ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಘೋಡಕೆ ಪ್ಲಾಟ್ ಬಳಿ ಇತ್ತೀಚೆಗೆ ನಡೆದ ಚಾಕು ಇರಿತ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರಲ್ಲಿ ಯುವಕನೋರ್ವ ಚಿಕಿತ್ಸೆ ಫಲಿಸದೇ ಕೆಎಂಸಿಆರ್ಐನಲ್ಲಿ ಬುಧವಾರ ಮೃತಪಟ್ಟಿದ್ದಾನೆ. ಸಮೀರ್ ಶೇಖ್ (18) ಮೃತ ಯುವಕ.
ಡಿ. 30ರಂದು ಸಮೀರ್ ಶೇಖ್ ಹಾಗೂ ಅವರ ಚಿಕ್ಕಪ್ಪ ಜಾವೇದ್ ಶೇಖ್ ಎಂಬುವರಿಗೆ ಮುಜಾಮಿಲ್ ಎಂಬಾತ ಚಾಕುವಿನಿಂದ ಇರಿದಿದ್ದ. ಗಾಯಗೊಂಡಿದ್ದ ಇಬ್ಬರಿಗೆ ಕೆಎಂಸಿಆರ್ಐಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಸಮೀರ್ ಬುಧವಾರ ಮೃತಪಟ್ಟಿರುವುದಾಗಿ ಆತನ ಕುಟುಂಬಸ್ಥರು ತಿಳಿಸಿದ್ದಾರೆ. ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಚಾಕುವಿನಿಂದ ಇರಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಜಾಮಿಲ್ ಮಗಾಮಿ ಎಂಬಾತನನ್ನು ಪೊಲೀಸರು ಬಂಧಿಸಿ ಕಾಲಿಗೆ ಗುಂಡು ಹೊಡೆದಿದ್ದರು. ಈಗ ಮತ್ತೆ 6 ಜನರನ್ನು ಬಂಧಿಸಿದ್ದಾರೆ. ಪಠಾಣ ಗಲ್ಲಿಯ ಮೊಹ್ಮದ್ ಹನೀಫ್ ಮಗಾಮಿ (29), ಆನಂದ ನಗರದ ಖಾಲಿದ್ಮಿಯಾ ಮುಲ್ಲಾ (27), ಮೊಹ್ಮದ್ ಇನ್ಸಾಲ್ (29), ಮೊಹ್ಮದ್ ಶಾರುಖ್ (23), ರಬ್ಬಾನಿ ಹಳೇಮನಿ (32), ಇಸ್ಲಾಂಪುರದ ಅಹಮದ್ ಹಜಾರೆಸಾಬ್ (55) ಎಂಬುವರನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತಂತೆ ಹು-ಧಾ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದು, ಹಳೇ ವೈಷಮ್ಯದಿಂದ ಈ ಘಟನೆ ನಡೆದಿದೆ. ಮೊದ ಮೊದಲು ಚಿಕ್ಕ ಮಕ್ಕಳ ಜಗಳದಿಂದ ಆರಂಭವಾದ ಜಗಳ ಚಾಕು ಇರಿತದವರೆಗೂ ಹೋಗಿ ನಿಂತಿದೆ. ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಕಳೆದ ಮೂರು ವರ್ಷದ ಹಿಂದೆಯೂ ಜಗಳವಾಗಿತ್ತು. ಈಗ ಎಫ್ಐಆರ್ನಲ್ಲಿ 15 ಜನರ ಮೇಲೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದು, ಎಲ್ಲಾ ಕೋನಗಳಿಂದಲೂ ತನಿಖೆ ಮಾಡಲಾಗುತ್ತಿದೆ. ಯಾರು ತಪ್ಪಿತಸ್ಥರಿದ್ದಾರೋ ಅವರನ್ನು ಕೂಲಂಕಷವಾಗಿ ಪರಿಶೀಲಿಸಿದ ಬಳಿಕ ಬಂಧಿಸಲಾಗುವುದು ಎಂದು ಮಾಹಿತಿ ನೀಡಿದರು.