ಬೆಂಗಳೂರು || ಮುಡಾ ಹಗರಣ ಮುಚ್ಚಿಹಾಕಲು ಲೋಕಾಯುಕ್ತ ಯತ್ನ: ಬಿಜೆಪಿ ಆರೋಪ

ಬೆಂಗಳೂರು || ಮುಡಾ ಹಗರಣ ಮುಚ್ಚಿಹಾಕಲು ಲೋಕಾಯುಕ್ತ ಯತ್ನ: ಬಿಜೆಪಿ ಆರೋಪ

ಬೆಂಗಳೂರು: ಮುಡಾ ಹಗರಣ ಮುಚ್ಚಿಹಾಕಲು ಲೋಕಾಯುಕ್ತ ಯತ್ನ ನಡೆಸುತ್ತಿದ್ದು, ಇದರ ವಿರುದ್ಧ ಹೋರಾಟ ನಡೆಸುತ್ತೇವೆಂದು ಬಿಜೆಪಿ ಗುರುವಾರ ಹೇಳಿದೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ವರದಿ ಸಲ್ಲಿಸುವ ಮುನ್ನವೇ… ಸಿಎಂ ಕಚೇರಿ ಲೋಕಾಯುಕ್ತ ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದು, ವರದಿ ಸಿಎಂ ಪರ ಬರುವ ನಿರೀಕ್ಷೆ ಇದೆ. ಹಗರಣವನ್ನು ಮುಚ್ಚಿಹಾಕುವ ಪ್ರಯತ್ನಗಳೂ ನಡೆಯುತ್ತಿದ್ದು, ಪ್ರಕರಣವನ್ನು ಸಿಬಿಐಗೆ ವಹಿಸುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

ಮುಡಾ ಹಗರಣದಲ್ಲಿ 4-5 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ. ಸಿಎಂ ಸಿದ್ದರಾಮಯ್ಯ 14 ಸೈಟು ವಾಪಸ್ ನೀಡಿರುವುದರಿಂದ ತಪ್ಪಾಗಿದೆ ಎಂಬುದು ಸಾಬೀತಾಗಿದೆ. ಜಾರಿ ನಿರ್ದೇಶನಾಲಯ ಆಸ್ತಿಗಳನ್ನು ವಶಕ್ಕೆ ಪಡೆದಿದ್ದರೂ, ಲೋಕಾಯುಕ್ತ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಲಾಗಿದೆ. ಇದರಲ್ಲಿ ಅಧಿಕಾರಿಗಳ ತಪ್ಪು ಎನ್ನಲಾಗುತ್ತಿದೆ. ಆದರೆ, ಇದರ ಹಿಂದೆ ಸಿಎಂ ಸಿದ್ದರಾಮಯ್ಯ ಇರುವುದನ್ನು ಮುಚ್ಚಿಹಾಕಲಾಗುತ್ತಿದೆ. ಇದರ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಸಲಿದೆ ಎಂದು ತಿಳಿಸಿದರು.

ಲೋಕಾಯುಕ್ತ ಪೊಲೀಸರು ಸರಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಧಿಕಾರಿಗಳಿಗೆ ವರ್ಗಾವಣೆ, ಬಡ್ತಿ ಅಗತ್ಯವಿದೆ. ಹೀಗಾಗಿಯೇ ಆರೋಪಿ ಸಿದ್ದರಾಮಯ್ಯ ಪರವಾಗಿ ತನಿಖೆ ನಡೆಸುತ್ತಿದ್ದಾರೆ. ವಾಲ್ಮೀಕಿ ನಿಗಮ ಹಗರಣದಲ್ಲಿಯೂ ವಿಶೇಷ ತನಿಖಾ ತಂಡ ಮಾಜಿ ಸಚಿವ ಬಿ ನಾಗೇಂದ್ರ ಅವರಿಗೆ ಕ್ಲೀನ್ ಚಿಟ್ ನೀಡಿತ್ತು. ಮುಡಾ ಪ್ರಕರಣವೂ ಅದೇ ಹಾದಿಯಲ್ಲಿ ಸಾಗುವುದು ಖಚಿತ. ಪ್ರಕರಣವನ್ನು ಸಿಬಿಐಗೆ ವಹಿಸುವವರೆಗೂ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಮಾತನಾಡಿ, ಮಾಧ್ಯಮಗಳಲ್ಲಿ ವರದಿಯಾಗುತ್ತಿರುವಂತೆ ಲೋಕಾಯುಕ್ತದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಲೀನ್ ಚಿಟ್ ಪಡೆದಿರುವುದು ಒಂದು ವೇಳೆ ನಿಜವೇ ಆಗಿದ್ದರೆ ಲೋಕಾಯುಕ್ತ ತನಿಖೆಯ ಬಗ್ಗೆ ನಾವು ಎತ್ತಿದ್ದ ಆಕ್ಷೇಪ ಹಾಗೂ ಅನುಮಾನಗಳು ಸರಿ ಎಂದು ಸಾಬೀತಾಗುತ್ತದೆ. ಪಾರದರ್ಶಕ ತನಿಖೆಯ ದೃಷ್ಟಿಯಿಂದ ನಾವು ಮೊದಲಿನಿಂದಲೂ ಮುಡಾ ಹಗರಣದ ಕುರಿತಂತೆ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದೇವೆ,ಈ ಸಂಬಂಧ ಇಷ್ಟರಲ್ಲೇ ಹೊರಬೀಳಲಿರುವ ಉಚ್ಚ ನ್ಯಾಯಾಲಯದ ತೀರ್ಪನ್ನು ರಾಜ್ಯದ ಜನತೆ ನಿರೀಕ್ಷಿಸುತ್ತಿದ್ದಾರೆದು ಹೇಳಿದ್ದಾರೆ.

