ತುಮಕೂರು:- ರಾಜ್ಯ ರಾಜಧಾನಿ ಬೆಂಗಳೂರಿಗೆ ಪರ್ಯಾಯವಾಗಿ ಬೆಳೆಯುತ್ತಿರುವ ಕಲ್ಪತರು ನಗರಿ ತುಮಕೂರು ಜಿಲ್ಲೆ 2024ರ ವರ್ಷದ ಕೊನೆ ಕಾಲಘಟ್ಟದಲ್ಲಿ ಅಂತಾರಾಷ್ಟ್ರೀಯ ಕ್ರಿಕೇಟ್ ಸ್ಟೇಡಿಯಂ ನಿರ್ಮಾಣದ ಕನಸನ್ನು ಸಾಕಾರಗೊಳಿಸಿಕೊಂಡು ಅಭಿವೃದ್ಧಿಯ ಹುರುಪಿನಲ್ಲಿ 2025ನೇ ವರ್ಷಕ್ಕೆ ಕಾಲಿಡುತ್ತಿದೆ. ಪಾತಾಳಕ್ಕೆ ಕುಸಿದಿದ್ದ ಕೊಬ್ಬರಿ ಬೆಲೆ ಏರಿಕೆ ಕಂಡು ರೈತರಿಗೆ ಹರ್ಷ ತಂದ ವರ್ಷವೂ ಆಗಿದೆ 2024.
ಕಲ್ಪತರು ನಾಡು ತುಮಕೂರು ಜಿಲ್ಲೆಯು 2024ನೇ ವರ್ಷದಲ್ಲಿ ಹಲವು ಅಭಿವೃದ್ಧಿಯನ್ನು ಕಂಡಿದೆ. ಸಾವು-ನೋವು, ಏಳು-ಬೀಳುಗಳನ್ನು ನೋಡಿದೆ. ವರುಣಾರ್ಭಕ್ಕೆ ಜಿಲ್ಲೆಯ ರೈತರು ಸಾಕಷ್ಟು ಸಂಕಷ್ಟಕ್ಕೆ ಈಡಾಗಿದ್ದಾರೆ. ಸಾಲಬಾಧೆಗಳಿಗೆ ಜನ ಆತ್ಮಹತ್ಯೆಯ ದಾರಿ ತುಳಿದಿದ್ದಾರೆ. ಅಪಘಾತಗಳಿಗೆ ಪ್ರಾಣವನ್ನು ತೆತ್ತಿದ್ದಾರೆ. ಹೀಗೆ ಸವಾಲು ಸಂಕಷ್ಟಗಳ ನಡುವೆಯೂ ತುಮಕೂರು ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವವೂ ಆಗಿದೆ. ಒಂದೇ ವರ್ಷದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಎರಡ್ಮೂರು ಬಾರಿ ಬಂದಿದ್ದರು. ವಿವಿಧ ಅಭಿವೃದ್ಧಿ ಕಾಮಗಾರಿಗಳ ಜೊತೆಗೆ ಕೋಟ್ಯಾಂತರ ರೂ. ವೆಚ್ಚದ ಸೌಲಭ್ಯಗಳನ್ನು ವಿತರಿಸಿದ್ದಾರೆ.
ಹೊಸ ರಾಜಕೀಯ ಪರ್ವ:- 2024ನೇ ವರ್ಷ ತುಮಕೂರು ಜಿಲ್ಲೆಯಲ್ಲಿ ಹೊಸ ರಾಜಕೀಯ ಪರ್ವಕ್ಕೆ ಸಾಕ್ಷಿಯಾಯಿತು. ತುಮಕೂರು ಜಿಲ್ಲೆಯಲ್ಲಿ ಹೊರಗಡೆಯಿಂದ ಬಂದು ಗೆದ್ದ ಇತಿಹಾಸವೇ ಇಲ್ಲ ಎಂಬ ತುಮಕೂರು ಇತಿಹಾಸವನ್ನೇ ವಿ.ಸೋಮಣ್ಣ ಬದಲಾಯಿಸಿದರು. 2024ರ ವರ್ಷದ ಮಧ್ಯಂತರ ಅವಧಿಯಲ್ಲಿ ಲೋಕಸಭಾ ಚುನಾವಣೆ ಗರಿಗೆದರಿತು. ಲೋಕಸಭಾ ಚುನಾವಣಾ ಕಣಕ್ಕೆ ಮೈತ್ರಿ ಪಕ್ಷದಿಂದ ವಿ. ಸೋಮಣ್ಣ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಸ್.ಪಿ. ಮುದ್ದಹನುಮೇಗೌಡ ಅಖಾಡಕ್ಕೆ ಇಳಿದು ಅಬ್ಬರದ ಪ್ರಚಾರ ಮಾಡಿದರು. ಹೊರಗಿನಿಂದ ಬಂದು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ವಿ. ಸೋಮಣ್ಣ ಭರ್ಜರಿ ಜಯಭೇರಿಗಳಿಸಿ ಹೊಸ ಇತಿಹಾಸವನ್ನೇ ಬರೆದರು. ಅಷ್ಟೇ ಅಲ್ಲ, ಕೇಂದ್ರ ಸಚಿವರಾಗಿಯೂ ಹೊಸ ಇತಿಹಾಸ ನಿರ್ಮಿಸಿದರು. ಈವರೆಗೂ ತುಮಕೂರು ಜಿಲ್ಲೆಯಿಂದ ಯಾರೊಬ್ಬರು ಕೇಂದ್ರ ಸಚಿವರಾಗಿರಲಿಲ್ಲ. ಆದರೆ, ಸಂಸದರಾಗಿ ಆಯ್ಕೆಯಾದ ವಿ. ಸೋಮಣ್ಣ ಕೇಂದ್ರದ ಜಲಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಮಂತ್ರಿ ಪಟ್ಟ ಅಲಂಕರಿಸಿ ತುಮಕೂರು ಜಿಲ್ಲೆಯ ರಾಜಕೀಯವನ್ನು ದೇಶದತ್ತ ಗಮನ ಸೆಳೆಯುವಂತೆ ಮಾಡಿದರು.
