ತುಮಕೂರು: ರಾಜ್ಯದಲ್ಲಿ ಮೈಕ್ರೋಫೈನಾನ್ಸ್ ಕಂಪನಿಗಳ ಹಾವಳಿ ಹೆಚ್ಚಾಗಿದ್ದು ಕೆಲವು ಊರುಗಳಲ್ಲಿ ಜನರು ಮನೆಯನ್ನೇ ಬಿಟ್ಟು ಓಡಿ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಮೈಕ್ರೋ ಫೈನಾನ್ಸ್ ಕಿರುಕುಳದ ಸುದ್ದಿಗಳೇ ಹೆಚ್ಚು ಸದ್ದು ಮಾಡುತ್ತಿರುವ ಹೊತ್ತಲ್ಲೇ ತುಮಕೂರು ಜಿಲ್ಲೆಯಲ್ಲಿ ಕಿಲಾಡಿ ದಂಪತಿ ಮೈಕ್ರೋ ಫೈನಾನ್ಸ್ನಿಂದ ಸಾಲ ಪಡೆದು ಪರಾರಿಯಾದ ಆರೋಪ ಕೇಳಿ ಬಂದಿದೆ.
ಗ್ರಾಮಸ್ಥರ ಹೆಸರಿನಲ್ಲಿ ಮೈಕ್ರೋ ಫೈನಾನ್ಸ್ನಿಂದ ಸಾಲ
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಪುರವರ ಹೋಬಳಿಯ ದೊಡ್ಡಹೊಸಳ್ಳಿ ಗ್ರಾಮದ ಪ್ರತಾಪ್ ಹಾಗೂ ರತ್ನಮ್ಮ ಚಾಲಾಕಿ ದಂಪತಿ ಪರಾರಿಯಾಗಿರುವವರು. ಗ್ರಾಮಸ್ಥರ ಹೆಸರಿನಲ್ಲಿ ಮೈಕ್ರೋ ಫೈನಾನ್ಸ್ನಿಂದ 50 ಲಕ್ಷಕ್ಕೂ ಅಧಿಕ ಮೊತ್ತದ ಸಾಲ ಪಡೆದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಮೈಕ್ರೋಫೈನಾನ್ಸ್ ಕಂಪನಿಯಿಂದ 50 ಲಕ್ಷಕ್ಕೂ ಹೆಚ್ಚು ಸಾಲ
ಸುಮಾರು 35 ಮಂದಿಯ ಆಧಾರ್ ಕಾರ್ಡ್ ಪಡೆದು, 10 ಕ್ಕೂ ಹೆಚ್ಚು ಮೈಕ್ರೋಫೈನಾನ್ಸ್ ಕಂಪನಿಯಿಂದ 50 ಲಕ್ಷಕ್ಕೂ ಹೆಚ್ಚು ಸಾಲ ಪಡೆದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಜನರ ಹೆಸರಲ್ಲಿ ತಾವೇ ಸಾಲ ಮಂಜೂರು ಮಾಡಿಕೊಂಡು, ತಾವೇ ಸಾಲದ ಹಣ ಕಟ್ಟುತ್ತೇವೆ ಎಂದು ಪಂಗನಾಮ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ಎರಡು ತಿಂಗಳ ಹಿಂದೆಯೇ ಈ ದಂಪತಿ ಪರಾರಿ!
ಹಲವು ಮೈಕ್ರೋಫೈನಾನ್ಸ್ ನವರ ಜೊತೆ ಒಡನಾಟ ಇಟ್ಟುಕೊಂಡಿದ್ದ ಖತರ್ನಾಕ್ ದಂಪತಿ, ಜನರ ಹೆಸರಲ್ಲಿ ಸಾಲ ಮಂಜೂರು ಮಾಡಿಸಿಕೊಂಡಿದ್ದಾರೆ. ಜನರಿಗೆ ಆ ಹಣವನ್ನು ತಾವೇ ಕಟ್ಟುವುದಾಗಿ ಹೇಳಿದ್ದಾರೆ. ಆದರೆ ಕಳೆದ ಎರಡು ತಿಂಗಳ ಹಿಂದೆಯೇ ಈ ದಂಪತಿ ಊರು ಬಿಟ್ಟು ಪರಾರಿಯಾಗಿದ್ದಾರೆ.
ಗ್ರಾಮಸ್ಥರ ಹಿಂದೆ ಬಿದ್ದ ಮೈಕ್ರೋ ಫೈನಾನ್ಸ್ ಸಿಬ್ಬಂದಿ
ಇದೀಗ ಸಾಲ ಮರುಪಾವತಿ ಮಾಡುವಂತೆ ಮೈಕ್ರೋ ಫೈನಾನ್ಸ್ನಿಂದ ಗ್ರಾಮಸ್ಥರಿಗೆ ನೋಟಿಸ್ ಬಂದಿವೆ. ಸದ್ಯ ಹಣ ಕಟ್ಟುವಂತೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಗ್ರಾಮಸ್ಥರ ಹಿಂದೆ ಬಿದ್ದಿದ್ದಾರೆ.