ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ (Shreya Ghoshal) ಅವರು ಕನ್ನಡವೂ ಸೇರಿದಂತೆ ಬಹುಭಾಷೆಗಳಲ್ಲಿ ತಮ್ಮ ಗಾಯನದ ಮೂಲಕ ಎಲ್ಲರ ಹೃದಯಗಳಿಗೆ ಹತ್ತಿರವಾದವರು. ಅವರ ಇಂಪು ದನಿಯಲ್ಲಿ ಕೇಳಿಬರುವ ಹಾಡುಗಳಿಗೆ ಮನಸೋಲದವರೇ ಇಲ್ಲ. ಯಾವ ಭಾಷೆಯಾದರೂ ತಮ್ಮದೇ ಮಾತೃಭಾಷೆ ಎನ್ನುವಷ್ಟು ಸೊಗಸಾಗಿ ಹಾಡುವುದು ಶ್ರೇಯಾ ಘೋಷಾಲ್ ಅವರ ಮತ್ತೊಂದು ಸ್ಪೆಷಾಲಿಟಿ.
ಇನ್ನು ಕನ್ನಡದಲ್ಲಿ ದಶಕಗಳಿಂದಲೂ ಶ್ರೇಯಾ ಘೋಷಾಲ್ ಅವರು ಹಲವು ಸಿನಿಮಾಗಳಿಗೆ ಹಾಡಿದ್ದಾರೆ. ಅವರ ಧ್ವನಿಯಲ್ಲಿ ಮೂಡಿಬಂದಿರುವ ಹಾಡುಗಳು ಇಂದಿಗೂ ಜನರ ಬಾಯಲ್ಲಿ ಗುನುಗುತ್ತಿದ್ದು, ಎವರ್‌ಗ್ರೀನ್ ಎಂತಲೇ ಕರೆಸಿಕೊಂಡಿವೆ. ಶ್ರೇಯಾ ಅವರ ಹಾಡುಗಳಿಂದ ಸಿನಿಮಾ ಹಿಟ್ ಆಗಿರುವ ನಿದರ್ಶನಗಳು ಕೂಡ ಸಾಕಷ್ಟಿವೆ.
ಶ್ರೇಯಾ ಘೋಷಾಲ್ ಅವರು ಕರ್ನಾಟಕದ ಮನೆಮಗಳು ಎಂದೇ ಸಂಗೀತ ಪ್ರಿಯರು ಅವರಿಗೆ ಜಾಗ ಕೊಟ್ಟಿದ್ದಾರೆ. ಕನ್ನಡದ ಹಲವು ಸಿನಿಮಾಗಳಿಗೆ ಶ್ರೇಯಾ ಘೋಷಾಲ್ ಅವರು ಹಾಡಿದ್ದು, ಅದಕ್ಕೆ ದೊಡ್ಡ ಅಭಿಮಾನಿ ಬಳಗವೇ ಇದೆ. ಬಾಲಿವುಡ್ ಮಾತ್ರವಲ್ಲದೆ, ತೆಲುಗು, ತಮಿಳು, ಕನ್ನಡ, ಮರಾಠಿ ಸೇರಿದಂತೆ ಬಹುಭಾಷೆಗಳಲ್ಲಿ ಶ್ರೇಯಾ ಅವರ ಗಾಯನ ಮನೆಮಾತಾಗಿದೆ
ಆದರೆ ಇತ್ತೀಚೆಗೆ ಶ್ರೇಯಾ ಅವರು ಕನ್ನಡದಿಂದ ದೂರ ಉಳಿದ್ರಾ? ಎನ್ನುವ ಮಾತುಗಳು ಚರ್ಚೆಯಲ್ಲಿವೆ. ಹೌದು, ಇದಕ್ಕೆ ಪುಷ್ಟಿ ನೀಡುವಂತೆ ಮತ್ತೊಂದು ವಿಚಾರ ಕೂಡ ಶಾಕ್ ನೀಡಿದೆ. ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ನಾಗಶೇಖರ್ ಅವರು ಶ್ರೇಯಾ ಘೋಷಾಲ್ ಅವರ ಕುರಿತು ಶಾಕಿಂಗ್ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ.
