ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಪ್ರತಿಷ್ಠಿತ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 2019ನೇ ಪ್ರಶಸ್ತಿ ಇದಾಗಿದ್ದು, ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿಗಳನ್ನು ಸುದೀಪ್ ಹಾಗೂ ಅನುಪಮಾ ಗೌಡ ಗೆದ್ದಿದ್ದಾರೆ. ಕೋವಿಡ್ -19 ಮತ್ತು ಇತರ ಕಾರಣಗಳಿಂದ ಐದು ವರ್ಷಗಳ ವಿಳಂಬದ ನಂತರ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಲಾಯಿತು.
‘ಪೈಲ್ವಾನ್’ ಚಿತ್ರದ ಅಭಿನಯಕ್ಕಾಗಿ ಸುದೀಪ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರೆ, ‘ತ್ರಯಂಬಕಂ’ ಚಿತ್ರದ ಅಭಿನಯಕ್ಕಾಗಿ ನಟಿ ಅನುಪಮಾ ಗೌಡ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಪ್ರಶಸ್ತಿಯು 20,000 ರೂಪಾಯಿ ನಗದು ಮತ್ತು 100 ಗ್ರಾಂ ಬೆಳ್ಳಿಯನ್ನು ಒಳಗೊಂಡಿದೆ.
ಕೋವಿಡ್ -19 ಮತ್ತು ಇತರೆ ಕಾರಣಗಳಿಂದ ಐದು ವರ್ಷಗಳ ವಿಳಂಬದ ನಂತರ ರಾಜ್ಯ ಸರ್ಕಾರ ಇಂದು 2019ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಿತು. 2020 ರಿಂದ 2024ರವರೆಗಿನ ಪ್ರಶಸ್ತಿಗಳನ್ನು ಸರ್ಕಾರ ಇನ್ನಷ್ಟೇ ಘೋಷಿಸಬೇಕಿದೆ.
ದರ್ಶನ್ ಅಭಿನಯದ ಯಜಮಾನ ಚಿತ್ರದ ಸಂಗೀತ ಸಂಯೋಜನೆಗಾಗಿ ವಿ.ಹರಿಕೃಷ್ಣ ಅವರು ಅತ್ಯುತ್ತಮ ಸಂಗೀತ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರೆ, ಡಾರ್ಲಿಂಗ್ ಕೃಷ್ಣ ಸಾರಥ್ಯದ ‘ಲವ್ ಮಾಕ್ಟೇಲ್’ ಚಿತ್ರಕ್ಕೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಬಂದಿದೆ. ಈ ರೊಮ್ಯಾಂಟಿಕ್ ಡ್ರಾಮಾ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದುಕೊಂಡಿದೆ. ಪಿ.ಶೇಷಾದ್ರಿ ಅವರ ‘ಮೋಹನದಾಸ್’ ಚಿತ್ರವು ಮೊದಲ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿತು. ವಿ.ಶ್ರೀನಿವಾಸ್ ನಿರ್ದೇಶನದ ‘ಅರ್ಘ್ಯಂ’ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದುಕೊಂಡಿತು.
ಹಿನ್ನೆಲೆ ಗಾಯನ ವಿಭಾಗದಲ್ಲಿ, ‘ಲವ್ ಮಾಕ್ಟೇಲ್’ ಚಿತ್ರಕ್ಕಾಗಿ ರಘು ದೀಕ್ಷಿತ್ ಅತ್ಯುತ್ತಮ ಹಿನ್ನೆಲೆ ಗಾಯಕ, ‘ರಾಗ ಭೈರವಿ’ ಚಿತ್ರಕ್ಕಾಗಿ ಡಾ.ಜಯದೇವಿ ಜಂಗಮಶೆಟ್ಟಿ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ‘ಮಿಂಚು ಹುಳ’ ಚಿತ್ರದ ಪಾತ್ರಕ್ಕಾಗಿ ಮಾಸ್ಟರ್ ಪ್ರೀತಮ್ ಅತ್ಯುತ್ತಮ ಬಾಲನಟ ಪ್ರಶಸ್ತಿ ಮತ್ತು ‘ಸುಗಂಧಿ’ ಚಿತ್ರದ ಪಾತ್ರಕ್ಕಾಗಿ ಬೇಬಿ ವೈಷ್ಣವಿ ಅಡಿಗ ಅತ್ಯುತ್ತಮ ಬಾಲನಟಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಜಿ ಅರುಣ್ಕುಮಾರ್ ನಿರ್ದೇಶನದ ‘ಎಲ್ಲಿ ಆಡೋದು ನಾವು ಎಲ್ಲಿ ಆಡೋದು’ ಚಿತ್ರವು ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಎನ್ ನಾಗೇಶ್ ಅವರ ‘ಗೋಪಾಲ್ ಗಾಂಧಿ’ ಚಿತ್ರವು ಅತ್ಯುತ್ತಮ ಚೊಚ್ಚಲ ನಿರ್ದೇಶಕರ ಚಿತ್ರ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.