ತಮ್ಮ ಮೇಲೆ ಸಾಕ್ಷಿಸಮೇತ ಗುರುತರ ಆರೋಪ ಬಂದರೂ ತಾವೇ ನಿಯೋಜಿಸಿರುವ ಅಧಿಕಾರಿಗಳಿರುವ ಲೋಕಾಯುಕ್ತದ ಮೂಲಕ ತನಿಖೆ ಎದುರಿಸಿ ಲೋಕಾಯುಕ್ತ ಸಂಸ್ಥೆಗೆ ತಮ್ಮ ಪ್ರಭಾವ ಬಳಸಿದ ಮೊದಲ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ರಾಜ್ಯದ ಇತಿಹಾಸದಲ್ಲಿ ಕಪ್ಪು ಚುಕ್ಕೆ ಬರೆದಿದ್ದಾರೆ. ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸಿದ ರೀತಿ, ನೀತಿ, ಲೋಕಾಯುಕ್ತ ತನಿಖಾಧಿಕಾರಿಗಳ ವರ್ತನೆ ಸಂಪೂರ್ಣ ಸಂಶಯಾಸ್ಪದವಾಗಿದ್ದು, ಲೋಕಾಯುಕ್ತದ ತನಿಖೆಯ ವರದಿಯು ಪಾರದರ್ಶಕವೆಂದು ಸಾಬೀತುಪಡಿಸಿಕೊಳ್ಳಲು ಸಾಧ್ಯವೇ ಇಲ್ಲ. ಈ ನಿಟ್ಟಿನಲ್ಲಿ ಈಗಾಗಲೇ ಜಾರಿ ನಿರ್ದೇಶನಾಲಯ (ಇಡಿ) ವಸ್ತು ಸ್ಥಿತಿಯನ್ನು ಒಳಗೊಂಡ ತನ್ನ ತನಿಖೆಯ ಅಂಶವನ್ನು ಉಲ್ಲೇಖಿಸಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಇದರಿಂದ ಈಗಾಗಲೇ ಗಲಿಬಿಲಿ ಗೊಂಡಿರುವ ಮುಖ್ಯಮಂತ್ರಿಗಳು ಲೋಕಾಯುಕ್ತದ ಮೂಲಕ ಕ್ಲೀನ್ ಚಿಟ್ ಪಡೆದುಕೊಳ್ಳಲು ತಮ್ಮ ಸಂಪೂರ್ಣ ಪ್ರಭಾವವನ್ನು ಬಳಸಿಕೊಂಡಿದ್ದಾರೆ ಎಂಬುದು ಲೋಕಾಯುಕ್ತ ಅಧಿಕಾರಿಗಳ ನಡೆಯಿಂದ ವೇದ್ಯವಾಗುತ್ತಿದೆ.

