ಬೆಂಗಳೂರು: ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು, ಇಂದು ವಿಕಾಸಸೌಧದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಉಪಸ್ಥಿತಿಯಲ್ಲಿ ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯ ಮೊದಲನೇ ಸರ್ವ ಸದಸ್ಯರ ಸಭೆಯನ್ನು ನಡೆಸಿದರು.
ಮಂಡಳಿಯ ಮೂಲಕ ನೀಡಲಾಗುವ ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ಅಧಿಕಾರಿಗಳೊಂದಿಗೆ ವಿಸ್ತೃತವಾಗಿ ಸಚಿವರು ಚರ್ಚಿಸಿದರು.
ಸಾರಿಗೆ ವಲಯದಲ್ಲಿ ಕೆಲಸ ಮಾಡುವ ಅಸಂಘಟಿತ ಕಾರ್ಮಿಕರ ಹಿತ ಕಾಪಾಡುವ ಉದ್ದೇಶದಿಂದ ಈ ಮಂಡಳಿಯನ್ನು ರಚಿಸಲಾಗಿದ್ದು, ಹಲವಾರು ಸಾಮಾಜಿಕ ಭದ್ರತಾ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಸಭೆಯಲ್ಲಿ ಹಾಜರಿದ್ದ ಹಲವರು ಮಂಡಳಿಯ ಸಮರ್ಪಕ ಕಾರ್ಯವಿಧಾನಕ್ಕೆ ಸಲಹೆಗಳನ್ನು ನೀಡಿದರು.
ಈ ಸಭೆಯಲ್ಲಿ ಕಾರ್ಮಿಕ ಮತ್ತು ಸಾರಿಗೆ ಕಾರ್ಯದರ್ಶಿಗಳಾದ ಎನ್.ವಿ.ಪ್ರಸಾದ್, ಕಾರ್ಮಿಕ ಇಲಾಖೆಯ ಆಯುಕ್ತ ಡಾ. ಗೋಪಾಲಕೃಷ್ಣ, ಸಾರಿಗೆ ಆಯುಕ್ತ ಯೋಗೀಶ್, ಅಪರ ಸಾರಿಗೆ ಆಯುಕ್ತ ಉಮಾಶಂಕರ್, ಉಪ ಸಾರಿಗೆ ಆಯುಕ್ತ ಮೂರ್ತಿ, ವಾಣಿಜ್ಯ ತೆರಿಗೆ ಆಯುಕ್ತ ವಿಪುಲ್ ಬನ್ಸಾಲ್, ಜಂಟಿ ಕಾರ್ಮಿಕ ಆಯುಕ್ತ ಚಿದಾನಂದ, ಉಪ ಕಾರ್ಮಿಕ ಆಯುಕ್ತ ರವಿಕುಮಾರ್, ನೂತನ ಮಂಡಳಿಯ ಸದಸ್ಯರುಗಳಾದ ಕೆ ಆರ್ ಧನಂಜಯ, ಸತ್ಯನಾರಾಯಣ, ರೋಹಿತ್, ಶ್ರೀ ಲಕ್ಷ್ಮಣ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.