ರಾಯಚೂರು: ತಾಲೂಕಿನ ಏಗನೂರು (Eganur) ಗ್ರಾಮದ ಬಳಿಯ ಮೃತ್ಯುಂಜಯ ಮಠ ಹಾಗೂ ಗೋಶಾಲೆಯನ್ನು ಅಧಿಕಾರಿಗಳು ಬೆಳ್ಳಂಬೆಳಿಗ್ಗೆಯಿಂದ ಕಾರ್ಯಾಚರಣೆ ನಡೆಸಿ ತೆರವು ಮಾಡುತ್ತಿದ್ದಾರೆ.
ಸುಮಾರು 4 ಎಕರೆ ಸರ್ಕಾರಿ ಜಾಗದಲ್ಲಿ ಮಠ, ಗೋಶಾಲೆ ನಡೆಸುತ್ತಿದ್ದ ಹಿನ್ನೆಲೆ ಅಧಿಕಾರಿಗಳು ಗ್ರಾಮಸ್ಥರ ವಿರೋಧದ ನಡುವೆಯೂ ತೆರವು ಕಾರ್ಯಾಚರಣೆಗೆ ಇಳಿದಿದ್ದಾರೆ.
ಕಳೆದ 10 ವರ್ಷಗಳಿಂದ ಸರ್ಕಾರಿ ಜಾಗದಲ್ಲಿ ಮೃತ್ಯುಂಜಯ ಮಠ ನಡೆಸುತ್ತಿರುವ ಜ್ಞಾನಾನಂದಸ್ವಾಮಿ ಕುಂಭಮೇಳಕ್ಕೆ ಹೋಗಿದ್ದು, ರಾಯಚೂರು ಎಸಿ ಗಜಾನನ ಬಾಳೆ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆದಿದೆ. ರಾಯಚೂರು ಜಿಲ್ಲಾಧಿಕಾರಿ ನಿತೀಶ್.ಕೆ ಆದೇಶದ ಮೇರೆಗೆ ಮಠ ತೆರವಿಗೆ ಅಧಿಕಾರಿಗಳು ಮುಂದಾಗಿದ್ದು, ಇಲ್ಲಿನ ಕಟ್ಟಡಗಳು, ಗೋಶಾಲೆಯನ್ನು ತೆರವು ಮಾಡುತ್ತಿದ್ದಾರೆ.
ರಾಜೀವ್ ಗಾಂಧಿ ವಸತಿ ಯೋಜನೆಗೆ ಮಂಜೂರಾದ ಜಾಗದಲ್ಲಿರುವ ಮಠ ತೆರವಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರ ವಿರೋಧದ ನಡುವೆಯೂ ಅಧಿಕಾರಿಗಳು ತೆರವು ಕಾರ್ಯಾಚರಣೆ ಮುಂದುವರೆಸಿದ್ದು, ಗೋಶಾಲೆಯಲ್ಲಿದ್ದ ಸುಮಾರು 60 ಗೋವುಗಳನ್ನು ಬೇರೆಡೆ ಸ್ಥಳಾಂತರ ಮಾಡಿದ್ದಾರೆ.