ಬೆಂಗಳೂರು: ರಾಜ್ಯದ ಸಿಎಂ ಕುರ್ಚಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮಧ್ಯೆ ಪೈಪೋಟಿ ಇದೆ. ಬಣ ರಾಜಕೀಯ ಇದೆ ಎಂಬ ಮಾತು ಕೇಳಿ ಬರುತ್ತಲೇ ಇದೆ. ಇದರ ಬೆನ್ನಲ್ಲೆ ಡಿಕೆ ಶಿವಕುಮಾರ್ ಅವರು ವಿದೇಶಿ ಪ್ರವಾಸದಲ್ಲಿದ್ದಾಗಲೇ ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಮನೆಯಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ 35 ಸಚಿವರು ಡಿನ್ನರ್ ಮೀಟಿಂಗ್ ಮಾಡಿದ್ದಾರೆ. ಈ ವೇಳೆ ಮಹತ್ವದ ವಿಚಾರಗಳು ಚರ್ಚೆಯಾಗಿವೆ ಎನ್ನಲಾಗಿದೆ.
ಕಾಂಗ್ರೆಸ್ ಬೆಳಗಾವಿ ಸಭೆ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಅವರು ಪ್ರತಿಕ್ರಿಯಿಸಿದ್ದಾರೆ. ಅತ್ತ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ವಿದೇಶ ಪ್ರವಾಸಕ್ಕೆ ಹೋಗುವುದನ್ನೇ ಕಾಯುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣ, ಇತ್ತ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ 35 ಶಾಸಕರ ಡಿನ್ನರ್ ಮೀಟಿಂಗ್ ನಡೆಸಿ ಶಕ್ತಿ ಪ್ರದರ್ಶನ ಮಾಡಿದೆ.
ಸ್ವಾಮಿ ಡಿ.ಕೆ.ಶಿವಕುಮಾರ್ ಅವರೇ, ಅಧಿಕಾರವನ್ನು ಒದ್ದು ಕಿತ್ತುಕೊಳ್ಳುತ್ತೇನೆ ಎಂದು ಸದನದಲ್ಲಿ ತಾವು ಅಬ್ಬರಿಸಿದ್ದನ್ನು ಕಾರ್ಯಗತ ಮಾಡುವ ಸಮಯ ಬಂದಿದೆ ಎಂದು ಅವರು ಕಾಲೆಳೆದಿದ್ದಾರೆ.
ಡಿ.ಕೆ.ಶಿವಕುಮಾರ್ ಅವರೇ ನಿಮ್ಮ ಅನುಪಸ್ಥಿತಿಯಲ್ಲಿ ಸಂಪುಟ ಸಭೆ ನಡೆದಿದೆ. ಬಸ್ ಟಿಕೆಟ್ ದರ ಶೇಕಡಾ 15ರಷ್ಟು ಹೆಚ್ಚಿಸುವಂತಹ ಪ್ರಮುಖ ನಿರ್ಧಾರ ಮಾಡಲಾಗಿದೆ. ಒಬ್ಬ ಉಪಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರ ಅನುಪಸ್ಥಿತಿಯಲ್ಲಿ ಇಂತಹ ನಿರ್ಧಾರಗಳು ಆಗುತ್ತೆ ಅಂದರೆ ಏನರ್ಥ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ತಾವು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆಯೇ ಅಥವಾ ತಮ್ಮ ಅಬ್ಬರ ಏನಿದ್ದರೂ ಮಾಧ್ಯಮಗಳ ಮುಂದೆ ಮಾತ್ರವೇ? ಹೀಗೆ ಮುಂದುವರೆದರೆ ತಮ್ಮ ಕನಸು ಕನಸಾಗಿಯೇ ಉಳಿಯುವುದು ಮಾತ್ರ ಗ್ಯಾರೆಂಟಿ ಎಂದು ಕುಟುಕಿದ್ದಾರೆ.