ಎರಡು ಬಾರಿ ತುಮಕೂರಿಗೆ ಸಿಎಂ:- 2024ನೇ ವರ್ಷದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿವೃದ್ಧಿ ವಿಚಾರದಲ್ಲಿ ತುಮಕೂರಿಗೆ ಎರಡು ಬಾರಿ ಬಂದೋಗಿದ್ದಾರೆ. ಉಳಿದಂತೆ ಲೋಕಸಭಾ ಚುನಾವಣಾ ನಿಮಿತ್ತ ಎಸ್.ಪಿ. ಮುದ್ದಹನುಮೇಗೌಡ ಪರ ಪ್ರಚಾರಕ್ಕಾಗಿ ಒಂದು ಬಾರಿ ಬಂದೋಗಿದ್ದಾರೆ. ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜನೆ ಮಾಡಲಾಗಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸೇರಿದಂತೆ ಫಲಾನುಭವಿಗಳಿಗೆ ವಿವಿಧ ಇಲಾಖೆಗಳ ಸೌಲಭ್ಯಗಳ ವಿತರಣಾ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಬಂದು ಹೋಗಿದ್ದಾರೆ. ಸಿಎಂ ಬಂದ ಕಾರ್ಯಕ್ರಮಕ್ಕೆ ಲಕ್ಷಾಂತರ ಜನ ಆಗಮಿಸಿದ್ದ ವಿಶೇಷವಾಗಿತ್ತು.
ಮಳೆಗೆ ನಲುಗಿದ ತುಮಕೂರು:- ಜಿಲ್ಲೆಯಾದ್ಯಂತ ಸುರಿದ ಧಾರಾಕಾರ ಮಳೆಗೆ ರೈತರು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದರು. ಬೆಳೆಗಳೆಲ್ಲಾ ಹಾನಿಯಾಗಿ ಸಾಕಷ್ಟು ನಷ್ಟ ಉಂಟಾಯಿತು. ಸಾಕಷ್ಟು ಮನೆಗಳು ನೆಲಕ್ಕೆ ಉರುಳಿದವು. ಜಿಲ್ಲೆಯಲ್ಲಿ ವಾಡಿಕೆಗಿಂತ ಅತ್ಯಧಿಕ ಮಳೆಯಾಗಿದ್ದು, ಸಿಡಿಲು –ಮಳೆಯಿಂದಾಗಿ ಸುಮಾರು 25 ಜಾನುವಾರುಗಳ ಪ್ರಾಣ ಹಾನಿಯಾಗಿದೆ. ಈ ಪೈಕಿ ಜಾನುವಾರು ಮಾಲೀಕರಿಗೆ ಪರಿಹಾರವನ್ನೂ ಜಿಲ್ಲಾಡಳಿತ ವಿತರಣೆ ಮಾಡಿದೆ. ಇನ್ನು ಸುಮಾರು 59 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದ್ದು, ಹಾನಿಗೊಳಗಾದ ಬೆಳೆಗೆ ಪರಿಹಾರ ನೀಡಲು ಜಿಲ್ಲಾಡಳಿತ ಅಗತ್ಯಕ್ರಮ ಕೈಗೊಂಡಿದೆ. ಅಲ್ಲದೆ 133 ಮನೆಗಳು ಹಾನಿಯಾಗಿದ್ದು, 91 ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದವು. ಇದರಿಂದ ಅನ್ನದಾತ ಸಾಕಷ್ಟು ನಷ್ಟವನ್ನ ಅನುಭವಿಸಿದ್ದಾರೆ.