ಮೈಸೂರು: ಸುತ್ತೂರಿನಲ್ಲಿ ನಡೆಯುತ್ತಿರುವ ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಇಂದಿಗೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಜಾತ್ರೆಯ ಸಂಭ್ರಮ, ವೈಭವ ಮತ್ತಷ್ಟು ಕಳೆಗಟ್ಟಿದೆ. ಮೂರನೇ ದಿನ ಅದ್ದೂರಿಯಾಗಿ ರಥೋತ್ಸವ ನಡೆದಿದ್ದು, ಸಾವಿರಾರು ಭಕ್ತರು ಭಾಗಿಯಾಗಿ ಭಕ್ತಿಭಾವ ಮೆರೆದಿದ್ದಾರೆ. ಜೊತೆಗೆ ಚಿತ್ರಕಲೆ, ಗಾಳಿಪಟ ಸ್ಪರ್ಧೆ, 54ನೇ ದನಗಳ ಜಾತ್ರೆಗೂ ಚಾಲನೆ ಸಿಕ್ಕಿದ್ದು, ಜಾತ್ರೆಯ ವೈಭವದಲ್ಲಿ ರಾಜ್ಯದ ಬೇರೆ ಭಾಗದ ಸಾವಿರಾರು ಭಕ್ತರು ಭಾಗಿಯಾಗಿದ್ದಾರೆ.
ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ದನಗಳ ಜಾತ್ರೆ ಆಯೋಜಿಸಿದ್ದು ಮಂಗಳವಾರ ಚಾಲನೆ ದೊರೆತಿದೆ. ರಾಜ್ಯದ ವಿವಿಧ ಜಿಲ್ಲೆಗಳ ರೈತರು ತಮ್ಮ ರಾಸುಗಳನ್ನು ಜಾತ್ರೆಗೆ ಕರೆತಂದಿದ್ದು, 150ಕ್ಕೂ ಹೆಚ್ಚು ಜೋಡಿ ರಾಸುಗಳು ದನಗಳ ಪರಿಷೆಯಲ್ಲಿ ಭಾಗವಹಿಸಿವೆ. ಹಳ್ಳಿಕಾರ್ ಸೇರಿದಂತೆ ವಿವಿಧ ತಳಿಗಳ ರಾಸುಗಳು ಜಾತ್ರೆಯಲ್ಲಿ ಭಾಗವಹಿಸಿದ್ದು, ಅವುಗಳಲ್ಲಿ 12 ಲಕ್ಷ ಬೆಲೆಯ ಎತ್ತುಗಳು ಪ್ರಮುಖ ಆಕರ್ಷಣೆಯಾಗಿದೆ. ದುಬಾರಿ ಬೆಲೆಯ ಎತ್ತುಗಳನ್ನು ನೋಡಲು ಸಾರ್ವಜನಿಕರು ಮುಗಿ ಬೀಳುತ್ತಿದ್ದಾರೆ. ದನಗಳ ಜಾತ್ರೆಗೆ ಆಗಮಿಸಿ ರಾಸುಗಳನ್ನು ಕಣ್ತುಂಬಿಕೊಂಡು ಸಂಭ್ರಮಿಸುತ್ತಿದ್ದಾರೆ. ಅತ್ಯುತ್ತಮ ರಾಸುಗಳಿಗೆ ಬಹುಮಾನ ನೀಡಲಾಗುತ್ತದೆ.
ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಸ್ತು ಪ್ರದರ್ಶನ, ಕೃಷಿ ಮೇಳ ಎಲ್ಲರ ಗಮನ ಸೆಳೆಯುತ್ತಿದೆ. ವಿವಿಧ ಹೂವು, ತರಕಾರಿ, ಸಸ್ಯಗಳ ಪ್ರದರ್ಶನ ನೋಡಲು ಕೃಷಿ ಮೇಳಕ್ಕೆ ದಿನನಿತ್ಯ ಸಾವಿರಾರು ಮಂದಿ ಲಗ್ಗೆಯಿಡುತ್ತಿದ್ದಾರೆ. ಜೊತೆಗೆ ಕೃಷಿ ಮೇಳದಲ್ಲಿನ ವೈವಿಧ್ಯತೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಸಾವಯವ ಕೃಷಿ, ಭತ್ತ, ಜೋಳ, ಬೆಲ್ಲ ತಯಾರಿಕೆ, ಕೃಷಿ ಬ್ರಹ್ಮಾಂಡ ನೋಡಿ ಖುಷಿಪಟ್ಟಿದ್ದಾರೆ.
