ಮಧುಗಿರಿ : ಜಮೀನಿನಲ್ಲಿ ಮೇಕೆ ಕಾಯುತ್ತಿದ್ದ ಮಹಿಳೆಯೊಬ್ಬರ ಮೇಲೆ ಹಾಡು ಹಗಲೆ ಕರಡಿಯೊಂದು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ತಾಲೂಕಿನಲ್ಲಿ ಗುರುವಾರ ನಡೆದಿದೆ. ಪುರವರ ಹೋಬಳಿ ಗಿರೇಗೌಡನಹಳ್ಳಿ ಗ್ರಾಮದ ಭಾಗ್ಯಮ್ಮ (36) ಕರಡಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇವರು ಹೊಲದಲ್ಲಿ ಮಧ್ಯಾಹ್ನ ಮೇಕೆ ಮೇಯಿಸುತ್ತಿದ್ದಾಗ ಕರಡಿಯೊಂದು ಏಕಾಏಕಿ ಇವರ ತಲೆ ಮತ್ತು ಕೈಗಳಿಗೆ ದಾಳಿ ಮಾಡಿದ್ದು, ಮಹಿಳೆಯು ಕಿರುಚಿದಾಗ ಸಮೀಪದಲ್ಲೇ ಇದ್ದ ಪತಿ ನಾಗರಾಜು ಮತ್ತಿತರರು ಮಹಿಳೆಯ ರಕ್ಷಣೆಗೆ ದಾವಿಸಿ ಕರಡಿಯನ್ನು ಓಡಿಸಿದ್ದಾರೆ.
ಕರಡಿ ದಾಳಿಯಿಂದ ಮಹಿಳೆಯ ತಲೆಯ ಭಾಗ ಬಹುತೇಕ ಕಿತ್ತು ಬಂದಿದ್ದು, ಕೈಗಳಿಗೂ ಗಂಭೀರವಾಗಿ ಗಾಯಗಳಾಗಿವೆ. ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಉಪವಲಯ ಅರಣ್ಯಾಧಿಕಾರಿ ಮುತ್ತುರಾಜು ಸ್ಥಳಕ್ಕೆ ಭೇಟಿ ನೀಡಿ, ವಿಕ್ಟೋರಿಯಾ ಆಸ್ಪತ್ರೆಗೆ ತೆರಳಲು ಆ್ಯಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು. ಮಹಿಳೆಯ ಚಿಕಿತ್ಸೆಗೆ ನೆರವು ನೀಡಲಾಗುವುದು ಹಾಗೂ ಸರ್ಕಾರದಿಂದ ಸಿಗುವ ಎಲ್ಲಾ ಪರಿಹಾರವನ್ನು ದೊರಕಿಸಿ ಕೊಡಲಾಗುವುದು ಎಂದು ತಿಳಿಸಿದರು.
ಸ್ಥಳದಲ್ಲಿ ಬೋನು ಇಟ್ಟು ಕರಡಿಯನ್ನು ಸೆರೆ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಸುರೇಶ್ ತಿಳಿಸಿದ್ದಾರೆ.