ರಾಯಚೂರು: ಗುರು ರಾಯರ ಸನ್ನಿಧಿ ಮಂತ್ರಾಲಯದಲ್ಲಿ ಅಡ್ವಾನ್ಸ್ ರೂಂ ಬುಕ್ ಮಾಡುವ ರಾಯರ ಭಕ್ತರು ಇನ್ನು ಮುಂದೆ ಸಾಕಷ್ಟು ಎಚ್ವರಿಕೆ ವಹಿಸಬೇಕಿದೆ. ಯಾಕೆಂದರೆ ರೂಂ ಬುಕ್ಕಿಂಗ್, ಪ್ರಸಾದ, ವಿವಿಧ ಸೇವೆಗಳ ಸೌಲಭ್ಯ ಒದಗಿಸುವ ಹೆಸರಲ್ಲಿ ವಂಚಕರ ಜಾಲ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಮಂತ್ರಾಲಯ ರಾಯರ ಮಠದ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದ್ದು, ಭಕ್ತರು ಜಾಗೃತರಾಗಿರಲು ಸೂಚಿಸಿದೆ.
ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ಮಠದ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದು, ಭಕ್ತರಿಂದ ಹಣ ಸಂಗ್ರಹ ಮಾಡಲಾಗುತ್ತಿದೆ. ಫೇಕ್ ಯುಪಿಐ ಐಡಿಗಳ ಮೂಲಕ ಹಣ ಹಾಕಿಸಿಕೊಂಡು ವಂಚಿಸಲಾಗುತ್ತಿದೆ. ವಂಚಕರ ಜಾಲದಿಂದ ಭಕ್ತರು ಹಣ ಕಳೆದುಕೊಳ್ಳುತ್ತಿದ್ದಾರೆ
ವಂಚಕರ ಕರೆ, ಪೋಸ್ಟ್, ಮೆಸೇಜ್ ನಂಬಿ ನಕಲಿ ಯುಪಿಐ ಐಡಿಗಳಿಗೆ ಹಣ ಹಾಕದಂತೆ ಮಠ ಎಚ್ಚರಿಕೆ ನೀಡಿದೆ. ವಂಚಕರಿಂದ ಕರೆ, ಮೆಸೇಜ್ ಬಂದರೆ ಸೈಬರ್ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಿದೆ.
ಕೊಠಡಿಗಳನ್ನು ಅಧಿಕೃತ ವೆಬ್ಸೈಟ್ನಿಂದ ಬುಕ್ ಮಾಡುವಂತೆ ತಿಳಿಸಿದೆ.ಮಠದ ವ್ಯವಸ್ಥಾಪಕ ವೆಂಕಟೇಶ್ ಜೋಶಿ ವಂಚಕರ ಜಾಲದ ಬಗ್ಗೆ ಪ್ರಕಟಣೆ ಹೊರಡಿಸಿ ಭಕ್ತರು ಎಚ್ಚರಿಕೆಯಿಂದಿರಲು ತಿಳಿಸಿದ್ದಾರೆ.