ಸುತ್ತೂರು ಜಾತ್ರೆಯಲ್ಲಿ ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಮಾತ್ರವಲ್ಲದೆ ದೇಸಿ ಕ್ರೀಡೆಗಳೂ ವಿಜೃಂಭಿಸುತ್ತಿವೆ. ಕೃಷಿ ಕಾರ್ಯ ಮುಗಿಸಿರುವ ಅಕ್ಕಪಕ್ಕದ ಗ್ರಾಮದ ರೈತರು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಸಂಭ್ರಮಿಸುತ್ತಿದ್ದಾರೆ. ಮಂಗಳವಾರ ನೂರಾರು ಮಂದಿ ಗುಂಡು ಎತ್ತಿ, ತೂಕದ ಚೀಲ ಹೊತ್ತು ಓಡಿ, ಕೆಸರು ಗದ್ದೆ ಓಟದಲ್ಲಿ ಭಾಗವಹಿಸಿ ಸಂಭ್ರಮಿಸಿದ್ದಲ್ಲದೆ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ.
ಇವರ ಆಟ ನೋಡುತ್ತಿದ್ದರು ಶಿಳ್ಳೆ, ಕೇಕೆ, ಚಪ್ಪಾಳೆಗಳೊಂದಿಗೆ ಕ್ರೀಡಾಪಟುಗಳನ್ನು ಹುರಿದುಂಬಿಸಿ ಪ್ರೋತ್ಸಾಹಿಸಿದರು. ಭಾರದ ಗುಂಡುಗಳನ್ನು ಅನಾಯಾಸವಾಗಿ ಎತ್ತಿ ಶಕ್ತಿ ಪ್ರದರ್ಶಿಸಿದರೆ, ಕೆಸರು ಗದ್ದೆಯಲ್ಲಿ ಓಡಿ ತಮ್ಮ ಕಾಲ್ಚಳಕ ಪದರ್ಶಿಸಿದರು. ಇದನ್ನು ನೋಡುತ್ತಾ ಕುಳಿತಿದ್ದವರು ನಿಬ್ಬೆರಗಾದರು. ಸುತ್ತೂರು ಜಾತ್ರಾ ಮಹೋತ್ಸವದ ಮೂರನೇ ದಿನ ಚಿತ್ರಕಲೆ, ಗಾಳಿಪಟ ಸ್ಪರ್ಧೆ, 54ನೇ ದನಗಳ ಜಾತ್ರೆಗೆ ಗಣ್ಯರು ಚಾಲನೆ ನೀಡಿದರು. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪಳನಿಯ ಪುಲಿಪ್ಪನಿ ಸಿದ್ದರ್ ಆಶ್ರಮದ ವಲಾರ್ ಶಿವಾನಂದ ಪುಲಿಪ್ಪನಿ ಪಾತಿರಕರ ಸ್ವಾಮೀಜಿ, ವಿಜಯಪುರದ ಕಾಖಂಡಕಿಯ ಗುರುದೇವಾಶ್ರಮದ ಶಿವಯೋಗೀಶ್ವರ ಸ್ವಾಮೀಜಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಎಂಎಲ್ಸಿ ಎಚ್.ವಿಶ್ವನಾಥ್, ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ್, ಸದಸ್ಯರಾದ ನರೇಂದ್ರ, ಗೀತಾ ಸೇರಿದಂತೆ ಹಲವರು ಭಾಗವಹಿಸಿದ್ದರು.