ಬೆಂಗಳೂರು: ದೇಶದ ಪ್ರಮುಖ ಐಟಿ ಕೇಂದ್ರ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 10 ರಿಂದ 14 ರ ವರೆಗೆ ನಾಲ್ಕು ದಿನಗಳ ಕಾಳ ನಡೆಯಲಿರುವ ಜಾಗತಿಕ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ವ್ಯಾಪಕ ಸಿದ್ಧತೆ ನಡೆಯುತ್ತಿದೆ. ಈ ಶೋಗೆ ಬೇಕಾಗಿರುವ ಅಗತ್ಯ ಕಾವೇರಿ ನೀರನ್ನು ಪೂರೈಕೆಗೆ ಬದ್ಧವಾಗಿದೆ ಎಂದು ಬೆಂಗಳೂರು ಜಲ ಮಂಡಳಿ ಸಜ್ಜಾಗಿದೆ. ಬೇಸಿಗೆ ಕಾರಣ ಮತ್ತು ಅನೇಕ ಜನರು ಶೋಗೆ ಬರುವ ಕಾರಣ ನೀರಿನ ಸಮರ್ಪಕ ಸರಬರಾಜು ಅತ್ಯವಶ್ಯವಾಗಿರುತ್ತದೆ.
ಬೆಂಗಳೂರು ನೀರು ಸರಬರಾಜು ಮತ್ತು ಜಲಮಂಡಳಿ ( BWSSB) ಅಧ್ಯಕ್ಷ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅವರು ಗುರುವಾರ ಈ ಬಗ್ಗೆ ಮಾಹಿತಿ ನೀಡಿದರು. ಜಲಮಂಡಿಗೆ ಈಗಾಗಲೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನೀಡಿದ್ದ ಸೂಚನೆ ಮೇರೆಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಗತ್ಯ ತಯಾರಿಗೆ ಅಧಿಕಾರಿ, ಸಿಬ್ಬಂದಿಗೆ ಸೂಚಿಸಿದ್ದೇವೆ ಎಂದರು.
ವೈಮಾನಿಕ ಪ್ರದರ್ಶನಕ್ಕೆ ಪ್ರತಿದಿನ 4 ಎಂ.ಎಲ್.ಡಿಯಿಂದ 5 ಎಂ.ಎಲ್.ಡಿ ಕಾವೇರಿ ನೀರು ಅಗತ್ಯವಿದೆ. ನಾವು ವಿಶೇಷ ಪೈಪ್ಲೈನ್ ಮೂಲಕ 25 ಎಂ.ಎಲ್.ಡಿ ನೀರು ಪೂರೈಸುವ ಸ್ಥಿತಿಯಲ್ಲಿದ್ದೇವೆ. ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಡಚಣೆಗಳು ಉಂಟಾದರೆ, BWSSB ತನ್ನ ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡಲು ಸಹ ವ್ಯವಸ್ಥೆ ಮಾಡಲಿದೆ. ಯಾವ ಕಾರಣ ಈ ವಿಚಾರದಲ್ಲಿ ತೊಂದರೆ ಆಗುವುದಿಲ್ಲ ಎಂದು ಅವರು ಭರವಸೆ ನೀಡಿದರು. ಬಿಬಿಎಂಪಿ ಮತ್ತು ಲೋಕೋಪಯೋಗಿ ಇಲಾಖೆಯಿಂದ ರಸ್ತೆಗಳ ದುರಸ್ತಿ ಮತ್ತಿತರೆ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದೆ. ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ನೀರಿನ ಪೂರೈಕೆಯ ಅಗತ್ಯವಿರುವ ವಿವಿಧ ಮಳಿಗೆಗಳು ಮತ್ತು ಚಟುವಟಿಕೆಗಳನ್ನು ಒಳಗೊಂಡಿದೆ. ಬೇಡಿಕೆಯನ್ನು ಪೂರೈಸಲು ಜಲಮಂಡಳಿ ಸಜ್ಜಾಗಿದೆ ಎಂದು ಅವರು ಹೇಳಿದರು. ಈ ವರ್ಷ ಕಾವೇರಿ ಜಲಾಶಯಗಳು ಭರ್ತಿಯಾಗಿದೆ. ಜಲಾಶಯಗಳಲ್ಲಿ ಅಗತ್ಯ ಪ್ರಮಾಣದಲ್ಲಿ ನೀರು ಸಂಗ್ರಹವಿದೆ. ಒಂದು ವೇಳೆ ಪೂರೈಕೆಯಲ್ಲಿ ವ್ಯತ್ಯಯವಾದರೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳುತ್ತೇವೆ. ಒಟ್ಟಿನಲ್ಲಿ ವೈಮಾನಿಕ ಪ್ರದರ್ಶನಕ್ಕೆ ಅಗತ್ಯ ವಿರುವ ನೀರನ್ನು ಪೂರೈಕೆ ಮಾಡಲಿದ್ದೇವೆ ಎಂದು ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಬೆಂಗಳೂರಲ್ಲಿ ಬೇಸಿಗೆಗೆ ನೀರಿನ ಸಮಸ್ಯೆ ಇಲ್ಲ ಬೆಂಗಳೂರು ಜಲಮಂಡಳಿಯು ಬೆಂಗಳೂರು ನಗರಕ್ಕೆ ನಿತ್ಯ 1450 ಎಂಎಲ್ಡಿ ಕಾವೇರಿ ನೀರನ್ನು ಸರಬರಾಜು ಮಾಡುತ್ತದೆ. ಇತ್ತೀಚೆಗೆ ಕಾವೇರಿ ಐದನೇ ಹಂತದ ಯೋಜನೆಗೆ ಸರ್ಕಾರ ಚಾಲನೆ ನೀಡಿದ ಬೆನ್ನಲ್ಲೆ ಸುಮಾರು ನೂರು ಕಿಲೋ ಮೀಟರ್ ದೂರದಿಂದ ಬೆಂಗಳೂರಿಗೆ ಪೈಪ್ಗಳ ಮೂಲಕ ನೀರು ಸರಬರಾಜು ಆಗುತ್ತಿದೆ. ಉತ್ತಮ ಮಳೆಯಿಂದಾಗಿ ಕೃಷ್ಣ ರಾಜಸಾಗರ ಜಲಾಶಯವು ಭರ್ತಿಯಾಗಿರುವ ಕಾರಣ, ಈ ಭಾರಿ ಬೆಂಗಳೂರು ನೀರು ಸರಬರಾಜಿಗೆ, ನೀರಾವರಿಗೆ ಇನ್ನಿತರ ಉಪಯೋಗಕ್ಕೆ ಬೇಸಿಗೆಯಲ್ಲಿ ಹಾಹಾಕಾರ ಉಂಟಾಗುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.