ರಿಲೀಸ್‌ಗೆ ರೆಡಿಯಾಗಿರುವ “ಸಂಜು ವೆಡ್ಸ್ ಗೀತಾ-2” ಸಿನಿಮಾದ ಕಾರ್ಯಕ್ರಮದಲ್ಲಿ ನಾಗಶೇಖರ್ ಅವರು ಈ ವಿಚಾರದ ಬಗ್ಗೆ ಮಾತನಾಡಿರುವುದು ಚರ್ಚೆಗೆ ಕಾರಣವಾಗಿದೆ. ಸಂಜು ವೆಡ್ಸ್ ಗೀತಾ ಮೊದಲ ಭಾಗದ ಸಿನಿಮಾದಲ್ಲಿ ಶ್ರೇಯಾ ಅವರು ಹಾಡಿದ್ದ ಹಾಡುಗಳು ಸಖತ್ ಹಿಟ್ ಆಗಿದ್ದವು. ಅದರಂತೆ ಎರಡನೇ ಸಿನಿಮಾದಲ್ಲೂ ಅವರಿಂದಲೇ ಹಾಡು ಹಾಡಿಸಬೇಕು ಎಂದು ನಾಗಶೇಖರ್ ಅವರು ಶ್ರೇಯಾರನ್ನು ಸಂಪರ್ಕಿಸಿದ್ದರಂತೆ
ಆದರೆ, ಶ್ರೇಯಾ ಅವರು ಹಾಡುವುದಿಲ್ಲ ಎಂದು ಹೇಳಿದ್ದಾರೆ ಎಂದು ನಾಗಶೇಖರ್ ಹೇಳಿದ್ದಾರೆ. ಅವರು ಬಹುತೇಕ ಕನ್ನಡ ಸಿನಿಮಾಗಳಿಗೆ ಹಾಡುವುದನ್ನು ನಿಲ್ಲಿಸಿದ್ದಾರೆ. ಇದಕ್ಕೆ ಕಾರಣ ಏನು ಎಂಬುದು ನಮಗೂ ಗೊತ್ತಿಲ್ಲ. ಅದು ನಮಗೆ ಬೇಡವಾದ ವಿಚಾರ ಎಂದು ಸುಮ್ಮನಿದ್ದೇನೆ ಎಂದು ನಾಗಶೇಖರ್ ಹೇಳಿದ್ದಾರೆ.
ಶ್ರೇಯಾ ಅವರು ಆ ರೀತಿ ಹೇಳಿದ ಮೇಲೆ ನನಗೆ ಅನಿಸಿದ್ದು, ನಮ್ಮಲ್ಲೂ ಒಬ್ಬರು ಶ್ರೇಯಾ ಘೋಷಾಲ್‌ರನ್ನು ಹುಡುಕಬೇಕು ಎಂದು ಅನಿಸಿತು. ಶ್ರೇಯಾ ಅಂತವರನ್ನು ಸೃಷ್ಟಿಸುವ ಸಾಮರ್ಥ್ಯ ನಮಗಂತೂ ಇಲ್ಲ, ಆದ್ರೆ, ಅಂತಹ ಪ್ರತಿಭೆಯನ್ನು ಹುಡುಕುವ ಅವಕಾಶವಂತೂ ಇದೆ. ಕೆಲವರು ಈಗಾಗಲೇ ರಿಲೀಸ್ ಆಗಿರುವ ಸಂಜು ಸಿನಿಮಾದ ಹಾಡನ್ನು ಶ್ರೇಯಾ ಅವರೇ ಹಾಡಿದ್ದಾರೆ ಎಂದು ಭಾವಿಸಿದ್ದಾರೆ. ಆದರೆ, ಹಾಡಿರುವುದು ಶ್ರೇಯಾ ಅಲ್ಲ
ಕೆಲವರು ಈ ಸಿನಿಮಾದಲ್ಲೂ ಶ್ರೇಯಾ ಹಾಡಿದ್ದಾರಾ? ಎಂದು ಕೇಳಿದರು. ನಾನು ಇಲ್ಲ ಎಂದೇ ಹೇಳಿದ್ದೇನೆ. ಸದ್ಯ ಈಗ ಹಾಡಿರುವುದು ಸಂಗೀತಾ ರವೀಂದ್ರ, ಇವರನ್ನೇ ನಾನು ಕನ್ನಡದ ಶ್ರೇಯಾ ಘೋಷಾಲ್ ಎಂದು ಕರೆಯಲು ಬಯಸುತ್ತೇನೆ ಎಂದು ನಾಗಶೇಖರ್ ಹೇಳಿದ್ದಾರೆ. ಒಟ್ಟಾರೆ ಕರ್ನಾಟಕದಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಶ್ರೇಯಾ ಅವರು ಇತ್ತೀಚೆಗೆ ಕನ್ನಡದ ಹಾಡುಗಳಿಂದ ದೂರ ಉಳಿದಿರುವುದು ಬೇಸರವಂತೂ ತರಿಸಿದೆ.