ಕೊಪ್ಪಳ: ದಕ್ಷಿಣ ಭಾರತದ ಮಹಾಕುಂಭಮೇಳ ಎಂದೇ ಖ್ಯಾತಿ ಹೊಂದಿರುವ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯ ಮಹಾದಾಸೋಹ ಹಾಗೂ ಜಾತ್ರೆಗೆ ಬುಧವಾರ ವಿಧ್ಯುಕ್ತ ತೆರೆ ಬಿತ್ತು.
1,200 ಕ್ವಿಂಟಾಲ್ ಅಕ್ಕಿ ಬಳಕೆ: ಜನವರಿ 12ರಿಂದ ಆರಂಭವಾದ ಗವಿಮಠದ ಜಾತ್ರೆಯ ಮಹಾ ದಾಸೋಹದಲ್ಲಿ ಈ ಬಾರಿ 20 ಲಕ್ಷ ರೊಟ್ಟಿ, 1,200 ಕ್ವಿಂಟಾಲ್ ಅಕ್ಕಿ, 20 ಲಕ್ಷ ಜಿಲೇಬಿ, 8 ಲಕ್ಷ ಮಿರ್ಚಿ, ಟನ್ಗಟ್ಟಲೆ ತರಕಾರಿ, ಹಾಲು, ತುಪ್ಪ.. ಹೀಗೆ ನಾನಾ ವಿಧದ ಪದಾರ್ಥಗಳು ಬಳಕೆಯಾಗಿವೆ. ದಾಸೋಹಕ್ಕಾಗಿ ಸಿಹಿತಿನಿಸುಗಳನ್ನು ಭಕ್ತರು ನೀಡಿದ್ದು, ಅವುಗಳನ್ನೂ ದಾಸೋಹದಲ್ಲಿ ಬಳಸಲಾಗಿತ್ತು.
ದಾಸೋಹದಲ್ಲಿ ಎಲ್ಲವೂ ಅಚ್ಚುಕಟ್ಟು: ಜಾತ್ರೆಗೆ ಬರುವ ಭಕ್ತಾದಿಗಳಿಗೆ ಪ್ರಸಾದ ವಿತರಿಸುವ ವ್ಯವಸ್ಥೆ ಮೊದಲ ದಿನದಿಂದ ಕೊನೆಯ ದಿನದವರೆಗೂ ಅಚ್ಚುಕಟ್ಟಾಗಿ ಜರುಗಿದೆ. ಪ್ರತಿದಿನ ಲಕ್ಷಾಂತರ ಜನರು ಪ್ರಸಾದ ಸೇವನೆಗಾಗಿ ಬಂದರೂ, ಒಂದು ದಿನವೂ ಯಾರಿಗೂ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಮುಖ್ಯವಾಗಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ನಿರಂತರ ಕುಡಿಯುವ ನೀರಿನ ಸರಬರಾಜು, ಬೆಳಕು, ನೆರಳಿನ ವ್ಯವಸ್ಥೆ, ಊಟಕ್ಕೆ ಬೇಕಾಗುವ ತಟ್ಟೆ, ಸಾವಿರಾರು ಜನರು ಸ್ವಯಂ ಸೇವಕರಾಗಿ ಬಂದು ದಾಸೋಹದಲ್ಲಿ ಕೆಲಸ ನಿರ್ವಹಿಸಿದ್ದು ವಿಶೇಷ.
ಜಾತ್ರೆಯಲ್ಲಿ ಪ್ರಸಾದಕ್ಕಾಗಿ ಅಡುಗೆ ಮಾಡುವುದು, ತರಕಾರಿ ಕತ್ತರಿಸುವುದು, ಊಟ ಬಡಿಸುವುದು ಎಲ್ಲವನ್ನೂ ಭಕ್ತರೇ ಮಾಡುತ್ತಾರೆ. ಸುಮಾರು 25 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ದಾಸೋಹದಲ್ಲಿ ಊಟ ಮಾಡಿದ್ದಾರೆ. ಮಹಾದಾಸೋಹಕ್ಕೆ ನಿನ್ನೆ ತೆರೆ ಬಿದ್ದರೂ ಮಠಕ್ಕೆ ಬರುವ ಭಕ್ತರಿಗೆ ನಿತ್ಯವೂ ದಾಸೋಹ ಸೇವೆ ಇರುತ್ತದೆ.