ಶಿರಾ: ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗುವುದು. ರಾಜ್ಯದ ರೈತರ ಹಿತ ಕಾಯುವಂತಹ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ. ದೇಶಕ್ಕೆ ಅನ್ನ ನೀಡುವ ರೈತನ ಕೃಷಿ ಕಾಯಕಕ್ಕಾಗಿ ವಿದ್ಯುತ್ ಅಗತ್ಯವಾಗಿದ್ದು ರೈತರ ಪಂಪ್ಸೆಟ್ಗಳಿಗೆ ಸೋಲಾರ್ ಪ್ಲಾಂಟ್ ಮೂಲಕ ವಿದ್ಯುತ್ ಪೂರೈಸುವಂತಹ ಕೆಲಸವನ್ನು ಸರ್ಕಾರ ಮಾಡುತ್ತದೆ ಎಂದು ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು. ಅವರು ಚಂಗಾವರ ಹಾಗೂ ಚಿಕ್ಕಬಾಣಗೆರೆ ಸಮೀಪ ಪಿಎಂ ಕುಸುಮ್ ಯೋಜನೆಯಡಿ ನಿರ್ಮಿಸಿರುವ ಸೋಲಾರ್ ಪಾರ್ಕ್ ವೀಕ್ಷಣೆ ಮಾಡಿ, ಸುದ್ದಿಗಾರರೊಂದಿಗೆ ಮಾತನಾಡಿದರು.
ಸದರಿ ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ನಡೆಯಲಿದ್ದು, ಶೇ50 ರಷ್ಟು ಅನುದಾನವನ್ನು ರಾಜ್ಯ ಸರ್ಕಾರ ಭರಿಸುತ್ತಿದೆ. ರೈತರು ಈ ರೀತಿಯ ಘಟಕ ಸ್ಥಾಪನೆಮಾಡಿಕೊಂಡು ಉಪಯೋಗಿಸಿ ಹೆಚ್ಚಾದ ವಿದ್ಯುತ್ಗೆ ಸರ್ಕಾರ ಯುನಿಟ್ಗೆ 3.17 ರೂ.ಗಳಿಗೆ ಕೊಂಡುಕೊಳ್ಳಲಿದೆ. ಈ ಯೋಜನೆಯಲ್ಲಿ ಅಕ್ರಮ, ಸಕ್ರಮದ ಪಂಪ್ಸೆಟ್ಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ತುಮಕೂರು ಜಿಲ್ಲೆಯೊಂದರಲ್ಲಿಯೇ 27 ಸ್ಥಳಗಳಲ್ಲಿ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಗುರಿ ಹೊಂದಲಾಗಿದೆ ಎಂದು ಕೆ.ಜೆ.ಜಾರ್ಜ್ ಹೇಳಿದರು.
ಜಯಚಂದ್ರಗೆ ಸಚಿವ ಸ್ಥಾನ ದೊರೆಯಬೇಕು : ಈ ಕ್ಷೇತ್ರ ಶಾಸಕ ಟಿ.ಬಿ.ಜಯಚಂದ್ರ ಕ್ರಿಯಾಶೀಲ ಶಾಸಕರಾಗಿದ್ದಾರೆ. ಸಚಿವ ಸ್ಥಾನ ಅವರಿಗೆ ಸಿಗಬೇಕು. ಇದಕ್ಕೆ ನನ್ನ ಸಮ್ಮತಿಯಂತೂ ಇದೆ. ಈ ನಿಟ್ಟಿನಲ್ಲಿ ಹೈಕಮಾಂಡ್ ತೀರ್ಮಾನ ಮುಖ್ಯ ಎಂದು ಜಾರ್ಜ್ ಹೇಳಿದರು.
ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಮಾತನಾಡಿ ಶಿರಾ ಭಾಗದಲ್ಲಿನ ರೈತರ ಬದುಕು ಹಸನಾಗಲು ನಿರಂತರ ವಿದ್ಯುತ್ ಅಗತ್ಯವಿತ್ತು. ರೈತರ ಬಹು ವರ್ಷಗಳ ಕನಸು ನೆರವೇರಲಿದೆ. ಸೋಲಾರ್ ಪ್ಲಾಂಟ್ ಮೂಲಕ ವಿದ್ಯುತ್ ಉತ್ಪಾದÀನೆ ಮಾಡುವುದರಿಂದ ವಿದ್ಯುತ್ ಕೊರತೆಯೂ ನೀಗಲಿದೆ ಎಂದರು.
ಪಿಎO ಕುಸುಮ್ ಯೋಜನೆಯ ಮೂಲಕ ನಿರಂತರ ವಿದ್ಯುತ್ ಪೂರೈಸಿ ಲಕ್ಷಾಂತರ ರೈತರ ಜೀವನ ಹಸನು ಮಾಡುವುದು ಸರ್ಕಾರದ ಉದ್ದೇಶ. ಇಲ್ಲಿನ ಸೋಲಾರ್ ವಿದ್ಯುತ್ ಸ್ಥಾವರಗಳಿಂದ ಉತ್ಪತ್ತಿಯಾಗುವ 2299 ಮೆಗಾವ್ಯಾಟ್ ವಿದ್ಯುತ್ ಕೃಷಿ ಪಂಪ್ಸೆಟ್ಗಳಿಗೆ ವಿಶ್ವಾಸಾರ್ಹ ಶಕ್ತಿಯನ್ನು ತುಂಬಲಿದೆ. ಜಿಲ್ಲೆಯ ಪಾವಗಡದ ಸೋಲಾರ್ ಪಾರ್ಕ್ಗೂ ಈ ಹಿಂದೆ ಭೇಟಿ ನೀಡಿದೆ. ಪಾವಗಡದಲ್ಲಿ ಇನ್ನೂ 1೦ ಎಕರೆ ಪ್ರದೇಶದಲ್ಲಿ 2೦,೦೦೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಸರ್ಕಾರಕ್ಕೆ ಅನುಮತಿ ಕೋರಲಾಗುವುದು. ರಾಜ್ಯದ ಕೆಲವೆಡೆ ಇನ್ನೂ 3,೦೦೦ ಮೆಗಾವ್ಯಾಟ್ ಸೋಲಾರ್ ಉತ್ಪಾದನೆ ಮಾಡಲು ಸರ್ಕಾರದ ಚಿಂತನೆ ಇದೆ ಎಂದು ಇಂದನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ನಗರಸಭೆಯ ಅಧ್ಯಕ್ಷ ಜೀಶಾನ್ ಮೊಹಮೂದ್, ಉಪಾಧ್ಯಕ್ಷ, ನಗರಸಭೆಯ ಮಾಜಿ ಅಧ್ಯಕ್ಷ ಅಮಾನುಲ್ಲಾಖಾನ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಂಗಾವರ ಶಿವು, ನಗರಸಭಾ ಸದಸ್ಯರಾದ ಎಸ್.ಎಸ್.ಅಜಯ್ಕುಮಾರ್, ಶಿವಶಂಕರ್, ಮೊಹಮದ್ ಜಾಫರ್, ಫಯಾಜ್ಖಾನ್, ಆಶ್ರಯ ಸಮಿತಿ ಸದಸ್ಯ ನೂರುದ್ಧೀನ್, ಬೆಸ್ಕಾಂ ಗ್ರಾಹಕ ಸಲಹಾ ಸಮಿತಿ ಸದಸ್ಯರಾದ ಲೋಕೇಶ್, ಮಾರುತಿ, ಬೆಸ್ಕಾಂ ಎಇಇ ಶಾಂತರಾಜು, ತರಂಗ ಸಲ್ಯುಷನ್ನ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದಂತೆ ಅನೇಕ ಪ್ರಮುಖರು ಇದ್ದರು.