ಬಸ್ ದರ ಏರಿಕೆ ವಿರುದ್ಧ ಮೆಜೆಸ್ಟಿಕ್ನಲ್ಲಿ ಪ್ರತಿಭಟನೆ ಬಸ್ ದರ ಏರಿಕೆ ವಿರುದ್ಧ ಆಕ್ರೋಶ ಹೊರ ಹಾಕಿರುವ ಆರ್.ಅಶೋಕ್ ಅವರ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯಿತು. ವಿವಿಧ ಮುಖಂಡರು ಬೆಲೆ ಏರಿಕೆ ವಿರುದ್ಧ ಧಿಕ್ಕಾರ ಕೂಗಿದರು. ಜನರಿಗೆ ಆರ್ಥಿಕ ಬರೆ ನಿಲ್ಲ ಬೇಕು. ಬಸ್ ಟಿಕೆಟ್ ದರ ಏರಿಕೆ ಸರಿಯಲ್ಲ ಎಂದು ಒತ್ತಾಯಿಸಿದರು. ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರಿಯಾಂಕ್ ಖರ್ಗೆ ಫತ್ವಾ ಒಮ್ಮೆ ಕೇಳಿ: ಆರ್.ಅಶೋಕ್ ಗುತ್ತಿಗೆದಾರ ಸಚಿವ ಪಾಂಚಾಳ ಅವರ ಆತ್ಮಹತ್ಯೆ ಡೆತ್ನೋಟ್ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರು ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಇದರ ಬೆನ್ನಲ್ಲೆ ಸಚಿವರು ವೇದಿಕೆ ಮೇಲೆ ಕಲಬುರಗಿಗೆ ಬಿಜೆಪಿ ನಾಯಕರನ್ನು ಕಾಲಿಡಲು ಬಿಡಲ್ಲ ಎಂದೆಲ್ಲ ಮಾತನಾಡಿರುವ ವಿಡಿಯೋ ಅನ್ನು ಆರ್.ಅಶೋಕ್ ಹಂಚಿಕೊಂಡಿದ್ದಾರೆ. ಪ್ರಿಯಾಂಕ್ ಖರ್ಗೆ ಫತ್ವಾ ಒಮ್ಮೆ ಕೇಳಿ ಎಂದು ಬರೆದುಕೊಂಡಿದ್ದಾರೆ.
ರಿಪಬ್ಲಿಕ್ ಆಫ್ ಕಲಬುರಗಿಯ ನಿಜಾಮ ಜನಾಬ್ ಸಚಿವ ಪ್ರಿಯಾಂಕ್ ಅವರು ಫತ್ವಾ ಹೊರಡಿಸಿದ್ದಾರೆ. ನೀವು ಕೇಳಿ. ಮಲ್ಲಿಕಾರ್ಜುನ ಖರ್ಗೆ ಕುಟುಂಬದವರು ಮನಸ್ಸು ಮಾಡಿದರೆ ಬಿಜೆಪಿ ಕಾರ್ಯಕರ್ತರು ಕಲಬುರಗಿ ಜಿಲ್ಲೆಗೆ ಕಾಲು ಇಡುವುದಕ್ಕೂ ಬಿಡುವುದಿಲ್ಲವಂತೆ. ಕಲಬುರಗಿ ನಿಯಮಗಳ ಹೊರತಾಗಿದೆಯೇ? ಜನಾಬ್ ಪ್ರಿಯಾಂಕ್ ಖರ್ಗೆ ಅವರೇ ಎರಡು ಬಾರಿ ಸಚಿವರಾದ ಮಾತ್ರಕ್ಕೆ ತಾವು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರಿಗಿಂತ ದೊಡ್ಡವರೂ ಅಂದುಕೊಂಡು ಬಿಟ್ಟಿದ್ದೀರಾ?. ಅಂಬೇಡ್ಕರ್ ಅವರ ಸಂವಿಧಾನ ಕಲಬುರಗಿಯಲ್ಲಿ ಅನ್ವಯ ಆಗುವುದಿಲ್ಲವೇ?. ಅಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳು ಸಿಗುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಸಚಿವರ ಹೇಳಿಕೆ ಖಂಡಿಸಿದ್ದಾರೆ.
ತಾವೂ ನಿಜಾಮರೂ ಅಲ್ಲ, ತಮ್ಮ ಹಿಂಬಾಲಕರು ರಜಾಕರರೂ ಅಲ್ಲ. ಅಧಿಕಾರದ ಮದದಲ್ಲಿ ಮೈಮರೆತು. ತಾವೂಬ್ಬ ಜನಪ್ರತಿನಿಧಿ, ಜನಸೇವಕ ಎನ್ನುವುದನ್ನು ಮರೆಯಬೇಡಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಸದ್ಯ ಗುತ್ತಿಗೆದಾರನ ಸಾವು ಖಂಡಿಸಿ ಸರ್ಕಾರ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಜನವರಿ 4ರಂದು ಕಲಬುರಗಿಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಿದೆ.




