ ಪೂರ್ವಭಾವಿ ಸಭೆ ನಡೆಸಲು ನಿಶ್ಚಯಿಸಲಾಗಿದೆ. ಕುಂಭಮೇಳಕ್ಕೆ ಬೇಕಾದ ತಾತ್ಕಾಲಿಕ ಸೇತುವೆ, ಹೋಮದ ಕೋಣೆ ಮೊದಲಾದವುಗಳ ವ್ಯವಸ್ಥೆಯನ್ನು ಜಿಲ್ಲಾಡಳಿತ ಕಲ್ಪಿಸುವಂತೆ’ ಹೇಳಿದರು. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ಫೆ.10ರಂದು ಬೆಳಗ್ಗೆ 9 ಗಂಟೆಗೆ ಮಾಘ ಶುದ್ಧ ತ್ರಯೋದಶೀ ಪುಷ್ಯ ನಕ್ಷತ್ರ ಶ್ರೀ ಅಗಸ್ಥೇಶ್ವರ ಸನ್ನಿಧಿಯಲ್ಲಿ ಅನುಜ್ಞೆ, ಪುಣ್ಯಾಹ, ಕಲಶ ಸ್ಥಾಪನೆ, ಗಣಹೋಮ, ಅಭಿಷೇಕ, ದೇವತಾರಾಧನೆ, ಅಗ್ರಸ್ತ್ಯರ ಸಂಗ್ರಹ ಸಮೇತ ಯಾಗಶಾಲಾ ಪ್ರವೇಶ, ಪುಣ್ಯಾಹ, ವಾಸ್ತುಹೋಮಗಳು ನಡೆಯಲಿವೆ. ಅಂದು ಸಂಜೆ ಧರ್ಮಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಧ್ವಜಾರೋಹಣ ನಡೆಯಲಿದೆ’ ಎಂದರು.
‘ಫೆ.11ರಂದು ಬೆಳಗ್ಗೆ 6ಕ್ಕೆ ಮಾಘಶುದ್ಧ ಚತುರ್ದಶಿ ಆಶ್ಲೇಷ ನಕ್ಷತ್ರ, ಪುಣ್ಯಾಹ, ನವಗ್ರಹಪೂಜೆ, ಜಪ, ನವಗ್ರಹ ಹೋಮ, ಪುರ್ಣಾಹುತಿ. ಬೆ.11ಕ್ಕೆ ಧಾರ್ಮಿಕ ಸಭೆ ನಡೆಯಲಿದೆ. ಸಂಜೆ ೬ಕ್ಕೆ ಸುದರ್ಶನ ಪೂಜೆ, ಹೋಮ, ಪುರ್ಣಾಹುತಿ ನಡೆಯಲಿದೆ. ಸಂಜೆ 4ಗಂಟೆಗೆ ಗುಂಜಾ ನರಸಿಂಹಸ್ವಾಮಿ ದೇವಸ್ಥಾನ, ವಿಶ್ವಕರ್ಮ ಬೀದಿ, ಭಗವಾನ್ ಟಾಕೀಸ್ ವೃತ್ತ, ಲಿಂಕ್ ರಸ್ತೆ, ಬಸ್ ನಿಲ್ದಾಣದ ಮೂಲಕ ತ್ರಿವೇಣಿ ಸಂಗಮಕ್ಕೆ ಮಂಗಳವಾದ್ಯ, ವೀರಗಾಸೆ, ಭಜನಾ ತಂಡಗಳು, ಕೊಂಬು-ಕಹಳೆ, ಕಲಶ ಹೊತ್ತ ಸುಮಂಗಲಿಯರು, ಕಂಸಾಳೆ, ಪೂಜಾ ಕುಣಿತ, ವೀರಭದ್ರ ಕುಣಿತ, ಗಾರುಡಿ ಕುಣಿತ, ಕೋಲಾಟ, ವೀರಮಕ್ಕಳ ಕುಣಿತ, ಕೀಲುಕುದುರೆ, ಪಟ ಕುಣಿತ, ತಮಟೆ, ಬ್ಯಾಂಡ್ ಸೆಟ್, ಸೇವಾದಳ ಮತ್ತು ಸ್ತಬ್ಧಚಿತ್ರಗಳೊಂದಿಗೆ ಕುಂಭಮೇಳದಲ್ಲಿ ಭಾಗವಹಿಸುವ ಸ್ವಾಮೀಜಿಗಳನ್ನು ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ. ಸಂಜೆ ೭ಕ್ಕೆ ವಾರಣಾಸಿ ಮಾದರಿಯಲ್ಲಿ ದೀಪಾರತಿ ಕಾರ್ಯಕ್ರಮ ಇರಲಿದೆ ಎಂದರು. ಫೆ.12ರ ಮುಂಜಾನೆ 5.30ಕ್ಕೆ ಮಾಘಶುದ್ಧ ವ್ಯಾಸ ಪೂರ್ಣಿಮಾ ಮಖಾನಕ್ಷತ್ರ, ಚಂಡಿಹೋಮ, ಪುಷ್ಯನಕ್ಷತ್ರ, ಪುಣ್ಯಾಹ, ಸಪ್ತನದೀತರಥ ಕಲಶ ಪೂಜೆ, ಹೋಮ, ಕುಂಭಲಗ್ನದಲ್ಲಿ ಪುರ್ಣಾಹುತಿ, ಕುಂಭೋಧ್ವಾಸನ ಹಾಗೂ ಸಪ್ತ ಪವಿತ್ರ ನದಿಗಳಿಂದ ತಂದ ತೀರ್ಥಗಳನ್ನು ತ್ರಿವೇಣಿ ಸಂಗಮದಲ್ಲಿ ಸಂಯೋಜನೆ, ಪುಣ್ಯ ಸ್ನಾನ ಹಾಗೂ ಧಾರ್ಮಿಕ ಸಭೆ ಮಾಡಲಾಗುವುದು.
ಪ್ರಾತಃಕಾಲ 9.35ರಿಂದ 9.50ರ ಮೀನಲಗ್ನ, ಬೆಳಗ್ಗೆ 11.30ರಿಂದ 12ಗಂಟೆಯ ವೃಷಭ ಲಗ್ನ, ಅಭಿಜಿನ್ ಮುಹೂರ್ತ, ವಿಧಿ ಮುಹೂರ್ತ ಹಾಗೂ ವೇದ ಮುಹೂರ್ತಗಳಲ್ಲಿ ಮಹೋದಯ ಪುಣ್ಯಸ್ನಾನ ನಡೆಯಲಿದೆ. ಫೆ.10ರಂದು ಬೆಳಗ್ಗೆ 8.30ಕ್ಕೆ ಅಗಸ್ಥೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಅನುಜ್ಞಾ ಕಾರ್ಯಕ್ರಮ ಉದ್ಘಾಟನಾ ಸಮಾರಂಭ ನಡೆಯಲಿದ್ದು. ಅನೇಕ ಗಣ್ಯರು ಭಾಗವಹಿಸುತ್ತಾರೆ ಎಂದು ತಿಳಿಸಿದರು. ಇನ್ನು ದೇಶದ ನಾಗರೀಕತೆ ಹುಟ್ಟಿದ್ದು ನದಿಯ ಇಕ್ಕೆಲ್ಲಗಳಲ್ಲಿ ಬೆಳೆದು ಬಂದಿದೆ. ನದಿಗಳು ನಮಗೆ ನಾಗರಿಕತೆಯ ತೊಟ್ಟಿಲಾಗಿವೆ. ವ್ಯಕ್ತಿ ಹುಟ್ಟು ಹಾಗೂ ಅಂತ್ಯ ನದಿಯಲ್ಲೇ ಆಗುವ ಕಾರಣಕ್ಕೆ ನದಿಯನ್ನು ಪವಿತ್ರ ಎಂದು ಭಾವಿಸಿ, 1989ರಿಂದ ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಸಿಕೊಂಡು ಬರಲಾಗುತ್ತಿದೆ’ ಎಂದು ತಿಳಿಸಿದರು. ಸಭೆಯಲ್ಲಿ ಮಹಾಮಂಡಾಲೇಶ್ವರ ಜಯೇಂದ್ರಪುರಿ ಸ್ವಾಮೀಜಿ, ವಾಟಾಳು ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಆದಿ ಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಜಿಲ್ಲಾಧಿಕಾರಿ ಡಾ.ಲಕ್ಷ್ಮಿಕಾಂತರೆಡ್ಡಿ, ಉಪವಿಭಾಗಾಧಿಕಾರಿ ರಕ್ಷಿತ್, ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಬೆಟಸೂರ ಮಠ ಇನ್ನಿತರರು ಉಪಸ್ಥಿತರಿದ್ದರು.