ಬೆಂಗಳೂರು: ರಾಜ್ಯದಲ್ಲಿ ಶರಣಾದ ನಕ್ಸಲರು ( Naxals) ಇನ್ನೂ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿಲ್ಲ. ಆಧುನಿಕ ಶಸ್ತ್ರಾಸ್ತ್ರಗಳನ್ನು (Modern Weapons) ಕಾಡಿನ ರಹಸ್ಯ ಸ್ಥಳದಲ್ಲಿ ಅಡಗಿಸಿಟ್ಟಿರುವ ಶಂಕೆ ವ್ಯಕ್ತವಾಗಿದೆ.
ಯಾವೊಬ್ಬ ನಕ್ಸಲರು ಕೂಡ ಆಯುಧಗಳನ್ನು ಪೊಲೀಸರಿಗೆ ನೀಡಿಲ್ಲ. ಮುಂದಿನ ವಾರ ಪೊಲೀಸರು ನಕ್ಸಲರ ವಶಕ್ಕೆ ಪಡೆಯಲಿದ್ದು ಬಳಿಕ ಅಡಗಿಸಿಟ್ಟ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ.
ಪೊಲೀಸರು 6 ಮಂದಿ ನಕ್ಸಲರನ್ನು ರಾಷ್ಟ್ರೀಯ ತನಿಖಾ ದಳದ (NIA) ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸುವ ಮೊದಲು ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಕೆಲವರು ಅರಣ್ಯದ (Forest) ರಹಸ್ಯ ಅಡಗಿಸಿ ಇಟ್ಟಿರುವುದಾಗಿ ತಿಳಿಸಿದ್ದಾರೆ. ಈ ಸ್ಥಳಗಳ ಮಾಹಿತಿ ಪೊಲೀಸರಿಗೆ ಇಲ್ಲ. ಹೀಗಾಗಿ ಪೊಲೀಸರು ಬಾಡಿ ವಾರಂಟ್ ಪಡೆದು ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ ಬಳಿಕ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಿದ್ದಾರೆ ಎನ್ನಲಾಗಿದೆ.
ಎಕೆ 47, ಮಿಷಿನ್ ಗನ್ಗಳನ್ನು ಇವರು ಬಳಸುತ್ತಿದ್ದರು. ಸಿಎಂ ಮುಂದೆ ಶರಣಾದ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರ ಕಾಡಿನಲ್ಲಿಯೇ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.
ಪರಪ್ಪನ ಅಗ್ರಹಾರದಲ್ಲಿ ನಕ್ಸಲರು
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಅವರ ಎದುರು ಬುಧವಾರ ರಾತ್ರಿ ಶರಣಾದ ನಕ್ಸಲರಾದ ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಟಿ.ಎನ್. ಜಿಶಾ, ಕೆ.ವಸಂತ್, ಮಾರೆಪ್ಪ ಅರೋಲಿ ಅವರನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್ ಅವರ ನೇತ್ವತ್ವದಲ್ಲಿ ಗುರುವಾರ ನಗರದದಲ್ಲಿರುವ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನ್ಯಾಯಾಲಯವು ಆರು ಮಂದಿಯನ್ನು ಜನವರಿ 30ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ನಂತರ ಪೊಲೀಸರು ಆರು ಮಂದಿ ನಕ್ಸಲರನ್ನು ಬಿಗಿ ಭದ್ರತೆ ನಡುವೆ ಗುರುವಾರ ರಾತ್ರಿ ಪರಪ್ಪನ ಅಗ್ರಹಾರ (Parappana Agrahara) ಕೇಂದ್ರ ಕಾರಾಗೃಹಕ್ಕೆ ಬಿಟ್ಟು ಬಂದಿದ್ದಾರೆ. ಇದನ್ನೂ ಓದಿ: ಸ್ನೇಹಮಹಿ ಕೃಷ್ಣ ಹೆಸರಲ್ಲಿ ಹಲವರ ಮೇಲೆ ಅನಾಮಧೇಯರಿಂದ ದೂರು
ಕೋರ್ಟ್ಗೆ ಹಾಜರು ಪಡಿಸುವ ಮೊದಲು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆರು ಮಂದಿಯ ಆರೋಗ್ಯ ತಪಾಸಣೆ ನಡೆಸಲಾಯಿತು. ಮುಖ್ಯಮಂತ್ರಿಯವರ ಗೃಹ ಕಚೇರಿಯಲ್ಲಿ ಶರಣಾದ ನಂತರ ನಕ್ಸಲರನ್ನು ಪೊಲೀಸರು ಬಂಧಿಸಿದ್ದರು. ನಾಲ್ವರು ಮಹಿಳೆಯರನ್ನು ಸಾಂತ್ವನ ಕೇಂದ್ರ ಹಾಗೂ ಇಬ್ಬರು ಪುರುಷರನ್ನು ಆಡುಗೋಡಿಯ ಎಫ್ಎಸ್ಎಲ್ ತಾಂತ್ರಿಕ ಕಚೇರಿಯಲ್ಲಿ ಬುಧವಾರ ರಾತ್ರಿ ಇರಿಸಿದ್ದರು.
ಆರು ಮಂದಿ ನಕ್ಸಲರ ವಿರುದ್ಧವೂ ‘ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ’(ಯುಎಪಿಎ) ಅಡಿ ಪ್ರಕರಣ ದಾಖಲಾಗಿದೆ. ಹೀಗಾಗಿ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.