ಇಡಿ ವರದಿ ಹಾಗೂ ದೂರುದಾರರು ನೀಡಿರುವ ದಾಖಲೆಗಳನ್ನು ಆಧರಿಸಿ ಹಾಗೂ ಈಗಾಗಲೇ ಘನ ಉಚ್ಚ ನ್ಯಾಯಾಲಯದಲ್ಲಿ ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿಗೆ ಸಂಬಂಧಿಸಿದಂತೆ ನೀಡಲಾಗಿರುವ ತೀರ್ಪಿನಲ್ಲಿರುವ ಅಂಶಗಳನ್ನು ಉಲ್ಲೇಖಿಸಿ ಸಿಬಿಐ ತನಿಖೆ ನಡೆದರೆ ಮಾತ್ರ ರಾಜ್ಯ ಕಂಡ ಅತಿ ಭ್ರಷ್ಟ, ಸ್ವಜನ ಪಕ್ಷಪಾತದ, ಬಹುದೊಡ್ಡ ನಿವೇಶನಗಳ ಲೂಟಿಕೋರತನ ಹಗರಣದ ಹೂರಣ ಬಯಲಿಗೆ ಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ರಾಜ್ಯಾಧ್ಯಕ್ಷ ಸ್ಥಾನ ಬಣ ಬಡಿದಾಟ ಕುರಿತು ಮಾತನಾಡಿ, ಪಕ್ಷದ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಕೋರ್ ಕಮಿಟಿ ಸಭೆಯಲ್ಲಿ 55 ಸಂಸದರು, ಶಾಸಕರು ಮತ್ತು ಎಂಎಲ್ಸಿಗಳು ಭಾಗವಹಿಸಿದ್ದರು. ಭಾಗವಹಿಸಿದವರಲ್ಲಿ ಶೇ.90ಕ್ಕೂ ಹೆಚ್ಚು ಜನರು ನನ್ನ ನಾಯಕತ್ವವನ್ನು ಮೆಚ್ಚಿದ್ದಾರೆ, ಹಲವರು ರಾಜ್ಯಾಧ್ಯಕ್ಷರಾಗಿ ಮುಂದುವರೆಯುವಂತೆ ಅಭಿಪ್ರಾಯ ತಿಳಿಸಿದರು. ಕೆಲವರು ಮಾತ್ರ ನನ್ನ ನಿಲುವನ್ನು ವಿರೋಧಿಸುತ್ತಿದ್ದಾರೆ. ಅವರೊಂದಿಗೆ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯಗಳಿಲ್ಲ. ಎಲ್ಲ ತಪ್ಪುಗ್ರಹಿಕೆಗಳು ಶೀಘ್ರದಲ್ಲೇ ಬಗೆಹರಿಯಲಿವೆ ಎಂದರು.

ಇದೇ ವೇಳೆ ಪಕ್ಷದೊಳಗಿನ ಅಸಮಾಧಾನವನ್ನು ಒಪ್ಪಿಕೊಂಡ ವಿಜಯೇಂದ್ರ ಅವರು, ಬಿಜೆಪಿಯಲ್ಲಿನ ಬಣ ಬೆಳವಣಿಗೆಗಳು ಕಾರ್ಯಕರ್ತರು ಹಾಗೂ ನನಗೂ ಬೇಸರ ತರಿಸಿದೆ. ಆದರೆ, ನನ್ನ ಅಧ್ಯಕ್ಷಗಿರಿಯ ಬಗ್ಗೆ ಕಾರ್ಯಕರ್ತರಿಗೆ ಸಮಾಧಾನ ಇದೆ. ಯಡಿಯೂರಪ್ಪ ಅವರ ಬಗ್ಗೆ ಅಪಮಾನ ಆಗುವ ರೀತಿಯಲ್ಲಿ ಕೆಲವರು ಮಾತನಾಡುತ್ತಿದ್ದಾರೆ. ಕಾರ್ಯಕರ್ತರು ನೊಂದಿದ್ದಾರೆ. ಈ ವಿಚಾರವಾಗಿ ಹೈಕಮಾಂಡ್ ಜೊತೆ ಮಾತನಾಡಿದ್ದೇನೆ. ಶ್ರೀರಾಮುಲು ವಿಚಾರ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಆಗಿದೆ. ರಾಮುಲು ಬಗ್ಗೆ ಗೌರವ ಇದೆ. ಎಲ್ಲಾ ಅಂಶಗಳನ್ನು ಹೊರಗಡೆ ಹೇಳಲು ಸಾಧ್ಯವಿಲ್ಲ. ಶ್ರೀರಾುಲು ಅಪಾರ್ಥಕ್ಕೆ ಅವಕಾಶ ಮಾಡಿಕೊಡಬಾರದು. ಎಲ್ಲರೂ ಒಗ್ಗಟ್ಟಾಗಬೇಕು ಎಂದು ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ತಿಳಿಸಿದ್ದಾರೆ. ಎಲ್ಲರೂ ಒಟ್ಟಾಗಿ ಹೋಗಬೇಕಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *