ಬೆಂಗಳೂರು: ನಮ್ಮ ಮೆಟ್ರೋ ನೇರಳೆ ಮಾರ್ಗದ ರೈಲುಗಳಲ್ಲಿ ಇಕ್ಕಟ್ಟಿನಲ್ಲಿ ಸಿಲುಕಿ ನಿತ್ಯ ಸಂಚರಿಸುವ ಪ್ರಯಾಣಿಕರಿಗೆ ಗುಡ್‌ನ್ಯೂಸ್. ನೇರಳೆ ಮಾರ್ಗಕ್ಕೆಂದು 6 ಕೋಚ್‌ಗಳ ಹೊಸ ರೈಲು ಚೀನಾದಿಂದ ಆಗಮನವಾಗಿದೆ. ವಿಶೇಷವೆಂದರೆ ನೇರಳೆ ಮಾರ್ಗಕ್ಕೆಂದು ಆಗಮಿಸುತ್ತಿರುವ ಮೊದಲ ಪ್ರೋಟೋ ಟೈಪ್ ಚಾಲಕ ರಹಿತ ರೈಲು ಇದಾಗಿದೆ.
ಚೀನಾದಿಂದ ಸತತ ಒಂದು ತಿಂಗಳ ಪ್ರಯಾಣದ ಬಳಿಕ ಕಳೆದ ವಾರ ಚೆನ್ನೈಗೆ ಈ ರೈಲು ಆಗಮಿಸಿದೆ. ಅಲ್ಲಿಂದ ಟ್ರಕ್‌ಗಳ ಮೂಲಕ ಬೆಂಗಳೂರಿನ ಪೀಣ್ಯದ ನಮ್ಮ ಮೆಟ್ರೋ ಡಿಪೋಗೆ ಆಗಮಿಸಿದೆ. ಅಲ್ಲಿಗೆ ಬೋಗಿಗಳ ಜೋಡಣೆ ಮಾಡಿ ಪ್ರಾಯೋಗಿಕ ಮಾರ್ಗದಲ್ಲಿ ಸಂಚಾರ ನಡೆಸಲಾಗುತ್ತಿದೆ. ಆ ಬಳಿಕ ದೈನಂದಿನ ಸೇವೆಗೆ ಲಭ್ಯವಾಗಲಿದೆ.
ವಾಣಿಜ್ಯ ಸಂಚಾರಕ್ಕೆ 6 ತಿಂಗಳು ಬೇಕು!
ಚೀನಾದಿಂದ ಬಂದಿರುವ ಈ ರೈಲಿನ ಬೋಗಿಗಳನ್ನು ಜೋಡಿಸಿ ಮೊದಲಿಗೆ ಜೋ ಪ್ರಾಯೋಗಿಕ ಮಾರ್ಗದಲ್ಲಿ ಸಂಚಾರ ನಡೆಸಲಾಗುತ್ತಿದೆ. ಆ ನಂತರ ರಾತ್ರಿ ವೇಳೆ ನೇರಳೆ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ನಡೆಸಲಾಗುತ್ತಿದೆ. ಈ ವೇಳೆ ವೇಗ, ಕನಿಷ್ಠ ಗರಿಷ್ಠ ತೂಕ ಸಾಮರ್ಥ, ತುರ್ತು ಸಂದರ್ಭ ನಿರ್ವಹಣೆ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಸತತ 6 ತಿಂಗಳ ಪ್ರಾಯೋಗಿಕ ಸಂಚಾರದ ಬಳಿಕ ನೇರಳೆ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭಿಸಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
36 ರೈಲುಗಳ ಪೈಕಿ 3 ಆಗಮನ
ನಮ್ಮ ಮೆಟ್ರೋ ಚೀನಾದ ಸಿ.ಆರ್.ಆರ್.ಸಿ (CRRC) ಕಂಪನಿ ಜತೆ ಚಾಲಕ ರಹಿತ ಮೆಟ್ರೋ ರೈಲು ಪೂರೈಕೆಗೆ 1578 ಕೋಟಿ ರೂಪಾಯಿ ಒಪ್ಪಂದ ಮಾಡಿಕೊಂಡಿದೆ. 216 ಕೋಚ್ ಅಂದರೆ, 36 ರೈಲುಗಳನ್ನು ನೀಡಬೇಕಿದೆ. ಈ ಪೈಕಿ 15 ಹಳದಿ ಮಾರ್ಗಕ್ಕೆ ಉಳಿದ 21 ನೇರಳೆ ಹಾಗೂ ಹಸಿರು ಮಾರ್ಗಕ್ಕೆ ಎಂದು ನಿಗದಿ ಮಾಡಲಾಗಿದೆ. ಸದ್ಯ ಹಳದಿ ಮಾರ್ಗಕ್ಕೆ 2 ರೈಲು, ನೇರಳೆ ಮಾರ್ಗಕ್ಕೆ 1 ರೈಲು ಪೂರೈಸಲಾಗಿದೆ. ಉಳಿದಂತೆ 33 ರೈಲು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಆಗಮಿಸಲಿವೆ.
ನೇರಳೆ ಮಾರ್ಗದಲ್ಲಿ ಹೆಚ್ಚು ದಟ್ಟಣೆ
ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದು, ಪೀಕ್ ಅವರ್ (ಸಂಜೆ, ಬೆಳಿಗ್ಗೆ) ರೈಲಿನಲ್ಲಿ ಕಾಲಿಡುವುದಕ್ಕೂ ಜಾಗ ಇಲ್ಲದಂತಹ ಪರಿಸ್ಥಿತಿ ಇರುತ್ತದೆ. ಐಟಿ ಕಂಪನಿಗಳು ಹೆಚ್ಚಿರುವ ವೈಟ್‌ಫೀಲ್ಡ್ ಭಾಗಕ್ಕೆ ಈ ರೈಲು ಸಂಪರ್ಕ ಕಲ್ಪಿಸುವುದರಿಂದ ಪ್ರಯಾಣಿಕರ ದಟ್ಟಣೆ ಹೆಚ್ಚಿದೆ. ನೇರಳೆ ಮಾರ್ಗದಲ್ಲಿ ಹೆಚ್ಚುವರಿ ರೈಲುಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ. ಶೀಘ್ರದಲ್ಲಿಯೇ ಮತ್ತಷ್ಟು ಹೊಸ ರೈಲುಗಳು ಆಗಮನವಾಗಿ ದಟ್ಟಣೆ ಕಡಿಮೆ ಮಾಡಬೇಕು ಎಂಬುದು ಪ್ರಯಾಣಿಕರ ಆಶಯವಾಗಿದೆ.